ಬೆಂಗಳೂರು: ನಗರದ ಪ್ರತಿ ವಾರ್ಡ್‌ನಲ್ಲಿ “ಇ-ಗ್ರಂಥಾಲಯ’ ಸ್ಥಾಪಿಸಲು ಸಂಸದರ ನಿಧಿಯಿಂದ ಒಂದು ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಕೇಂದ್ರ ಸಚಿವ ಅನಂತಕುಮಾರ್ ತಿಳಿಸಿದರು.
ಸಾರ್ವಜನಿಕ ಗ್ರಂಥಾಲಯ ಇಲಾಖೆ ಹಾಗೂ ಪಾಲಿಕೆಯ ಸಹಯೋಗದಲ್ಲಿ ಎನ್.ಆರ್.ಕಾಲೊನಿಯಲ್ಲಿ ನಿರ್ಮಿಸಲಾಗಿರುವ ಇ-ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದ ಅವರು, ಇ-ಗ್ರಂಥಾಲಯಗಳಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಪ್ರತಿಯೊಂದು ವಾರ್ಡ್‌ನಲ್ಲಿಯೂ ಇ-ಗ್ರಂಥಾಲಯಗಳ ಸ್ಥಾಪನೆಗೆ ಪಾಲಿಕೆ ಮುಂದಾಗಬೇಕು ಎಂದು ಹೇಳಿದರು.
ಸಂಸದರ ನಿಧಿಯಿಂದ ಇ-ಗ್ರಂಥಾಲಯಗಳ ಸ್ಥಾಪನೆಗೆ ಅನುದಾನ ನೀಡಲು ಸಿದ್ಧವಿದ್ದು, ಎಲ್ಲ ವಾರ್ಡ್‌ಗಳಲ್ಲಿ ಸ್ಥಾಪಿಸುವಂತೆ ಖುದ್ಧು ಪಾಲಿಕೆಯ ಆಯುಕ್ತರಿಗೆ ಪತ್ರ ಬರೆಯಲಾಗುವುದು. ಜತೆಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಬಿಬಿಎಂಪಿ ಬಾಕಿಯಿರುವ 300 ಕೋಟಿ ರೂ. ಗ್ರಂಥಾಲಯ ಕರ ಪಾವತಿಸಿದರೆ, ಇನ್ನಷ್ಟು ಗ್ರಂಥಾಲಯಗಳನ್ನು ನಿರ್ಮಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಪ್ರತಿಯೊಬ್ಬರಿಗೂ ಪುಸ್ತಕಗಳನ್ನು ಕೊಂಡಕೊಳ್ಳಲು ಸಾಧ್ಯವಿರುವುದಿಲ್ಲ. ಆದರೆ, ಇಂದು ಬಡವರು, ಶ್ರೀಮಂತರು ಎಂಬ ಬೇಧವಿಲ್ಲದೆ ಪ್ರತಿಯೊಬ್ಬರ ಬಳಿಯೂ ಮೊಬೈಲ್‌ಗಳಿವೆ. ಹಾಗಾಗಿ ಇ-ಪುಸ್ತಕಗಳು ಪ್ರತಿಯೊಬ್ಬರಿಗೂ ಸುಲಭವಾಗಿ ತಲುಪಲಿದೆ. ಅದರಂತೆ ಈಗಾಗಲೇ ಪ್ರಧಾನ ಮಂತ್ರಿಗಳು ಎಲ್ಲರಿಗೂ ಡಿಜಿಟಲ್ ಸಂಪರ್ಕ ಸಿಗಬೇಕೆಂದು ಡಿಜಿಟಲ್ ಇಂಡಿಯಾ ನಿರ್ಮಾಣದ ಪಣತೊಟ್ಟಿದ್ದಾರೆ ಎಂದು ಹೇಳಿದರು.
ಮೇಯರ್ ಆರ್.ಸಂಪತ್‌ರಾಜ್ ಮಾತನಾಡಿ, ಇ-ಗ್ರಂಥಾಲಯಗಳು ದೇಶದ ಭವಿಷ್ಯವಾಗಿರುವುದರಿಂದ ಪ್ರತಿಯೊಂದು ವಾರ್ಡ್‌ನಲ್ಲಿಯೂ ಇ-ಗ್ರಂಥಾಲಯ ಸ್ಥಾಪಿಸುವುದು ಅಗತ್ಯವಿದೆ. ಆ ಹಿನ್ನೆಲೆಯಲ್ಲಿ ಮುಂದಿನ ಬಜೆಟ್‌ನಲ್ಲಿ ಯೋಜನೆಯನ್ನು ಘೋಷಿಸಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ರವಿಸುಬ್ರಹ್ಮಣ್ಯ, ಮಾಜಿ ಮೇಯರ್ ಬಿ.ಎಸ್.ಕಟ್ಟೆ ಸತ್ಯನಾರಾಯಣ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶ್ ಕುಮಾರ್ ಎಸ್. ಹೊಸಮನಿ, ಉಪನಿರ್ದೇಶಕಿ ಸಿ.ಎಸ್.ಪೂರ್ಣಿಮಾ ಹಾಜರಿದ್ದರು.