ಕಲಬುರಗಿ: ಕೋವಿಡ್ ಹೆಸರಿನಲ್ಲಿ ಸ್ಯಾನಿಟೈಸರ್, ಪಿಪಿಇ ಕಿಟ್‌ಗಳು, ಥರ್ಮಲ್ ಸ್ಕ್ರೀನಿಂಗ್ ಗನ್‌ಗಳನ್ನು ಕಳಪೆ ಗುಣಮುಖದಲ್ಲಿ ಖರೀದಿಸುತ್ತಿದ್ದು, ಕೋಟ್ಯಂತರ ರೂ.ಗಳನ್ನು ರಾಜ್ಯ ಸರ್ಕಾರ ಲೂಟಿ ಮಾಡುತ್ತಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಆರೋಪಿಸಿದರು.
ನಗರದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಚೇರಿ ಉದ್ಘಾಟನಾ ಸಮಾರಂಭ ಮತ್ತು ಪಕ್ಷ ಸೇರ್ಪಡೆ ಕಾರ್ಯಕ್ರಮದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 200ರೂ.ಗೆ ಸಿಗುವ ಸ್ಯಾನಿಟೈಸರ್ ಗಳನ್ನು 600ರೂ., ಎರಡು ಸಾವಿರ ರೂ. ಗಳ ಥರ್ಮಲ್ ಸ್ಕ್ರೀನಿಂಗ್ ಗನ್‌ಗಳನ್ನು ಒಂಭತ್ತು ಸಾವಿರ ರೂ.ಗೆ ಖರೀದಿ ಮಾಡಲಾಗಿದೆ. ವೈದ್ಯರಿಗೆ ನೀಡುವ ಪಿಪಿಇ ಕಿಟ್‌ಗಳು ಕಳಪೆಯಾಗಿವೆ. ಈ ಬಗ್ಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿ ಬೀದಿಗೆ ಬಂದು ಪ್ರತಿಭಟನೆಯನ್ನು ಮಾಡಿದ್ದಾರೆ. ಆದರೆ, ಸಚಿವರು ಹಾಗೂ ಅಧಿಕಾರಿಗಳು ಸುಳ್ಳು ಮಾಹಿತಿ ನೀಡುತ್ತ ಮೋಸ ಮಾಡುತ್ತಿದ್ದಾರೆ ಎಂದು ದೂರಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಬಳಸಿದ ಹಳೆಯ ವೆಂಟಿಲೇಟರ್‌ಗಳನ್ನೇ ದುಬಾರಿ ಹಣಕ್ಕೆ ಖರೀದಿ ಮಾಡಲಾಗಿದೆ. ಒಂದು ಕೋಟಿ ರೂ. ಮೌಲ್ಯದ ಒಂದುಯೂನಿಟ್ ಸ್ಯಾನಿಟೈಸರ್‌ಗೆ 11 ಕೋಟಿ ರೂ. ಭರಿಸಿದ್ದಾರೆ. ಆರೋಗ್ಯದ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲದವರನ್ನು ಆರೋಗ್ಯ ಸಚಿವರನ್ನಾಗಿ ಮಾಡಲಾಗಿದೆ. ಕೋವಿಡ್ ಅವ್ಯವಹಾರದ ಬಗ್ಗೆ ಶಾಸಕರೇ ಇರುವ “ಪಿಎಸಿ’ ಕಮಿಟಿಯಲ್ಲಿ ಚರ್ಚೆಯಾಗಬೇಕು. ಈ ಕುರಿತು ಎಸಿಬಿಗೆ ದೂರು ನೀಡಲಾಗಿದೆ ಎಂದರು.
ಪಕ್ಷದ ಉಪಾಧ್ಯಕ್ಷ ಎಸ್.ಎಚ್. ಲಿಂಗೇಗೌಡ, ರಘುಪತಿ ಭಟ್, ಸೋಮಸುಂದರ, ಸೈಬಣ್ಣ ಜಮಾದಾರ, ಜಗದೇವಿ ಚವ್ಹಾಣ ಹಾಜರಿದ್ದರು.
ಚುನಾವಣೆಯಲ್ಲಿ ಕಣಕ್ಕೆ ಪ್ರಾಮಾಣಿಕ ಹಾಗೂ ಜನಪರ ರಾಜಕಾರಣ ಮಾಡುವ ನಿಟ್ಟಿನಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಸ್ಥಾಪಿಸಲಾಗಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಾಯಕರ ಆಡಳಿತ ವೈಖರಿಯಿಂದ ಜನ ಬೇಸತ್ತಿದ್ದಾರೆ. ಅಲ್ಲಿ ಸ್ವಾರ್ಥಿಗಳೆ ತುಂಬಿದ್ದಾರೆ. ಮುಂದಿನ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ನಮ್ಮ ಪಕ್ಷದ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ.
–ರವಿ ಕೃಷ್ಣಾರೆಡ್ಡಿ, ಅಧ್ಯಕ್ಷರು, ಕರ್ನಾಟಕ ರಾಷ್ಟ್ರ ಸಮಿತಿ