ಸುಳ್ಯ: ಸುಳ್ಯ ನಗರದ ಓಡಬಾಯಿ ಎಂಬಲ್ಲಿಂದ ಅಜ್ಜಾವರ ಗ್ರಾಮದ ದೊಡ್ಡೇರಿ ಪ್ರದೇಶವನ್ನು ಸಂಪರ್ಕಿಸಲು ಪಯಸ್ವಿನಿ ಹೊಳೆಗೆ ನಿರ್ಮಿಸಿರುವ ತೂಗು ಸೇತುವೆಯು ಇಂದು ಸಮರ್ಪಕ ನಿರ್ವಹಣೆ ಇಲ್ಲದೆ ಕೆಲವು ಭಾಗಗಳು ಶಿಥಿಲಗೊಂಡಿದ್ದು, ಅಪಾಯವನ್ನು ಆಹ್ವಾನಿಸುವಂತಿದೆ.
ಸುಮಾರು 18 ವರ್ಷಗಳ ಹಿಂದೆ ಸುಳ್ಯ ರೋಟರಿ ಸಂಸ್ಥೆ ಹಾಗೂ ಇನ್ಫೋಸಿಸ್‌ನ ವಿಶೇಷ ಅನುದಾನ ಹಾಗೂ ಸಾರ್ವಜನಿಕರ ಸಹಕಾರದಲ್ಲಿ ಗಿರೀಶ್ ಭಾರಧ್ವಾಜ್ ಅವರು ಸುಳ್ಯದ ಅಗ್ನಿಶಾಮಕ ಠಾಣೆ ಬಳಿ ಪಯಸ್ವಿನಿ ನದಿಗೆ ತೂಗುಸೇತುವೆ ನಿರ್ಮಿಸಲಾಗಿತ್ತು. ಇದಾದ ಬಳಿಕ ದಿನನಿತ್ಯ ನೂರಾರು ಜನರು ಪ್ರಯೋಜನ ಪಡೆಯುತ್ತಿದ್ದಾರೆ.
ಅಂದು ಸಂಘ-ಸಂಸ್ಥೆ, ಸಾರ್ವಜನಿಕರ ಸಹಕಾರದಲ್ಲಿ ನಿರ್ಮಾಣಗೊಂಡ ತೂಗುಸೇತುವೆ ಇಂದು ನಿರ್ವಹಣೆ ಕೊರತೆಯಿಂದ ಬಳಲುತ್ತಿದೆ. ತೂಗುಸೇತುವೆಯ ಕಬ್ಬಿಣದ ನಟ್, ಬೋಲ್ ಅಲ್ಲಲ್ಲಿ ತುಕ್ಕು ಹಿಡಿದು ಶಕ್ತಿ ಕಳಕೊಂಡಿದೆ. ಹೆದ್ದಾರಿ ಭಾಗದ ಕೆಳ ಭಾಗದಿಂದ ಅಲ್ಪ ದೂರದ ವರೆಗೆ ಎರಡು ಬದಿಯ ತಡೆ ಬೇಲಿ ಕಿತ್ತು ಹೋಗಿ ಸಂಚಾರವೇ ಅಪಾಯ ಎಂಬಂತಿದೆ.
ಈ ತೂಗುಸೇತುವೆ ಅಜ್ಜಾವರ ಗ್ರಾಮ ಪಂಚಾಯತ್ ಹಾಗೂ ಸುಳ್ಯ ನಗರ ಪಂಚಾಯತ್ ವ್ಯಾಪ್ತಿಗೆ ಹೊಂದಿಕೊಂಡಿದ್ದು, ಎರಡೂ ಸ್ಥಳೀಯಾಡಳಿಗಳು ಜತೆಯಾಗಿ ನಿರ್ವಹಣೆ ಮಾಡಲಿ ಎಂಬ ಸಲಹೆಗಳು ವ್ಯಕ್ತವಾಗಿದೆ.
ಎಚ್ಚರಿಕೆ ಫಲಕ
ತೂಗುಸೇತುವೆಯ ಸದ್ಯದ ಸ್ಥಿತಿ ಅರಿತ ಸುಳ್ಯದ ನ. ಪಂ. ಎಚ್ಚರಿಕೆ ಫಲಕವನ್ನು ಅಳವಡಿಸಿ ತೂಗು ಸೇತುವೆಯ ತಡೆಬೇಲಿಯ ಕೆಲ ಭಾಗಗಳು ಶಿಥಿಲ ಗೊಂಡಿದ್ದು, ಪಾದಚಾರಿಗಳು ಜಾಗ ರೂಕತೆಯಿಂದ ಸಂಚರಿಸಬೇಕು. ಚಿಕ್ಕ ಮಕ್ಕಳು ಪೋಷಕರೊಂದಿಗೆ ಮಾತ್ರ ಸಂಚರಿಸುವುದು ಎಂದು ತಿಳಿಸಲಾಗಿದೆ.