Advertisement

ಬಿಜೆಪಿ ಸೇರಲು ನನಗೂ ಕೋಟ್ಯಂತರ ರೂ. ಆಮಿಷ

05:42 PM Oct 05, 2021 | Team Udayavani |

ಬಂಗಾರಪೇಟೆ: ಕಳೆದ ಸಮ್ಮಿಶ್ರ ಸರ್ಕಾರ ವಿರುದ್ಧ ನಡೆದ ಅಪರೇಷನ್‌ ಕಮಲದಲ್ಲಿ ನಮಗೂ ಬಿಜೆಪಿ ಸೇರುವಂತೆ ಆ ಪಕ್ಷದ ನಾಯಕರು ಕೋಟ್ಯಂತರ ರೂ. ಹಣ, ಸಚಿವ ಸ್ಥಾನದ ಆಸೆ ತೋರಿದ್ದರು ಎಂದು ಶಾಸಕ ಎಸ್‌.ಎನ್‌. ನಾರಾಯಣ ಸ್ವಾಮಿ ಹೇಳಿದರು.

Advertisement

ತಾಲೂಕಿನ ಬೂದಿಕೋಟೆ ಹೋಬಳಿಯ ಬಲಮಂದೆ, ಯಳೇಸಂದ್ರ, ಬೂದಿಕೋಟೆ ಮತ್ತು ಆಲಂಬಾಡಿ ಜೋತೇನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ನನಗೆ ಹಣದ ವ್ಯಾಮೋಹ ಇದ್ದಿದ್ದರೆ ಕಾಂಗ್ರೆಸ್‌, ಜೆಡಿಎಸ್‌ ಪಕ್ಷದ ಶಾಸಕರ ಖರೀದಿಸಿದಾಗ ನನಗೂ ಪಕ್ಷ ಸೇರುವಂತೆ ಬಿಜೆಪಿ ಮುಖಂಡರು ಆಮಿಷವೊಡ್ಡಿದ್ದರು. ಆಗಲೇ ವಲಸೆ ಹೋಗುತ್ತಿದ್ದೆ, ಆದರೆ, ನನಗೆ ಪಕ್ಷಾಂತರಕ್ಕಿಂತ ಕ್ಷೇತ್ರದ ಜನರು, ಅಭಿವೃದ್ಧಿ ಮುಖ್ಯ ಆಗಿದ್ದರಿಂದ ಅವರ ಆಹ್ವಾನವನ್ನು ನಿರಾಕರಿಸಿದೆ.  ನಾನು ರಾಜಕೀಯಕ್ಕೆ ಬಂದಿರುವುದು ಹಣ ಮಾಡುವುದಕ್ಕೆ ಅಲ್ಲ, ಬಡ ಜನರ ಹಿತಕಾಯಲು ಎಂದು ನುಡಿದರು.

ಇದನ್ನೂ ಓದಿ;- ಸಿಡಿಲು ಬಡಿದು ಇಬ್ಬರು ಕೃಷಿ ಕಾರ್ಮಿಕರು ಸಾವು

ಅಧಿಕಾರ ಕೊಟ್ರೂ ಕೆಲಸ ಮಾಡಲಿಲ್ಲ: ಕಳೆದ 8 ವರ್ಷಗಳಿಂದ ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಹಿಂದೆಂದೂ ಕಾಣದಷ್ಟು ಸಾಧನೆ ಮಾಡಿರುವೆ. ಆದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಗೆ 50 ಸಾವಿರ ಮತಗಳನ್ನು ನೀಡಿದ್ದು ಬೇಸರ ತಂದಿದೆ. ಎಚ್‌.ಡಿ.ಕುಮಾರಸ್ವಾಮಿ ಮುಖ್ಯ ಮಂತ್ರಿಯಾದರೆ, ರೈತರ ಸಾಲ ಮನ್ನಾ ಮಾಡುವರೆಂದು ನಂಬಿ ಮತ ಹಾಕಿದರು. ಆದರೆ, ಅವರಿಗೆ ಅಧಿಕಾರ ನಡೆಸಲು ಶಾಸಕರ ಬೆಂಬಲವಿಲ್ಲದಿದ್ದರೂ ಕಾಂಗ್ರೆಸ್‌ ಶಾಸಕರು ಅಧಿಕಾರ ಕೊಟ್ಟರೂ ಏನು ಮಾಡಲು ಸಾಧ್ಯವಾಗಿಲ್ಲ ಎಂದು ವ್ಯಂಗ್ಯವಾಡಿದರು.

ಕೊಟ್ಟ ಮಾತು ಕಾರ್ಯಗತ ಮಾಡಿಲ್ಲ: ಪಕ್ಷದ ಜಿಲ್ಲಾಧ್ಯಕ್ಷ ಕೆ.ಚಂದ್ರಾರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವಿಲ್ಲ, ಅನುದಾನ ಹಂಚಿಕೆಯಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದ್ದರೂ ಶಾಸಕರು ತಮ್ಮ ಬುದ್ಧಿವಂತಿಕೆಯಿಂದ ಸಾಕಷ್ಟು ಅಭಿವೃದ್ಧಿಯತ್ತ ಕ್ಷೇತ್ರವನ್ನು ಕೊಂಡೊಯ್ಯತ್ತಿದ್ದಾರೆ. ಇಂತಹವರನ್ನು ಜನರು ಗುರುತಿಸಿ ಮರು ಆಯ್ಕೆ ಮಾಡಿದರೆ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಆಗಲಿದೆ ಎಂದರಲ್ಲದೆ, ಬಿಜೆಪಿ ನಾಯಕರದ್ದು ಬರೀ ಪ್ರಚಾರ ವಿನಃ ಕೊಟ್ಟ ಮಾತನ್ನು ಯಾವುದನ್ನೂ ಕಾರ್ಯಗತ ಮಾಡಿಲ್ಲ ಎಂದು ಟೀಕಿಸಿದರು.

Advertisement

ಸಭೆಯಲ್ಲಿ ಬೂದಿಕೋಟೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆ.ವಿ.ನಾಗರಾಜ್‌, ತಾಪಂ ಮಾಜಿ ಅಧ್ಯಕ್ಷ ಮಹಾದೇವ್‌, ಬಲಮಂದೆ ಗ್ರಾಪಂ ಅಧ್ಯಕ್ಷ ರಾಮಪ್ಪ, ಬೂದಿಕೋಟೆ ಗ್ರಾಪಂ ಅಧ್ಯಕ್ಷೆ ಬಸವರಾಜಮ್ಮ, ಗ್ರಾಪಂ ಬಿ.ಆರ್‌. ಮಂಜುನಾಥ್‌,ಯಳೇಸಂದ್ರ ಗ್ರಾಪಂ ಅಧ್ಯಕ್ಷ ಶ್ರೀನಿವಾಸರೆಡ್ಡಿ, ಆಲಂಬಾಡಿ ಗ್ರಾಪಂ ಅಧ್ಯಕ್ಷೆ ನಾರಾಯಣಮ್ಮ, ಬಲಮಂದೆ ವಿಎಸ್‌ಎಸ್‌ಎನ್‌ ಅಧ್ಯಕ್ಷ ಜಿ.ವೆಂಕಟೇಶಗೌಡ, ಬೂದಿಕೋಟೆ ವಿಎಸ್‌ಎಎಸ್‌ಎನ್‌ ಮಾಜಿ ಅಧ್ಯಕ್ಷ ಎನ್‌. ವಿಜಯಕುಮಾರ್‌, ಮುಖಂಡರಾದ ಕೃಷ್ಣಪ್ಪಶೆಟ್ಟಿ, ರಮೇಶ್‌, ಮುನಿಸ್ವಾಮಿ, ಕೋಡಗುರ್ಕಿ ಕೃಷ್ಣಮೂರ್ತಿ, ವೈ.ಶ್ರೀನಿವಾಸ್‌ ಮುಂತಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next