ಸುರಪುರ: ನಾರಾಯಣಪುರ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಅಧಿಕ ಪ್ರಮಾಣ ನೀರು ಹರಿ ಬಿಡುತ್ತಿರುವುದರಿಂದ ತಾಲೂಕಿನ ನದಿ ಪಾತ್ರದ ವಿವಿಧ ಗ್ರಾಮಗಳ ಜಮೀನುಗಳು ಜಲಾವೃತಗೊಂಡಿದ್ದು, ಸಾವಿರಾರು ಎಕರೆ ಬೆಳೆ ನಷ್ಟವಾಗಿದೆ.
ಜಲಾಶಯದಿಂದ ಹೆಚ್ಚುವರಿಯಾಗಿ ಸೋಮವಾರ 67 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ನದಿಗೆ ಹರಿಬಿಟ್ಟ ಪರಿಣಾಮ ಪ್ರವಾಹದಲ್ಲಿ ಏರಿಕೆ ಉಂಟಾಗಿದೆ. ಹಳ್ಳ ಕೊಳ್ಳಗಳ ಮೂಲಕ ನದಿ ಪಾತ್ರದ ಕೆಲ ಗಾಮಗಳಲ್ಲಿ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಈ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಜನರ ರಕ್ಷಣೆಗಾಗಿ ಮುಂಜಾಗ್ರತಾ ಕ್ರಮ ಕೈಗೊಂಡಿದೆ.
ಬೆಳೆ ನಾಶ: ತಾಲೂಕಿನ ತಿಂಥಣಿ, ಬಂಡೊಳ್ಳಿ, ಶಾಂತಪುರ, ಅಡವಿ ಲಿಂಗದಹಳ್ಳಿ, ಶೆಳ್ಳಿಗಿ, ಹೆಮ್ಮಡಗಿ, ಸೂಗುರು ಸೇರಿದಂತೆ ಅನೇಕ ಗ್ರಾಮಗಳ ಸಾವಿರಾರು ಎಕರೆ ಜಮೀನುಗಳು ಜಲಾವೃತಗೊಂಡಿದ್ದು, ಭತ್ತ, ತೊಗರಿ, ಹತ್ತಿ, ಸಜ್ಜಿ ಸೇರಿದಂತೆ ಅನೇಕ ಬೆಳೆಗಳು ನೀರಿನಲ್ಲಿ ಜಲಾವೃತವಾಗಿವೆ. ನದಿ ಪಾತ್ರದ ನೆರೆ ಸಂತ್ರಸ್ತರ ರಕ್ಷಣೆಗಾಗಿ ತಿಂಥಿಣಿಯ ದಾದ್ಲಾಪುರ ಶಾಲೆ, ಎಚ್.ಎಸ್. ಎಚ್.ಎಸ್. ಖಾನಪುರ ಎಪಿಎಂಸಿ, ದೇವಪುರದ ಸರಕಾರಿ ಶಾಲೆಯಲ್ಲಿ ಗಂಜಿ ಕೇಂದ್ರಗಳನ್ನು ಆರಂಭಿಸಲಾಗಿದೆ.
ತಾಲೂಕು ಕೇಂದ್ರಕ್ಕೆ ಕುಡಿಯುವ ನೀರು ಪೂರೈಸುವ ಶೆಳ್ಳಗಿ ಸಮೀಪದ ಇಂಟ್ಯಾಕ್‌ವೆಲ್ ನೀರಿನಲ್ಲಿ ಮುಳಗಿದೆ. ಈಶ್ವರ ದೇಗುಲ ಸಹ ಕಾಣದಾಗಿದೆ. ಜಾಕ್‌ವೆಲ್ ಹತ್ತಿರದಲ್ಲಿ ನೀರಿನ ವೇಗ ಅಧಿಕವಾಗಿದೆ. ಮಂಗಳವಾರ ಜಲಾಶಯದಿಂದ ಇನ್ನಷ್ಟು ನೀರು ಹರಿಸುವ ಸಾಧ್ಯತೆ ಇದೆ.
ರೈತರಲ್ಲಿ ಆತಂಕ: ಜಿಲ್ಲಾದ್ಯಂತ ಹೇಳಿಕೊಳ್ಳುವಷ್ಟು ಮಳೆಯಾಗಿಲ್ಲ. ಆದರೂ ಪ್ರವಾಹ ಎದುರಾಗಿರುವುದು ರೈತರಲ್ಲಿ ಆತಂಕ ಮನೆ ಮಾಡಿದೆ. ಮಹಾರಾಷ್ಟ್ರದಲ್ಲಿ ಸತತ ಮಳೆ ಸುರಿಯುತ್ತಿರುವುದರಿಂದ ಕೊಯ್ನಾ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದ್ದು, ಹೆಚ್ಚುವರಿ ನೀರನ್ನು ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಕ್ಕೆ ಹರಿದು ಬರುತ್ತಿದೆ. ಹೀಗಾಗಿ ಕಷ್ಣೆ ಮೈದುಂಬಿ ಹರಿಯುತ್ತಿದ್ದಾಳೆ.
ಪರಿಹಾರ ಬಗ್ಗೆ ಈಗ ಏನು ಹೇಳಲಾಗದು. ಪ್ರವಾಹ ಇಳಿಮುಖವಾದ ನಂತರ ಸರ್ವೇ ಕಾರ್ಯಕ್ಕೆ ಸೂಚಿಸಲಾಗುವುದು, ಕೃಷಿ, ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ಮಾಡಿ ಕೊಡುವ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು, ಸರಕಾರ ನೀಡುವ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು, ಸಂತ್ರಸ್ತ ರೈತರು ತಾಳ್ಮೆಯಿಂದ ಇರಬೇಕು. ಜನ-ಜಾನವಾರು ನದಿಗೆ ಇಳಿಯದಂತೆ ಡಂಗೂರ ಹಾಕಿ ಜಾಗೃತಿ ಮೂಡಿಸಲು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಲಾಗಿದೆ.
•ಎಂ. ಕೂರ್ಮಾರಾವ್, ಜಿಲ್ಲಾಧಿಕಾರಿ
•ಸಿದ್ದಯ್ಯ ಪಾಟೀಲ