ವಾಷಿಂಗ್ಟನ್: “ನಮ್ಮ ವಿರುದ್ಧದ ಗಡಿ ಭಯೋತ್ಪಾದನೆಯಿಂದ ಅನಿವಾರ್ಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂದು ಶನಿವಾರ (ಸೆ.28) ವಿಶ್ವಸಂಸ್ಥೆಯಲ್ಲಿ ಭಾರತ ಪಾಕಿಸ್ತಾನಕ್ಕೆ ನೇರ ಎಚ್ಚರಿಕೆಯನ್ನು ನೀಡಿದೆ.
ನೆರೆಯ ದೇಶ ಭಯೋತ್ಪಾದನೆಯಲ್ಲಿ ತೊಡಗಿಕೊಂಡಿದ್ದರಿಂದ ಪಾಕಿಸ್ತಾನದ ಜತೆ ಯಾವುದೇ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.
ವಿಶ್ವಸಂಸ್ಥೆಯ ಉನ್ನತ ಮಟ್ಟದ ವಾರ್ಷಿಕ ಸಭೆಯಲ್ಲಿ ಪಾಕಿಸ್ತಾನ ಪ್ರಧಾನಿ ಮುಹಮ್ಮದ್ ಷೆಹಬಾಝ್ ಶರೀಫ್ ಭಾರತದ ಮೇಲೆ ಗೂಬೆ ಕೂರಿಸಿ ಮಾತನಾಡಿದ್ದಕ್ಕೆ ಪ್ರತಿಯಾಗಿ ಭಾರತದ ಮೊದಲ (ವಿಶ್ವಸಂಸ್ಥೆ) ಕಾರ್ಯದರ್ಶಿ ಭಾವಿಕಾ ಮಂಗಳಾನಂದನ್ ಕಠಿನ ಸಂದೇಶವನ್ನು ರವಾನಿಸಿರುವುದಾಗಿ ವರದಿ ತಿಳಿಸಿದೆ.
ಪಾಕಿಸ್ತಾನ ಮೊದಲು ಭಾರತದ ವಿರುದ್ಧದ ಗಡಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದನ್ನು ನಿಲ್ಲಿಸಬೇಕು. ಅಲ್ಲದೇ ಭಯೋತ್ಪಾದನೆಯಿಂದ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪಾಕ್ ಅರಿತುಕೊಳ್ಳಬೇಕು ಎಂದು ಭಾವಿಕಾ ತೀಕ್ಷ್ಣ ತಿರುಗೇಟು ನೀಡಿದ್ದಾರೆ.
ಮಂಗಳಾನಂದನ್ 2015ರ ಬ್ಯಾಚ್ ನ ಐಎಫ್ ಎಸ್ (Indian Foreign Service) ಅಧಿಕಾರಿ, ದೆಹಲಿ ಐಐಟಿಯಿಂದ ಎಂಟೆಕ್ ಪದವಿ ಪಡೆದಿದ್ದು, ವಿಶ್ವಸಂಸ್ಥೆಯಲ್ಲಿ ಭಯೋತ್ಪಾದನೆ ನಿಗ್ರಹ ವಿಷಯದ ಕುರಿತು ಭಾರತದ ಮೊದಲ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.