Advertisement

Mangaluru; ಕೋಟಿ ರೂ. ತುಂಬಿಸಲು ಗೋಣಿಚೀಲ ತಂದಿದ್ದರು?

01:45 AM Jun 24, 2024 | Team Udayavani |

ಮಂಗಳೂರು: ಶುಕ್ರವಾರ ರಾತ್ರಿ ಉಳಾಯಿಬೆಟ್ಟು ಪೆರ್ಮಂಕಿಯ ಉದ್ಯಮಿ ಪದ್ಮನಾಭ ಕೋಟ್ಯಾನ್‌ ಅವರ ಮನೆಗೆ ನುಗ್ಗಿದ್ದ ದರೋಡೆಕೋರರು ಕೋಟ್ಯಂತರ ರೂಪಾಯಿ ದೋಚುವ ಯೋಜನೆ ರೂಪಿಸಿದ್ದರು ಎಂದು ತಿಳಿದುಬಂದಿದೆ.

Advertisement

ಮನೆಯಲ್ಲಿ ಐದಾರು ಕೋಟಿ ರೂಪಾಯಿ ನಗದು ರೂಪದಲ್ಲೇ ಇರಬಹುದು ಎಂಬ ಲೆಕ್ಕಾಚಾರದಿಂದ ಬಂದಿದ್ದ ದರೋಡೆಕೋರರು ಅದನ್ನು ಹೊತ್ತೂಯ್ಯಲು ಗೋಣಿ ಚೀಲವನ್ನೇ ತಂದಿದ್ದರು! ಆದರೆ ಅವರ ನಿರೀಕ್ಷೆಯಷ್ಟು ಹಣ ಸಿಗಲಿಲ್ಲ. ದರೋಡೆಕೋರರು ಮನೆಯವರಲ್ಲಿ ಪದೇ ಪದೆ ಹಣ ಎಲ್ಲಿದೆ ಎಂದು ಪ್ರಶ್ನಿಸುತ್ತಾ ಮನೆಯೆಲ್ಲ ಜಾಲಾಡಿದ್ದಾರೆ. ಹಾಸಿಗೆಗಳ ಅಡಿಯಲ್ಲಿಯೂ ಹುಡು ಕಾಡಿದ್ದಾರೆ. ಭಾರೀ ಹಣ ಸಂಗ್ರಹಿಸಿಟ್ಟಿದ್ದಾರೆ ಎಂಬ ಮಾಹಿತಿ ದರೋಡೆಕೋರರಿಗೆ ಲಭಿಸಿದೆ. ಕೃತ್ಯದಲ್ಲಿ ಸ್ಥಳೀಯ ಸಂಪರ್ಕ ಇರುವ ವ್ಯಕ್ತಿಗಳು ಶಾಮೀಲಾಗಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ನೆರವಾಗದ ಸಿಸಿ ಕೆಮರಾ?
ಪದ್ಮನಾಭ ಕೋಟ್ಯಾನ್‌ ಅವರ ಮನೆಯಲ್ಲಿರುವ ಸಿಸಿಟಿವಿಯಲ್ಲಿ ದರೋಡೆಕೋರರ ಕೃತ್ಯದ ಕೆಲವು ದೃಶ್ಯಗಳು ದಾಖಲಾಗಿವೆ. ಅಲ್ಲದೆ ದರೋಡೆಕೋರರ ವಾಹನದ ಚಿತ್ರ ರಸ್ತೆ ಬದಿಯೊಂದರ ಸಿಸಿ ಕೆಮರಾದಲ್ಲಿ ಸೆರೆಯಾಗಿದ್ದು, ಅದನ್ನು ಪೊಲೀಸರು ಪರಿಶೀಲಿಸಿದ್ದಾರೆ. ಆದರೆ ಅದು ತನಿಖೆಗೆ ಹೆಚ್ಚು ಪ್ರಯೋಜನವಾಗಿಲ್ಲ.

2021ರ ದರೋಡೆ: 3 ದಿನಗಳಲ್ಲೇ ಬಂಧನ
2021ರ ಮಾರ್ಚ್‌ನಲ್ಲಿ ಮೂಡುಬಿದಿರೆ, ಬಜಪೆ ಮತ್ತು ಮೂಲ್ಕಿ ಠಾಣೆಯ ಹಲವೆಡೆ ದರೋಡೆ, ಕಳ್ಳತನ ನಡೆಸಿದ್ದ ಗ್ಯಾಂಗಿನ 9 ಮಂದಿಯನ್ನು ಪೊಲೀಸರು ಮೂರು ದಿನಗಳೊಳಗೆ ಬಂಧಿಸಿದ್ದರು. ಈ ತಂಡ ಫಾರ್ಮ್ಹೌಸ್‌, ಗೋದಾಮು, ಮನೆಗಳಲ್ಲಿ ಭಾರೀ ಪ್ರಮಾಣದಲ್ಲಿ ಹಣ ಸಂಗ್ರಹಿಸುತ್ತಿದ್ದವರ ಮಾಹಿತಿ ಪಡೆದು ದಾಳಿ ನಡೆಸುತ್ತಿತ್ತು.

ಅಲ್ಲದೆ ಬಂಧಿತರು 2020ರಲ್ಲಿ ಉಪ್ಪಿನಂಗಡಿಯಲ್ಲಿ ನಡೆದ ದರೋಡೆ, ಅರೆಹಳ್ಳಿ ಹಾಸನದಲ್ಲಿ ಮನೆಗಳ್ಳತನ, ಪುಂಜಾಲಕಟ್ಟೆಯಲ್ಲಿ ತಾಯಿ ಮಗನಿದ್ದ ಮನೆಯಲ್ಲಿ ಕಳ್ಳತನ, ಕೊಕ್ಕಡದಲ್ಲಿ ದರೋಡೆ ವೇಳೆ ಮಹಿಳೆಯೊಬ್ಬರು ಒಬ್ಟಾತನನ್ನು ಹಿಡಿಯಲು ಯತ್ನಿಸಿದಾಗ ಹಲ್ಲೆ ನಡೆಸಿದ ಪ್ರಕರಣ, ಮೂಡಬಿದಿರೆಯ ದರೋಡೆ, ಬೆಂಗಳೂರು ವಿಜಯನಗರಗಳಲ್ಲಿ ನಡೆದ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದುದು ತನಿಖೆಯಿಂದ ಗೊತ್ತಾಗಿತ್ತು.

Advertisement

2020ರ ಸೌತಡ್ಕ ದರೋಡೆ ಪ್ರಕರಣ
ಉಪ್ಪಿನಂಗಡಿಯ ಸೌತಡ್ಕದಲ್ಲಿ 2020ರ ಡಿಸೆಂಬರ್‌ನಲ್ಲಿ ರಾತ್ರಿ ವೇಳೆ ಯಜಮಾನನ್ನು ಕಟ್ಟಿ ಹಾಕಿ ಮನೆಯೊಡತಿಗೆ ಚೂರಿಯಿಂದ ಇರಿದು ದರೋಡೆಕೋರರ ತಂಡ ಹಣ ಮತ್ತು ಚಿನ್ನಾಭರಣ ದೋಚಿತ್ತು. ಸುಮಾರು 9 ಮಂದಿ ದರೋಡೆಕೋರರ ತಂಡ ಮನೆಯವರನ್ನು ಬೆದರಿಸಿ ಕಪಾಟಿನ ಕೀಲಿ ಕೈಯನ್ನು ಪಡೆದಿತ್ತು. ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.

ಕುದ್ಕಾಡಿಯಲ್ಲಿ ದರೋಡೆ: ಎಲ್ಲ ಆರೋಪಿಗಳ ಬಂಧನ
ಪುತ್ತೂರು: ಪಡುವನ್ನೂರು ಗ್ರಾಮದ ಕುದ್ಕಾಡಿ ತೋಟದ ಮೂಲೆಯ ಮನೆಯೊಂದಕ್ಕೆ 2023ರ ಆ.7ರಂದು ತಡರಾತ್ರಿ ದರೋಡೆಕೋರರು ನುಗ್ಗಿ ಮನೆ ಮಂದಿಯನ್ನು ಕಟ್ಟಿ ಹಾಕಿ 15 ಪವನ್‌ ಚಿನ್ನಾಭರಣ ಹಾಗೂ ರೂ. 40 ಸಾವಿರ ರೂ. ದೋಚಿದ ಘಟನೆ ನಡೆದಿತ್ತು. ಬಡಗನ್ನೂರು ಗ್ರಾ.ಪಂ.ಮಾಜಿ ಸದಸ್ಯ ಗುರುಪ್ರಸಾದ್‌ ರೈ ಕುದ್ಕಾಡಿ ಅವರ ಮನೆಯಲ್ಲಿ ಈ ಘಟನೆ ನಡೆದಿತ್ತು. ದರೋಡೆ ನಡೆದ ತಿಂಗಳುಗಳೊಳಗೇ ಎಲ್ಲ ಆರೋಪಿಗಳನ್ನು ಪೊಲೀಸರು ಬಂಧಿಸುವ ಮೂಲಕ ಪ್ರಕರಣ ವನ್ನು ಭೇದಿಸಿದ್ದರು.

ಹೊಂಚು
ಹಾಕಿ ಸಿಕ್ಕಿಬಿದ್ದಿದ್ದರು
2021ರ ಎಪ್ರಿಲ್‌ನಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸರು ಉಳಾಯಿಬೆಟ್ಟು ಗ್ರಾಮದ ಪರಾರಿಯಲ್ಲಿ ದರೋಡೆಗೆ ಸಂಚು ಹಾಕುತ್ತಿದ್ದ ತಂಡವನ್ನು ಬಂಧಿಸಿದ್ದರು. ಈ ತಂಡ ಇನ್ನೋವಾ ಕಾರಿನಲ್ಲಿ ಮಾರಕಾಯುಧಗಳೊಂದಿಗೆ ಹೊಂಚು ಹಾಕುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next