Advertisement
“ರಾಷ್ಟ್ರೀಯತೆ ಹೆಸರಲ್ಲಿ ಅಭಿವ್ಯಕ್ತಿ ದಮನಕ್ಕೆ ಹುನ್ನಾರ’ಮೈಸೂರು: ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದೇಶಭಕ್ತಿ, ಧರ್ಮ ಭಕ್ತಿ, ರಾಷ್ಟ್ರೀಯತೆ ಮೊದಲಾದವುಗಳ ಹೆಸರಲ್ಲಿ ದಮನ ಮಾಡುವ ಪ್ರಯತ್ನ ನಡೆಯುತ್ತಿರುವುದು ಖಂಡನೀಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮಹಾರಾಜ ಕಾಲೇಜು ಮೈದಾನದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾ ಮಂಟಪದಲ್ಲಿ ನಡೆಯುತ್ತಿರುವ 83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
* ಸಾಹಿತ್ಯ ಸಮ್ಮೇಳನಗಳು ಕೇವಲ ಸಾಹಿತ್ಯದ ವಿಷಯಗಳಿಗಷ್ಟೇ ಸೀಮಿತಗೊಳ್ಳದೆ ಕನ್ನಡಿಗರ ಬದುಕಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಚರ್ಚೆಗೆ ಎತ್ತಿಕೊಂಡಿರುವುದು ಸ್ವಾಗತಾರ್ಹ. ಈ ಚರ್ಚೆ- ಸಂವಾದದಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳನ್ನು ಸರ್ಕಾರ ಗಂಭೀರವಾಗಿ ಸ್ವೀಕರಿಸುತ್ತದೆ. ಭಾಷೆ ಬಳಕೆ ಬಗ್ಗೆ ಕೀಳರಿಮೆ ಬೇಡ. ಕನ್ನಡ ಮಾತನಾಡುವುದು ಎಂದರೆ ಅದು ನಮ್ಮ ನಾಡಿನ ಸಂಸ್ಕೃತಿಯನ್ನು ಇನ್ನೊಂದು ಪೀಳಿಗೆಗೆ ದಾಟಿಸುವುದು ಎಂದರ್ಥ.
Related Articles
Advertisement
* ಭಾಷೆ ಎನ್ನುವುದು ಕೇವಲ ಭಾವನಾತ್ಮಕ ವಿಷಯ ಅಲ್ಲ. ಭಾಷೆಯ ವಿಷಯ ಬಂದಾಗ ನಾವು ಭಾವುಕರಾಗುತ್ತೇವೆ, ಇದು ತಪ್ಪಲ್ಲ. ಆದರೆ, ಅದು ಅಷ್ಟಕ್ಕೆ ನಿಲ್ಲಬಾರದು. ನಮ್ಮದು ಕೇವಲ ಮಾತನಾಡುವ ಸರ್ಕಾರ ಅಲ್ಲ, ಕೆಲಸ ಮಾಡುವ ಸರ್ಕಾರ. ಗುರಿ-ದಾರಿ ಎರಡರಲ್ಲಿಯೂ ನಮಗೆ ಸ್ಪಷ್ಟತೆ ಇದೆ.
* ನಾವು ನುಡಿದಂತೆ ನಡೆಯುವವರು. ಕನ್ನಡ ಮತ್ತು ಸಂಸ್ಕೃತಿ ಪರ ಚಟುವಟಿಕೆಗಳಿಗಾಗಿ ನೀಡುತ್ತಿರುವ ಅನುದಾನವನ್ನು 160 ಕೋಟಿ ರೂ.ಗಳಿಂದ 424 ಕೋಟಿ ರೂ.ಗಳಿಗೆ ಹೆಚ್ಚಿಸಿದ್ದೇವೆ. ಕನ್ನಡ ಸಾಹಿತ್ಯ ಪರಿಷತ್ ನಿರ್ಮಿಸಲಿರುವ ಶತಮಾನೋತ್ಸವ ಭವನ ನಿರ್ಮಾಣಕ್ಕಾಗಿ 5 ಕೋಟಿ ರೂ. ವಿಶೇಷ ಅನುದಾನ ನೀಡಿದ್ದೇವೆ. ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವೂ ಸೇರಿದಂತೆ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಿಗೆ 12 ಕೋಟಿ ರೂ. ಅನುದಾನ ನೀಡುತ್ತಿದ್ದೇವೆ.
* ನಾವು ಕನ್ನಡದಲ್ಲಿಯೇ ವ್ಯವಹರಿಸುತ್ತೇವೆ, ಕನ್ನಡ ಪತ್ರಿಕೆ ಹಾಗೂ ಪುಸ್ತಕಗಳನ್ನು ಕೊಂಡು ಓದುತ್ತೇವೆ ಮತ್ತು ಇಂತಹ ಕನ್ನಡತನದ ಸಂಸ್ಕೃತಿಯನ್ನು ನಮ್ಮ ಮಕ್ಕಳಲ್ಲಿಯೂ ಬೆಳೆಸುತ್ತೇವೆ ಎಂದು ಪ್ರತಿಯೊಬ್ಬ ಕನ್ನಡಿಗನೂ ಸಂಕಲ್ಪ ಮಾಡಬೇಕು.
* ಕಳೆದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಕನ್ನಡ ಮತ್ತು ಕನ್ನಡಿಗರಿಗಾಗಿ ನಮ್ಮ ಸರ್ಕಾರ ಮಾಡಿದ ಕೆಲಸದ ಬಗ್ಗೆ ನಿಜಕ್ಕೂ ನನಗೆ ಹೆಮ್ಮೆ ಇದೆ. ಇದನ್ನು ರಾಜ್ಯದ ಸಾಹಿತಿಗಳು, ಚಿಂತಕರು, ಕನ್ನಡಪರ ಹೋರಾಟಗಾರರು ಮೆಚ್ಚಿಕೊಂಡಾಡಿದ್ದಾರೆ.
* ಕೆಪಿಎಸ್‌ಸಿ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಶೇ.5ರಷ್ಟು ಮೀಸಲಾತಿ, ಖಾಸಗಿ ಕ್ಷೇತ್ರದ ಉದ್ಯಮಗಳಲ್ಲಿಯೂ ಸಿ, ಡಿ ವರ್ಗದ ನೌಕರರ ನೇಮಕಾತಿಯಲ್ಲಿ ಕನ್ನಡಿಗರಿಗೆ ನೂರಕ್ಕೆ ನೂರರಷ್ಟು ಉದ್ಯೋಗ ಮೀಸಲಾತಿ, ಸಿಬಿಎಸ್‌ಇ, ಐಸಿಎಸ್‌ಐ ಶಾಲೆಗಳೂ ಸೇರಿದಂತೆ ಎಲ್ಲಾ ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಕನ್ನಡ ಭಾಷೆ ಕಲಿಕೆ ಕಡ್ಡಾಯಗೊಳಿಸುವ ಭಾಷಾ ನೀತಿ ಜಾರಿ, ಗ್ರಾಮೀಣ ಬ್ಯಾಂಕುಗಳ ನೇಮಕಾತಿ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ನಡೆಸಲು ಕ್ರಮ,
ರಾಷ್ಟ್ರೀಕೃತ, ಗ್ರಾಮೀಣ ಮತ್ತು ಷೆಡ್ನೂಲ್ಡ್ ಬ್ಯಾಂಕುಗಳ ಸಿಬ್ಬಂದಿ ಕಡ್ಡಾಯವಾಗಿ ಕನ್ನಡ ಕಲಿಯುವಂತೆ ಸುತ್ತೋಲೆ, ಚಲನಚಿತ್ರ ಮಂದಿರಗಳಲ್ಲಿ ಕನ್ನಡ ಸಿನಿಮಾ ಪ್ರದರ್ಶನ ಕಡ್ಡಾಯಗೊಳಿಸಿ ಆದೇಶ, ಗುಣಮಟ್ಟದ 125 ಕನ್ನಡ ಸಿನಿಮಾಗಳಿಗೆ ಸಹಾಯಧನ, ಕನ್ನಡೇತರರಿಗೆ ಕನ್ನಡ ಕಲಿಸಲು ಬೆಂಗಳೂರು ನಗರದಲ್ಲಿ ಕನ್ನಡ ಕಲಿಕಾ ಕೇಂದ್ರಗಳ ಪ್ರಾರಂಭ. ಇವು ನಮ್ಮ ಸರ್ಕಾರ ಕೈಗೊಂಡಿರುವ ಪ್ರಮುಖ ಕನ್ನಡ ಪರ ನಿರ್ಧಾರಗಳು.