“ಇಡೀ ಚಿತ್ರದಲ್ಲೊಂದು ವಿಶೇಷತೆ ಇದೆ. ಅದು ಬೇರೇನೂ ಅಲ್ಲ, ಕಾಗೆ…’
– ಅರೇ, ಚಿತ್ರದಲ್ಲಿ ಕಾಗೆ ಹೈಲೈಟ್ ಆಗಿದೆಯಾ? ಈ ಪ್ರಶ್ನೆ ಎದುರಾಗೋದು ಸಹಜ. ಹೀಗೆ ಕಾಗೆ ಕುರಿತು ಹೇಳಿಕೊಂಡಿದ್ದು ನಿರ್ದೇಶಕ ಕಮ್ ನಿರ್ಮಾಪಕ ನಂದಳಿಕೆ ನಿತ್ಯಾನಂದ ಪ್ರಭು. ಅವರು ಹೇಳಿದ್ದು, ತಮ್ಮ ನಿರ್ದೇಶನದ ಮೊದಲ ಚಿತ್ರ “5 ಅಡಿ 7 ಅಂಗುಲ’ ಬಗ್ಗೆ. ಈ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಮಾ.13 ರಂದು ರಾಜ್ಯಾದ್ಯಂತ ಬಿಡುಗಡೆ ಕಾಣುತ್ತಿದೆ. ಸಿಂಗಲ್ ಥಿಯೇಟರ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ನಿರ್ದೇಶಕರು, ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರ ಬಿಡುಗಡೆ ಮಾಡಲು ಮುಂದಾಗಿದ್ದಾರೆ.
ತಮ್ಮ ಚಿತ್ರದ ಕುರಿತು ಮಾತನಾಡಿದ ನಂದಳಿಕೆ ನಿತ್ಯಾನಂದ ಪ್ರಭು, “ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೊಂದಿದೆ. ಕಾಗೆಯ ಪಾತ್ರ ಇಲ್ಲಿ ಮಹತ್ವದ್ದಾಗಿದೆ. ಆದರೆ, ಅದು ಹೇಗೆ ಎಂಬುದನ್ನು ಸಿನಿಮಾದಲ್ಲೇ ಕಾಣಬೇಕು. ಕನ್ನಡಕ್ಕೆ ವಿಭಿನ್ನ ಕಥೆ ಜೊತೆಗೆ, ಹೊಸಬಗೆಯ ನಿರೂಪಣೆಯೊಂದಿಗೆ ಈ ಚಿತ್ರ ಮಾಡಿದ್ದೇವೆ. ಬಹುತೇಕ ಹೊಸಬರೇ ಸೇರಿ ಮಾಡಿರುವ ಸಿನಿಮಾ ಇದು. ಇಲ್ಲಿ ಕಥೆ, ಚಿತ್ರಕಥೆ, ಎಡಿಟಿಂಗ್, ಕ್ಯಾಮೆರಾ ಕೆಲಸ ಪ್ರತಿಯೊಂದರಲ್ಲೂ ಹೊಸತನವಿದೆ. ಅದನ್ನು ಹೇಳುವುದಕ್ಕಿಂತ ಸಿನಿಮಾದಲ್ಲೇ ಕಾಣಬೇಕು. 1.54 ಗಂಟೆ ಅವಧಿಯ ಚಿತ್ರದಲ್ಲಿ ಲವ್ ಇದೆ, ಎಮೋಷನ್ಸ್ ಇದೆ. ಹಾಡು ಇತ್ಯಾದಿ ಅಂಶಗಳೂ ಇವೆ. ಬೆಂಗಳೂರು, ಮೈಸೂರು, ಶುಂಠಿಕೊಪ್ಪ, ಕೂರ್ಗ್ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ’ ಎಂದು ವಿವರ ಕೊಟ್ಟರು ನಿರ್ದೇಶಕರು.
ಚಿತ್ರಕ್ಕೆ ರಾಸಿಕುಮಾರ್ ಹೀರೋ. ಅವರು ಈ ಚಿತ್ರಕ್ಕೆ ಆಡಿಷನ್ ಮೂಲಕ ಆಯ್ಕೆಯಾದ ಬಗ್ಗೆ ಹೇಳಿಕೊಂಡರು. ಕಥೆಯಲ್ಲಿ ಗಟ್ಟಿತನವಿದೆ. ಚಿತ್ರಕಥೆಯಲ್ಲೂ ಬಿಗಿಯಾದ ಹಿಡಿತವಿದೆ. ನನಗಂತೂ ಹೊಸ ಅನುಭವ ಆಗಿದೆ. ನಾನಿಲ್ಲಿ ಅಜಯ್ ಎಂಬ ಪಾತ್ರ ಮಾಡಿದ್ದು, ಅದೊಂದು ಉದ್ಯಮಿಯ ಪಾತ್ರ. ಹೆಚ್ಚು ಹುಡುಕಾಟದ ಪಾತ್ರವದು. ಯಾರಿಗಾಗಿ, ಯಾತಕ್ಕಾಗಿ ಹುಡುಕಾಟ ನಡೆಯುತ್ತೆ ಅನ್ನೋದು ಸಸ್ಪೆನ್ಸ್’ ಎಂದರು ರಾಸಿಕುಮಾರ್.
ಭುವನ್ ನಾರಾಯಣ್ ಕೂಡ ಇಲ್ಲಿ ನಟಿಸಿದ್ದು, ಅವರಿಗೆ ಇದು ಮೊದಲ ಸಿನಿಮಾವಂತೆ. “ನಾನಿಲ್ಲಿ ಪ್ರಮುಖ ಪಾತ್ರ ಮಾಡಿದ್ದೇನೆ. ಸಿನಿಮಾದಲ್ಲಿ ಕೆಲಸ ಮಾಡಿದ್ದು ಮರೆಯದ ಅನುಭವ. ನಾಲ್ಕೈದು ತಿಂಗಳು ಒಂದು ರೀತಿ ಗುರುಕುಲದಲ್ಲಿ ಕೆಲಸ ಮಾಡಿದ ಅನುಭವ ಆಗಿದೆ. ನಾನು ಕಿರಣ್ ಎಂಬ ಪಾತ್ರ ಮಾಡಿದ್ದೇನೆ’ ಎಂದರು ಅವರು.
ಹೊಸ ನಟಿ ಅದಿತಿಗೂ ಇದು ಕನ್ನಡದಲ್ಲಿ ಮೊದಲ ಅನುಭವ. ಹಿಂದೆ ತಮಿಳು ಚಿತ್ರ ಮಾಡಿದ್ದಾರೆ. “ಹೊಸಬರ ಪ್ರಯತ್ನವಿದು. ನಿಮ್ಮೆಲ್ಲರ ಸಹಕಾರ ಇರಲಿ’ ಎಂದಷ್ಟೇ ಹೇಳಿದರು ಅದಿತಿ. ಚಿತ್ರದಲ್ಲಿ ಸತ್ಯನಾಥ್, ಪವನ್, ವೀಣಾ ಸುಂದರ್, ಚಕ್ರವರ್ತಿ ದಾವಣಗೆರೆ, “ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮಹೆಂದರ್ ಪ್ರಸಾದ್ ಇತರರು ಇದ್ದಾರೆ. ಚಿತ್ರಕ್ಕೆ ರುದ್ರಮುನಿ ಬೆಳಗೆರೆ ಛಾಯಾಗ್ರಹಣವಿದೆ. ರಾಘವೇಂದ್ರ ಥಾನೆ ಸಂಗೀತವಿದೆ.