ಬ್ರಹ್ಮಾವರ: ವಿದ್ಯಾರ್ಥಿ ಜೀವನದಿಂದಲೇ ಪ್ರಾಮಾಣಿಕತೆ, ಶಿಸ್ತು, ಸಮಯ ಪಾಲನೆ ಅಳವಡಿಸಿಕೊಂಡಲ್ಲಿ ಮುಂದಿನ ಭವಿಷ್ಯ ಉತ್ತಮವಾಗಿರುವುದು ಎಂದು ಬ್ರಹ್ಮಾವರ ಕ್ರಾಸ್‌ಲ್ಯಾಂಡ್ ಕಾಲೇಜಿನ ಹಳೆ ವಿದ್ಯಾರ್ಥಿನಿ ಹಾಗೂ ಶಿರ್ತಾಡಿ ಭುವನಜ್ಯೋತಿ ವಸತಿ ಶಾಲೆಯ ಸಹಸಂಸ್ಥಾಪಕಿ ಲತಾ ಆಚಾರ್ಯ ಹೇಳಿದರು.
ಅವರು ಕ್ರಾಸ್‌ಲ್ಯಾಂಡ್ ಕಾಲೇಜಿನಲ್ಲಿ ಮೂರು ದಿನಗಳ ಕಾಲ ಪ್ರಥಮ ಬಿ.ಎ. ಮತ್ತು ಬಿ.ಕಾಂ. ವಿದ್ಯಾರ್ಥಿಗಳಿಗೆ ನಡೆಯುವ ಪುನಶ್ಚೇತನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೆಳೆಯಬೇಕಾದರೆ ಪರಿಪೂರ್ಣವಾದ ವಾತಾವರಣದ ಸೃಷ್ಟಿಯಾಗಬೇಕು. ಜೀವನದ ಕಹಿ ಘಟನೆಗಳು ನಮ್ಮನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಮಾನವೀಯತೆ ಗುಣಗಳನ್ನು ಬೆಳೆಸಿಕೊಂಡು ವಿದ್ಯಾರ್ಥಿ ಜೀವನವನ್ನು ಸುಂದರಗೊಳಿಸಿಕೊಳ್ಳುವಂತೆ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪ್ರಾಂಶುಪಾಲ ಪ್ರೊ. ಸ್ಯಾಮುಯೆಲ್ ಕೆ. ಸ್ಯಾಮುಯೆಲ್ ಅಧ್ಯಕ್ಷತೆ ವಹಿಸಿ, ಕಾಲೇಜಿನ ನಿಯಮಗಳನ್ನು ವಿವರಿಸಿದರು.ಪ್ರಾಧ್ಯಾಪಕ ಡಾ| ರಾಬರ್ಟ್ ಕ್ಲೆ ವ್ ಪುನಶ್ಚೇತನ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ ಸ್ವಾಗತಿಸಿದರು.ಕೆ.ಕೆ. ಪ್ರೊ| ಜಾನ್‌ಸನ್ ಜೇಕಬ್, ಪ್ರೊ| ಎಲಿಜಬೆತ್ ರಾಯ್, ಪ್ರೊ| ರಿಬೂ ಸ್ಯಾಮುಯೆಲ್, ಉಪನ್ಯಾಸಕಿ ಜ್ಯೋತಿ, ಗ್ರಂಥ ಪಾಲಕಿ ಶಾಂಭವಿ, ಉಪನ್ಯಾಸಕರಾದ ಸರಿತಾ, ಸ್ಮಿತಾ ಮೈಪಾಡಿ, ಕಚೇರಿ ಸಹಾಯಕರಾದ ಮಥಾಯಿ ಟಿ.ಎಸ್. ಮತ್ತು ಅಲ್ಬರ್ಟ್ ಮೊಂಥೆರೊ ಅವರು ವ್ಯಕ್ತಿತ್ವ ವಿಕಸನ, ವಿದ್ಯಾರ್ಥಿ ಜೀವನದಲ್ಲಿ ಕ್ರಿಯಾಶೀಲತೆ, ಪದವಿ ತರಗತಿಗಳ ಮಹತ್ವ, ವಿಶ್ವವಿದ್ಯಾನಿಲಯದ ಸೌಲಭ್ಯಗಳು, ವಿವಿಧ ಇಲಾಖೆಗಳಿಂದ ವಿದ್ಯಾರ್ಥಿಗಳಿಗೆ ಸಿಗುವ ಪ್ರೋತ್ಸಾಹ ಧನ, ವಿದ್ಯಾರ್ಥಿವೇತನ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.