ಬೆಂಗಳೂರು: ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್, ಕಾಂಗ್ರೆಸ್ ನ ಹಿರಿಯ ನಾಯಕ ಆರ್ ಎಲ್ ಜಾಲಪ್ಪ ಅವರಿಗೆ ಸೇರಿದ ಶಿಕ್ಷಣ ಸಂಸ್ಥೆಗಳು ಮತ್ತು ಕುಟುಂಬ ಸದಸ್ಯರು, ಆಪ್ತರ ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ನಡೆಸಿದ ದಾಳಿಯಲ್ಲಿ ಸುಮಾರು 5 ಕೋಟಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.
ಸುಮಾರು 25 ಸ್ಥಳಗಳಲ್ಲಿ ಏಕಕಾಲದಲ್ಲಿ ನಡೆದ ದಾಳಿಯಲ್ಲಿ 300ಕ್ಕೂ ಅಧಿಕ ಅಧಿಕಾರಿಗಳು ದಾಖಲೆಗಳ ಪರಶೀಲನೆ ನಡೆಸಿದ್ದರು. ಈ ವೇಳೆ 5 ಕೋಟಿಗೂ ಅಧಿಕ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ.
ಗುರುವಾರ ಮುಂಜಾವ ಮೂರು ಗಂಟೆ ಸುಮಾರಿಗೆ ಕ್ವೀನ್ಸ್ ರಸ್ತೆಯಲ್ಲಿರುವ ಆದಾಯ ತೆರಿಗೆ ಕಚೇರಿಗೆ ಆಗಮಿಸಿದ 250ಕ್ಕೂ ಅಧಿಕ ಐಟಿ ಅಧಿಕಾರಿಗಳ ತಂಡ 60ಕ್ಕೂ ಹೆಚ್ಚು ಬಾಡಿಗೆ ಕಾರುಗಳಲ್ಲಿ ಹೊರಟು ಬೆಳಗ್ಗೆ ಆರು ಗಂಟೆಯಿಂದ ಪರಮೇಶ್ವರ್ ಮತ್ತು ಜಾಲಪ್ಪ ಅವರ ಮನೆಗಳು, ಕಚೇರಿಗಳು, ಸಮೂಹ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಸೇರಿ 30 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿದೆ. ಅಲ್ಲದೆ ಜಾಲಪ್ಪ ಅವರ ಪುತ್ರ ರಾಜೇಂದ್ರ ಮತ್ತು ಅಳಿಯ ನಾಗರಾಜ್ ಮನೆಗಳ ಮೇಲೂ ದಾಳಿ ನಡೆಸಿದ ಅಧಿಕಾರಿಗಳು ಅಪಾರ ಪ್ರಮಾಣದ ಆಸ್ತಿಪಾಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿವೆ.
5 ಕೋ.ರೂ. ಪತ್ತೆ?
ಐಟಿ ದಾಳಿ ವೇಳೆ ಸುಮಾರು ನಾಲ್ಕೂವರೆ ಕೋಟಿ ರೂ. ಪತ್ತೆಯಾಗಿದೆ ಎಂದು ಹೇಳಲಾಗಿದೆ. ಈ ಪೈಕಿ 70 ಲಕ್ಷ ರೂ. ಪರಮೇಶ್ವರ್ ಅವರ ಸದಾಶಿವನಗರ ಮನೆಯಲ್ಲಿ ಸಿಕ್ಕಿದೆ ಎನ್ನಲಾಗಿದ್ದು, 1.86 ಕೋ. ರೂ. ನೆಲಮಂಗಲದಲ್ಲಿ ಹಾಗೂ ಇನ್ನುಳಿದ ಹಣ ಇತರ ವ್ಯಕ್ತಿಗಳ ಮನೆ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.