Advertisement

ಕೆರೆಯನ್ನು ನಿರ್ಮಿಸದೇ ಕೋಟ್ಯಂತರ ರೂಪಾಯಿ ವಂಚನೆ

05:38 PM Aug 05, 2021 | Team Udayavani |

ಮಸ್ಕಿ: ಪಹಣಿಯಲ್ಲಿರುವುದು ಸರಕಾರಿ ಜಮೀನು ಅಂದರೆ ಅಸಲಿಗೆ ಇದು ಕಂದಾಯ ಇಲಾಖೆ ಆಸ್ತಿ. ಆದರೆ ಪಂಚಾಯಿತಿ ದಾಖಲೆಯಲ್ಲಿ ಕೆರೆ. ಈ ಕೆರೆ ಹೆಸರಲ್ಲಿ ಕೋಟ್ಯಂತರ ರೂ. ಹಣ ಎತ್ತುವಳಿ. ಇಂತಹ ಅಚ್ಚರಿ ಪ್ರಕರಣ ಬೆಳಕಿಗೆ ಬಂದಿದ್ದು, ತಾಲೂಕಿನ ಪಾಮನಕಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಲ್ಕರಾಗಿ ಗ್ರಾಮದಲ್ಲಿ.

Advertisement

ಸರ್ವೇ ನಂಬರ್‌ 102ರಲ್ಲಿ 11.22 ಎಕರೆ, ಸರ್ವೇ ನಂ.98ರಲ್ಲಿ 6.6 ಎಕರೆ ಸರಕಾರಿ ಗೆ„ರಾಣಿ ಭೂಮಿ ಇದೆ. ಆದರೆ ಇದೇ ಸರ್ವೇ ನಂಬರ್‌ನ ಜಮೀನು ಪಂಚಾಯಿತಿ ದಾಖಲೆಯಲ್ಲಿ ಸರಕಾರಿ ಕೆರೆಯಾಗಿ ಬದಲಾಗಿದೆ. ಮಸ್ಕಿ ತಹಸೀಲ್ದಾರ್‌ ಕವಿತಾ ಆರ್‌. ಸ್ಥಾನಿಕ ಪರಿಶೀಲನೆ ವೇಳೆ ಈ ಅಂಶ ಬಯಲಾಗಿದ್ದು, ಕಂದಾಯ ಇಲಾಖೆ ಜಮೀನನ್ನು ಪಂಚಾಯಿತಿ ದಾಖಲೆಯಲ್ಲಿ ಕೆರೆಯಾಗಿ ಬದಲಾಯಿಸಿದ್ದು ಮತ್ತು ಈ ಕಂದಾಯ ಜಮೀನಲ್ಲಿ, ಕೆರೆ ಹೂಳೆತ್ತುವ ಕಾಮಗಾರಿ
ಎಂದು ನಮೂದಿಸಿ ಉದ್ಯೋಗ ಖಾತರಿಯಲ್ಲಿ ಪ್ರತಿ ವರ್ಷವೂ ನೂರಾರು ಕೋಟಿ ರೂ. ಅನುದಾನ ಖರ್ಚು ಮಾಡಲಾಗಿದೆ.

ತನಿಖೆಗೆ ಆದೇಶ: ಸ್ಥಾನಿಕ ಪರಿಶೀಲನೆ ನಡೆಸಿದ ತಹಸೀಲ್ದಾರ್‌ ಈ ಬೆಳವಣಿಗೆ ಕಂಡು ಸ್ವತಃ ಅಚ್ಚರಿಗೊಳಗಾಗಿದ್ದಾರೆ. ದಾಖಲೆ ನೋಡದೇ ಕಾಮಗಾರಿ ಕೈಗೊಂಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ತಹಸೀಲ್ದಾರ್‌ ಕವಿತಾ ಆರ್‌., ಪಿಡಿಒ ಅಮರೇಶರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೂಡಲೇ ತನಿಖೆ ಮಾಡಬೇಕೆಂದು ಆದೇಶ ನೀಡಿದ್ದು, ಇವರೆಗೂ ಎಲ್ಲೆಲ್ಲಿ ನರೇಗಾ ಕೆಲಸ ಮಾಡಲಾಗಿದೆ? ಎಷ್ಟು ಮೊತ್ತ ಡ್ರಾ ಮಾಡಲಾಗಿದೆ?ಎನ್ನುವ ವರದಿ ನೀಡಬೇಕು. ಕಂದಾಯ ಇಲಾಖೆಯ ಜಮೀನು ಎಲ್ಲೆಲ್ಲಿದೆ? ಗುರುತು ಮಾಡಿ ಹದ್ದುಬಸ್ತ್ ಮಾಡುವಂತೆ ಕಂದಾಯ ಅಧಿ ಕಾರಿ, ಗ್ರಾಮ ಲೆಕ್ಕಿಗರಿಗೆ ಸೂಚನೆ ನೀಡಿದ್ದಾರೆ.

ಒತ್ತುವರಿ ಆರೋಪ: ಇಲ್ಲಿನ ಸರಕಾರಿ ಗೈರಾಣಿ ಜಮೀನಿನಲ್ಲಿ ಕೆಲ ಬಡ ಕುಟುಂಬಗಳು ಹಲವು ವರ್ಷಗಳಿಂದಲೂ ಉಳುಮೆ ಮಾಡುತ್ತಿವೆ. ಇವರಿಗೆ ಸಾಗುವಳಿ ಚೀಟಿ ಜತೆಗೆ ಪಟ್ಟಾ ಭೂಮಿ ಮಾಡಿಕೊಡಲು ಹಲವು ವರ್ಷಗಳಿಂದಲೂ ಬೇಡಿಕೆ ಇದೆ. ಆದರೆ ಅರ್ಹ ಬಡವರಿಗೆ ಇದುವರೆಗೂ ಭೂಮಿ ಹಂಚಿಕೆಯಾಗಿಲ್ಲ. ಆದರೆ ಇದರ ನಡುವೆಯೇ ಇಲ್ಲಿನ ಸರಕಾರಿ ಜಮೀನು ಒತ್ತುವರಿಗೆ ಹೊಂಚು ನಡೆದಿದೆ. ಗ್ರಾಮ ಪಂಚಾಯಿತಿಯ ಕೆಲ ಹಾಲಿ-ಮಾಜಿ ಸದಸ್ಯರು ಕೆರೆ ಹೆಸರಲ್ಲಿ ಕೋಟ್ಯಂತರ ರೂ. ಎತ್ತುವಳಿಗೆ ವಂಚನೆ ಹಾಕಿದ್ದಾರೆ. ಅಲ್ಲದೇ ಕೆಲ ಪ್ರಭಾವಿಗಳು ಇಲ್ಲಿನ ಭೂಮಿಯನ್ನು ಒತ್ತುವರಿ ಮಾಡಿದ್ದು, ಸಂಪೂರ್ಣ ತನಿಖೆ ಬಳಿಕಷ್ಟೇ ಸತ್ಯಾಂಶ ಬಯಲಾಗಲಿದೆ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು.

ಖರ್ಚು-ವೆಚ್ಚ ತನಿಖೆ ಅಗತ್ಯ
ಇಲ್ಲಿನ ಸರಕಾರಿ ಜಮೀನಿನಲ್ಲಿ ? ಕೆರೆ ಹೂಳು ಎತ್ತುವುದು? ಎನ್ನುವ ಶಿರೋನಾಮೆಯಡಿ ನರೇಗಾದಡಿ ಕೇವಲ ಕೂಲಿ ಕೆಲಸ ಮಾತ್ರವಲ್ಲದೇ ಇತರೆ ಕಾಮಗಾರಿಗಳು ನಡೆದಿವೆ. ಜಂಗಲ್‌ ಕಟಿಂಗ್‌, ಕೆರೆ ಒಳಗಟ್ಟೆ ನಿರ್ಮಾಣ, ವಡ್ಡು ನಿರ್ಮಾಣ ಹೆಸರಿನಲ್ಲಿ ಕೋಟ್ಯಂತರ ರೂ. ಖರ್ಚು
ಮಾಡಲಾಗಿದ್ದು, ಇಲ್ಲದ ಕೆರೆಗೆ ಇಷ್ಟೊಂದು ಹಣ ಹೇಗೆ ಖರ್ಚಾಯಿತು? ಎನ್ನುವುದೇ ಪ್ರಶ್ನೆ. ಗ್ರಾಮ ಪಂಚಾಯಿತಿ ಅಧಿ ಕಾರಿಗಳು ಆಡಳಿತ ಮಂಡಳಿಯಲ್ಲಿನ ಕೆಲ ಸದಸ್ಯರ ಕುಮ್ಮಕ್ಕಿನಿಂದಲೇ ಭ್ರಷ್ಟಾಚಾರ ನಡೆದಿದ್ದು ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದು ಅಗತ್ಯವಿದೆ.

Advertisement

ಪಾಮನಕಲ್ಲೂರು ಪಂಚಾಯಿತಿ ವ್ಯಾಪ್ತಿಯ ಚಿಲ್ಕರಾಗಿ ಬಳಿಯ ಸರಕಾರಿ ಜಮೀನು ಸ್ಥಾನಿಕ ಪರಿಶೀಲನೆ ಮಾಡಲಾಗಿದೆ. ಕಂದಾಯ ಭೂಮಿಯಲ್ಲಿ ಪಂಚಾಯಿತಿಯವರು ಕೆಲಸ ಮಾಡಿರುವುದು ದೃಢವಾಗಿದೆ. ಇಲಾಖೆಗಳ ನಡುವಿನ ಸಂಪರ್ಕ ಕೊರತೆಯಿಂದ ಇದಾಗಿದೆ. ಸದ್ಯಕ್ಕೆ ಜಮೀನಿನ ಎಲ್ಲ ದಾಖಲೆಗಳನ್ನು ಸಂಗ್ರಹಿಸಿಕೊಳ್ಳಲಾಗುತ್ತಿದ್ದು ಬಳಿಕ ಕ್ರಮ ಕೈಗೊಳ್ಳುತ್ತೇವೆ.

ಕವಿತಾ ಆರ್‌.ತಹಸೀಲ್ದಾರ್‌, ಮಸ್ಕಿ

*ಮಲ್ಲಿಕಾರ್ಜುನ ಚಿಲ್ಕರಾಗಿ

Advertisement

Udayavani is now on Telegram. Click here to join our channel and stay updated with the latest news.

Next