ದೇವನಹಳ್ಳಿ: ಬಯಲುಸೀಮೆಯ ಪ್ರದೇಶದ ರೈತರಿಗೆ ಮಳೆ ಸಂತಸ ತಂದರೆ, ಮತ್ತೂಂದು ಕಡೆ ರೈತರಿಗೆ ಜಿಲ್ಲೆಯಲ್ಲಿ ರಾಗಿ ಬೆಳೆ ಪ್ರಧಾನವಾಗಿದ್ದು, ಸತತ ಮಳೆಯಿಂದ ರೈತರು ತಾವು ಬೆಳೆದ ರಾಗಿ ಉತ್ತಮ ಇಳುವರಿ ಬರುತ್ತದೆ ಎನ್ನುವ ನಿರೀಕ್ಷೆ ಸುಳ್ಳಾಗಿದೆ. ಕಳೆದ ಮೂವತ್ತು ವರ್ಷಗಳಿಂದ ಸರಿಯಾದ ಪ್ರಮಾಣದಲ್ಲಿ ಮಳೆಯಾಗಿರಲ್ಲಿಲ್ಲ.
ಜಿಲ್ಲೆಯ ನಾಲ್ಕು ತಾಲೂಕು ಬರಪೀಡಿತ ತಾಲೂಕುಗಳೆಂದು ಸರ್ಕಾರದಿಂದ ಘೋಷಣೆಯಾಗುತ್ತಿದ್ದವು. ಈ ಬಾರಿ ಉತ್ತಮ ಮಳೆ ಆಗಿರುವುದರಿಂದ ಜಿಲ್ಲೆಯ ಎಲ್ಲ ಕೆರೆಗಳು ತುಂಬಿ ಕೋಡಿ ಹೋಗಿ ಹರಿದಿದೆ. ಇತ್ತೀಚೆಗೆ ಸುರಿದ ಸತತ ಮಳೆಯಿಂದ ರಾಗಿ ಬೆಳೆ ನೆಲಕಚ್ಚಿದ್ದು, ಕಷ್ಟಪಟ್ಟು ಬೆಳೆದ ರೈತ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ.
ಉತ್ತಮ ಮಳೆ ಆಗಿರುವುದರಿಂದ ಕೆರೆ ಸುತ್ತಮುತ್ತಲಿನ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದ್ದು, ನೀರಿಲ್ಲದೆ ಒಣಗಿ ಹೋಗಿದ್ದ ಬಾವಿಗಳಿಗೆ ಮಳೆಯ ನೀರು ಆಶ್ರಯವಾಗಿದೆ. ಕೃಷಿ ಹೊಂಡಗಳಲ್ಲೂ ಸಹ ಮಳೆ ನೀರು ಶೇಖರಣೆ ಯಾಗಿರುವುದರಿಂದ ರೈತರ ಬೆಳೆಗಳಿಗೆ ಸಂಜೀವಿನಿಯಾಗಿದೆ.
ಶೇ. 40ರಷ್ಟು ಫಸಲು ಭೂಮಿಪಾಲು: ಗ್ರಾಮೀಣ ಭಾಗದ ರೈತರು ಕಣ ಮಾಡುವಲ್ಲಿ ತೊಡಗಿಸಿಕೊಂಡಿದ್ದು, ಕಣದಲ್ಲಿ ರಾಗಿಯನ್ನು ಬೇರ್ಪಡಿಸಲು ಯಂತ್ರಗಳನ್ನು ಬಳಸಿಕೊಂಡು ರಾಗಿ ಸಂಗ್ರಹದಲ್ಲಿ ತೊಡಗಿಕೊಂಡಿದ್ದಾರೆ. ಕಳೆದ ವರ್ಷದಲ್ಲಿ ರಾಗಿ ಫಸಲು ಉತ್ತಮವಾಗಿ ಬಂದಿದ್ದು, ಈ ಬಾರಿಯೂ ರಾಗಿ ಫಸಲು ಉತ್ತಮವಾಗಿ ಬಂದಿತ್ತು.
ಆದರೆ, ವಾಯು ಭಾರ ಕುಸಿತದಿಂದ ಜಿಲ್ಲೆಯಲ್ಲಿ ಬಹುತೇಕ ರೈತರು ಬೆಳೆದ ರಾಗಿ ಇಳುವರಿ ಶೇ. 60ರಷ್ಟು ಮಾತ್ರ ಕೈ ಸೇರಿ ದ್ದು, ಶೇ. 40ರಷ್ಟು ರಾಗಿ ಫಸಲು ಭೂಮಿ ಪಾಲಾಗಿದೆ. ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ನೆಲಮಂಗಲ ತಾಲೂಕು ಗಳ ಗ್ರಾಮೀಣ ಪ್ರದೇಶದಲ್ಲಿ ರೈತರು ಸಾಕಷ್ಟು ಇದ್ದು, ತಮ್ಮ ಜಮೀನುಗಳಲ್ಲಿ ನಿರೀಕ್ಷೆಯನ್ನಿಟ್ಟುಕೊಂಡು ರಾಗಿ ಚೆಲ್ಲಲಾಗಿತ್ತು.
ಆದರೆ, ಸತತ ಮಳೆಯಿಂದ ಹಾಕಿದ್ದ ರಾಗಿ ಫಸಲು ನೆಲಕಚ್ಚಿದ್ದು, ಉಳಿದ ಅಲ್ಪಸ್ಪಲ್ಪ ರಾಗಿ ಬೆಳೆಯನ್ನು ಕಟಾವು ಮಾಡಿಸಿ, ಕಣ ಮಾಡಿ ರಾಗಿ ಪಡೆದಿದ್ದಾರೆ. 53.3 ಸಾವಿರ ಹೆಕ್ಟೇರ್ ಬಿತ್ತನೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಶೇ. 105 ಗುರಿ ಸಾಧಿಸಿದೆ.
ದೇವನಹಳ್ಳಿ ತಾಲೂಕಿನಲ್ಲಿ 10. 8 ಸಾವಿರ ಹೆಕ್ಟೇರ್. ಗುರಿಯ ಪೈಕಿ 10.8 ಸಾವಿರ ಹೆಕ್ಟೇರ್, ದೊಡ್ಡಬಳ್ಳಾಪುರ ತಾಲೂಕಿನಲ್ಲಿ 13.7 ಸಾವಿರ ಹೆಕ್ಟೇರ್ ಪೈಕಿ 16.7 ಸಾವಿರ ಹೆಕ್ಟೇರ್, ನೆಲಮಂಗಲ ತಾಲೂಕಿನಲ್ಲಿ 16.1 ಸಾವಿರ ಹೆಕ್ಟೇರ್ ಪೈಕಿ 16.0 ಸಾವಿರ ಹೆಕ್ಟೇರ್, ಹೊಸಕೋಟೆ ತಾಲೂಕಿನಲ್ಲಿ 9.ಸಾವಿರ ಹೆಕ್ಟೇರ್ ಪೈಕಿ 9.7 ಸಾವಿರ ಹೆಕ್ಟೇರ್ ಗುರಿಯನ್ನು ಸಾಧಿಸಲಾಗಿದೆ. ಒಟ್ಟು ಜಿಲ್ಲೆಯಲ್ಲಿ 50.4ಸಾವಿರ ಹೆಕ್ಟೇರ್ ಗುರಿಯಲ್ಲಿ 53.3 ಸಾವಿರ ಹೆಕ್ಟೇರ್ ವಿಸ್ತೀರ್ಣದಲ್ಲಿ ರಾಗಿ ಬೆಳೆಯಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತಾಲೂಕುವಾರು ಶೇ.ರಾಗಿ ಬೆಳೆ: ದೇವನಹಳ್ಳಿ ಶೇ. 98.10 ರಷ್ಟು, ದೊಡ್ಡಬಳ್ಳಾಪುರ ಶೇ. 101.03 ರಷ್ಟು, ಹೊಸಕೋಟೆಯಲ್ಲಿ ಶೇ.99.73ರಷ್ಟು, ನೆಲಮಂಗಲ ತಾಲೂಕಿನಲ್ಲಿ ಶೇ. 99.25ರಷ್ಟು ರಾಗಿ ಬಿತ್ತನೆ ಮಾಡಲಾಗಿತ್ತು. ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಮತ್ತು ಹೈನುಗಾರಿಕೆ ಅವಲಂಬಿತ ರೈತರಿದ್ದು, ಈ ಬಾರಿ ಮಳೆಯ ಅವಾಂತರದಿಂದ ರಾಗಿ ಬೆಳೆದ ರೈತರಿಗೆ ನಿರಾಸೆಯಾಗಿದೆ. ಒಂದು ಎಕರೆ ಪ್ರದೇಶದಲ್ಲಿ ರಾಗಿ ಬೆಳೆದರೆ 20 ಪಲ್ಲವಾದರೂ ಸಿಗುತ್ತಿತ್ತು.
ಆದರೆ, ಈ ಬಾರಿ ಎಕರೆಗೆ 9 ಪಲ್ಲ ಮಾತ್ರ ರೈತರ ಕೈ ಸೇರಿದೆ. ಇದರಿಂದ ರೈತರ ಜೇಬಿಗೆ ಕತ್ತರಿ ಬಿದ್ದಂತಾಗಿದೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
“ಜಿಲ್ಲೆಯಲ್ಲಿ ಹೆಚ್ಚಿನ ಮಳೆ ಆಗಿರುವುದರಿಂದ ರಾಗಿ ಬೆಳೆ ನೆಲಕಚ್ಚಿದೆ. ರೈತರು ಉತ್ತಮ ಇಳುವರಿ ಬರುವ ನಿರೀಕ್ಷೆಯಲ್ಲಿದ್ದರು. ಜಿಲ್ಲೆಯಲ್ಲಿ 7.5 ಸಾವಿರ ಹೆಕ್ಟೇರ್ ರಾಗಿ ಬೆಳೆ ನಷ್ಟವಾಗಿದೆ. ಮುಂದಿನ ವರ್ಷಗಳಲ್ಲಿ ಇದೇ ರೀತಿ ಸನ್ನಿವೇಶ ಮರುಕಳಿಸಬಹುದು. ಅದಕ್ಕಾಗಿ ರೈತರು ಬೆಳೆವಿಮೆ ಮಾಡಿಸಿಕೊಂಡರೆ ಅನುಕೂಲವಾಗುತ್ತದೆ.”
● ಜಯಸ್ವಾಮಿ, ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ
“ರಾಗಿ ಬೆಳೆ ಅರ್ಧಕ್ಕೆ ಅರ್ಧದಷ್ಟು ಹಾಗೂ ಕೆಲವು ಕಡೆ ಸಂಪೂರ್ಣವಾಗಿ ಮಳೆಯಿಂದ ನೆಲಕಚ್ಚಿದ್ದು, ರಾಗಿ ಬೆಳೆದ ರೈತರಿಗೆ ಆರ್ಥಿಕವಾಗಿ ಪೆಟ್ಟು ಬಿದ್ದಿದೆ. ಸರ್ಕಾರ ರೈತರಿಗೆ ಬೆಂಬಲ ಬೆಲೆ ಹೆಚ್ಚಿಸಿದರೆ ಅನುಕೂಲವಾಗುತ್ತದೆ. ಒಂದು ಕ್ವಿಂಟಲ್ ರಾಗಿ ಬೆಳೆಯಬೇಕಾದರೆ 3 ಸಾವಿರ ರೂ. ಖರ್ಚು ಬರುತ್ತದೆ. ಕಳೆದ ಬಾರಿ ರಾಗಿ ಇಳುವರಿ ಚೆನ್ನಾಗಿ ಬಂದಿತ್ತು.”
● ವೆಂಕಟೇಶ್, ರೈತ
– ಎಸ್.ಮಹೇಶ್