Advertisement

ಕೋಟಿ ಚೆನ್ನಯ ಕಂಬಳ ಸಮಾರೋಪ 

10:14 AM Nov 13, 2017 | Team Udayavani |

ಮೂಡಬಿದಿರೆ: ಇಲ್ಲಿನ ಕಡಲಕೆರೆಯ ಕೋಟಿ ಚೆನ್ನಯ ಕಂಬಳವು ರವಿವಾರ ಬೆಳಗ್ಗೆ ಸಮಾರೋಪಗೊಂಡಿತು. ಶನಿವಾರ ಬೆಳಗ್ಗೆ 8.30ಕ್ಕೆ ಆರಂಭಿಕ ವಿಧಿಗಳ ಬಳಿಕ 10 ಗಂಟೆಗೆ ಕಂಬಳದ ಸ್ಪರ್ಧೆಗಳು ಪ್ರಾರಂಭವಾಗಿ (23 ಗಂಟೆ 49 ನಿಮಿಷಗಳಲ್ಲಿ) ರವಿವಾರ ಮುಂಜಾನೆ 8.49ಕ್ಕೆ ಬಹುಮಾನ ವಿತರಣೆಯೂ ಒಳಗೊಂಡಂತೆ ಮುಕ್ತಾಯವಾಯಿತು (ಇದರಲ್ಲಿ ಸ್ಪರ್ಧೆಗಳಿಗಾಗಿಯೇ ವಿನಿಯೋಗವಾದದ್ದು 22ಗಂಟೆ 30 ನಿಮಿಷಗಳು). 

Advertisement

15 ವರ್ಷಗಳಲ್ಲಿ ಕಂಡರಿಯದ ಜನಸ್ತೋಮ ಈ ಬಾರಿ ಕಂಡಿತು. ಕಂಬಳ ಸ್ಥಾನ ಒಂಟಿಕಟ್ಟೆಯನ್ನು ಸಂಪರ್ಕಿಸುವ ನಾಲ್ಕೂ ರಸ್ತೆಗಳು ವಸ್ತುಶಃ ಬ್ಲಾಕ್‌ ಆಗಿ ಸುಮಾರು ಅರ್ಧ ತಾಸು ವಾಹನಗಳು ನಿಂತಲ್ಲೇ ಪರದಾಡುವಂತಾಯಿತು. ಮೂಡಬಿದಿರೆ-ನಾಗರಕಟ್ಟೆ, ಅಲಂಗಾರು -ಒಂಟಿಕಟ್ಟೆ, ಪುತ್ತಿಗೆ -ಒಂಟಿಕಟ್ಟೆ, ಪುತ್ತಿಗೆ ದ್ವಾರ- ಒಂಟಿಕಟ್ಟೆ ಹೀಗೆ ಎಲ್ಲ ಕಡೆ ರಸ್ತೆಯ ಎರಡೂ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಲಾಗಿತ್ತು.

ಪಾರ್ಕಿಂಗ್‌ಗೆ ಸಾಕಷ್ಟು ಅವಕಾಶ ಕಲ್ಪಿಸಿದ್ದರೂ ಎಲ್ಲ ನಿರೀಕ್ಷೆ ಮೀರಿ ಟ್ರಾಫಿಕ್‌ಜಾಂ ಆಯಿತು. ಲೇಸರ್‌ ಬೀಮ್‌ ನೀಡಿದ ಕರಾರುವಕ್ಕಾದ ಫಲಿತಾಂಶದಿಂದಾಗಿ ಯಾವುದೇ ಗೊಂದಲ ಕಂಡುಬರಲಿಲ್ಲ. ಯಾವ ಕರೆಯ ಕೋಣ ಗುರಿ ಮುಟ್ಟಿದೆ, ಅದಕ್ಕೆ ಎಷ್ಟು ಸಮಯ ತೆಗೆದುಕೊಂಡಿದೆ ಮುಂತಾದ ಎಲ್ಲವೂ ಪರದೆಯಲ್ಲಿ ತತ್‌ಕ್ಷಣವೇ ಮೂಡಿ ಬರುತ್ತಿತ್ತು. ಸಂಪೂರ್ಣ ಕಂಬಳ ಬೆತ್ತದ ಪ್ರಯೋಗವೇ ಇಲ್ಲದೆಯೇ ಅಹಿಂಸಾತ್ಮಕ ಕಂಬಳ ನಡೆಸಲು ಸಾಧ್ಯವಿದೆ ಎಂದು ಈ ಕಂಬಳ ಸಾರಿ ಹೇಳಿದೆ.

ಊಟ, ಆಟ
10,000ಕ್ಕೂ ಅಧಿಕ ಅಭಿಮಾನಿಗಳಿಗೆ ಗಂಜಿಯೊಂದಿಗೆ ಪಾಯಸದೂಟ, ಅತಿಥಿಗಳು, ಆಹ್ವಾನಿತರು, ಸ್ವಯಂಸೇವಕರು, ಓಟದ ಕೋಣಗಳ ಪರಿವಾರದವರಿಗೆ ಮುಂಜಾನೆಯಿಂದ ತಡರಾತ್ರಿಯವರೆಗೂ ಸತ್ಕಾರ ನಡೆದೇ ಇತ್ತು. ಜಾತಿ ಮತ ಭೇದವಿಲ್ಲದೆ ಸೇರಿದ ಜನಸಂದಣಿ ಅಪಾರವಿತ್ತು. ಮಹಿಳೆಯರೂ ಅತಿ ಉತ್ಸಾಹದಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದರು. ಒಟ್ಟಾರೆ ಬಂದು ನಿಂತವರು, ಬಂದು ಹೋದವರು ಎಂದು ಲೆಕ್ಕಿಸಿದರೂ ಹತ್ತಿರ ಹತ್ತಿರ ಮುಕ್ಕಾಲು ಲಕ್ಷದಷ್ಟು ಮಂದಿ ಈ ಕಂಬಳಕ್ಕೆ ಸಾಕ್ಷಿಯಾಗಿದ್ದಾರೆ. 

ಸಂತೆ, ಹೊಟೇಲ್‌ ಇತ್ಯಾದಿ ವ್ಯಾಪಾರ ಬಹಳ ಜೋರಾಗಿ ನಡೆದಿತ್ತು. ಹತ್ತಿರದಲ್ಲೇ ಇರುವ ಅಯ್ಯಪ್ಪ ಗುಡಿಯ ಆವರಣದಲ್ಲಿ ಕೆರೆಕಾಡು ಮಕ್ಕಳ ಮೇಳದವರು ಎಂದಿನಂತೆ ‘ಶ್ರೀ ದೇವೀ ಮಹಾತ್ಮೆ’ ಯಕ್ಷಗಾನ ಬಯಲಾಟ ಪ್ರದರ್ಶಿಸಿದರು. ಅಲ್ಲೂ ಕಿಕ್ಕಿರಿದ ಪ್ರೇಕ್ಷಕರಿದ್ದರು. ಅನಿಶ್ಚಿತ ವಾತಾವರಣದಿಂದಾಗಿ 137 ಜತೆ ಕೋಣಗಳು ಭಾಗವಹಿಸಿರುವುದು ಎರಡು ವರ್ಷದ ಹಿಂದಿನ ಸಂಖ್ಯೆ ಗಮನಿಸಿದರೆ ಕೊಂಚ ಕಡಿಮೆ ಎಂದು ಕಂಡರೂ ಜನಸಾಗರ ಹರಿದುಬಂದ ಬಗೆ ಈ ಜಾನಪದ ಕ್ರೀಡೆಯ ಬಗ್ಗೆ ಜನರಿಗೆ ಮೇರೆ ಮೀರಿದ ಉತ್ಸಾಹ, ಅಭಿಮಾನವಿದೆ ಎಂಬುದನ್ನು ಸಾಬೀತುಪಡಿಸಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next