ಜೈಪುರ: ಗಡಿಯಾಚೆಗಿನ ಪ್ರೇಮ ಕಥೆ ಮುಂದುವರಿದಿದೆ. ಪ್ರಿಯಕರನಿಗಾಗಿ ಪಾಕ್ ನಿಂದ ಭಾರತಕ್ಕೆ ಬಂದ ಸೀಮಾ ಹೈದರ್ ಕಥೆ ಒಂದೆಡೆಯಾದರೆ, ಪ್ರಿಯಕರನಿಗಾಗಿ ಭಾರತದಿಂದ ಪಾಕ್ ತೆರಳಿದ ಅಂಜು ಕಥೆ ಒಂದು ಬಗೆಯದಾದರೆ. ಇಲ್ಲೊಂದು ಇಂಡೋ – ಪಾಕ್ ವಧು – ವರರ ವಿವಾಹ ಸರಳವಾಗಿ ನೆರವೇರಿದೆ.
ರಾಜಸ್ಥಾನದ ಜೋಧ್‌ಪುರ ಮೂಲದ ಅರ್ಬಾಜ್ ಪಾಕಿಸ್ತಾನದ ಮೂಲದ ವಧು ಅಮೀನಾ ಅವರೊಂದಿಗೆ ವಿವಾಹವಾಗಿದ್ದಾರೆ. ಎರಡೂ ಕುಟುಂಬದವರ ಸಹಮತದೊಂದಿಗೆ ಈ ವಿವಾಹ ನೆರವೇರಿದೆ. ವಿಶೇಷವೆಂದರೆ ವರ್ಚುವಲ್ ಮೂಲಕ ( ವಿಡಿಯೊ ಕಾಲ್) ವಿವಾಹ ಕಾರ್ಯಕ್ರಮ ನೆರವೇರಿದೆ.
ಲೈವ್ ಹಿಂದೂಸ್ತಾನ್ ವರದಿಯ ಪ್ರಕಾರ ಅರ್ಬಾಜ್ ಹಾಗೂ ಅಮೀನಾ ಅವರ ಕುಟುಂಬ ಸಂಬಂಧಿಗಳಾಗಿದ್ದಾರೆ. ಈ ಹಿಂದೆ ಅರ್ಬಾಜ್ ಅವರ ಕುಟುಂಬದ ವ್ಯಕ್ತಿಯೊಬ್ಬರು ಪಾಕಿಸ್ತಾನದಲ್ಲಿರುವ ಅಮೀನಾ ಅವರ ಕುಟುಂಬದ ಯುವತಿಯನ್ನು ಮದುವೆಯಾಗಿದ್ದಾರೆ.
“ನನ್ನ ಮೊಮ್ಮಗ ಚಾರ್ಟಡ್ ಅಕೌಂಟೆಂಟ್ ಆಗಿದ್ದಾರೆ. ಪಾಕ್ ಮೂಲದ ಯುವತಿಯನ್ನು ವಿವಾಹವಾಗಿರುವ ಅವರ ಸಂತೋಷವನ್ನು ಅಮೀನಾ ಅವರ ಕುಟುಂಬದವರು ನೋಡಿ, ನನ್ನ ಮಗನನ್ನು ಅಮೀನಾ ಅವರಿಗೆ ಕೊಟ್ಟು ಮದುವೆ ಮಾಡಿಸಿ ಎಂದು ಕೇಳಿಕೊಂಡಿದ್ದಾರೆ. ಅದಕ್ಕೆ ನಾವು ಒಪ್ಪಿ, ಈ ಮದುವೆಯನ್ನು ಮಾಡಿಸಿದ್ದೇವೆ” ಎಂದು ಅರ್ಬಾಜ್ ಅವರ ತಂದೆ ಮೊಹಮ್ಮದ್ ಅಫ್ಜಲ್ ಅವರು ಹೇಳುತ್ತಾರೆ.
ಅರ್ಬಾಜ್ ಅವರ ಮದುವೆ ದಿಬ್ಬಣ ಜೋಧ್‌ಪುರದ ಓಸ್ವಾಲ್ ಸಮಾಜ ಭವನಕ್ಕೆ ತೆರಳಿ, ಅಲ್ಲಿ ವರ್ಚುವಲ್ ಮೂಲಕ ಪಾಕ್ ನಲ್ಲಿರುವ ಅಮೀನಾ ಅವರೊಂದಿಗೆ ನಿಕಾ ಮಾಡಿಕೊಂಡಿದ್ದಾರೆ. ಅತ್ತ ಕಡೆಯ ಮೌಲ್ವಿ, ಇತ್ತ ಗಂಡಿನ ಕಡೆಯ ಮೌಲ್ವಿಗಳು ವಿವಾಹವನ್ನು ನೆರವೇರಿಸಿದ್ದಾರೆ.
ಈ ವರ್ಚುವಲ್ ಮದುವೆಗೂ ಮುನ್ನ ಅಮೀನಾ ಅವರು ವೀಸಾಕ್ಕಾಗಿ ಸರ್ಜಿ ಸಲ್ಲಿಸಿದ್ದರು. ಆದರೆ ಅದು ವಿಫಲವಾದ ಕಾರಣ. ವರ್ಚುವಲ್ ವಿವಾಹ ನೆರವೇರಿದೆ. ನಾನು ಪಾಕ್ ಗೆ ತೆರಳಿ ವಿವಾಹವಾಗಿಲ್ಲ. ಹಾಗೆ ಮಾಡಿದ್ದರೆ ಅದು ಮಾನ್ಯ ಆಗುತ್ತಿರಲಿಲ್ಲ. ನಮ್ಮ ವಿವಾಹದ ಪ್ರಮಾಣ ಪತ್ರವನ್ನು ಮೌಲ್ವಿಗಳಿಂದ ಪಡೆದುಕೊಂಡಿದ್ದೇವೆ. ಅಮೀನಾ ಅವರ ಭಾರತೀಯ ವೀಸಾ ಆದ ಬಳಿಕ ನಾವು ಮತ್ತೆ ಮರುಮದುವೆ ಆಗಲಿದ್ದೇವೆ ಎಂದು ವೃತ್ತಿಯಲ್ಲಿ ಡಿಟಿಪಿ ಆಪರೇಟರ್ ಆಗಿರುವ ಅರ್ಬಾಜ್ ಹೇಳುತ್ತಾರೆ.