ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಮಳೆ ಕೊಂಚ ಮಟ್ಟಿಗೆ ಬಿಡುವು ಕೊಟ್ಟಿದೆ. ಆದರೆ ಮಳೆಯಿಂದಾಗಿ ರಾಗಿ, ಜೋಳ, ಅವರೆ ಮೊದಲಾದ ಕೃಷಿ ಬೆಳೆಗಳು, ಬಾಳೆ, ದ್ರಾಕ್ಷಿ, ತರಕಾರಿ ಮೊದಲಾಗಿ ತೋಟಗಾರಿಕೆ ಬೆಳೆಗಳು ಹಾಳಾಗಿ ರೈತರನ್ನು ಆತಂಕಕ್ಕೀಡು ಮಾಡಿವೆ.
ಹುಸಿಯಾದ ಉತ್ತಮ ರಾಗಿ ನಿರೀಕ್ಷೆ: ತಾಲೂಕಿನ ಹೋಬಳಿಗಳಲ್ಲಿ 2021-22ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆಯ ಬೆಳೆ ಪ್ರಗತಿಯ ನ್ವಯ ಏಕದಳ ಧಾನ್ಯಗಳ ಬಿತ್ತನೆಯಲ್ಲಿ ಶೇ.101ರಷ್ಟು ತನ್ನ ಗುರಿಯನ್ನು ಮುಟ್ಟಿದೆ.
ರಾಗಿ, ಮುಸುಕಿನ ಜೋಳ, ಭತ್ತ, ತೃಣಧಾನ್ಯ, ಮೇವಿನ ಜೋಳ, ಪಾಪ್ ಕಾರ್ನ್ (ಏಕದಳ) ತೊಗರಿ, ಅಲಸಂದೆ, ಅವರೆ, ಉದ್ದು, ಹೆಸರು, ಹುರುಳಿ (ದ್ವಿದಳ), ನೆಲೆಗಡಲೆ, ಹರಳು, ಸಾಸುವೆ, ಹುಚ್ಚೆಳ್ಳು (ಎಣ್ಣೆಕಾಳು) ಸೇರಿದಂತೆ ಎಲ್ಲಾ ಬೆಳೆಗಳ 22,210 ಹೆಕ್ಟೇರ್‌ಗಳ ಗುರಿಗೆ 23,883 ಹೆಕ್ಟೇರ್‌ಗಳ ಗುರಿ ತಲುಪಿದೆ. 13,793 ಹೆಕ್ಟೇರ್‌ಗಳ ಗುರಿಯನ್ನು ಹೊಂದಿದ್ದ ರಾಗಿ ಬೆಳೆ 16,710 ಹೆಕ್ಟೇರ್‌ಗಳಲ್ಲಿ ಹಾಗೂ 7,270 ಹೆಕ್ಟೇರ್‌ಗಳ ಗುರಿಯನ್ನು ಹೊಂದಿದ್ದ ಮುಸುಕಿನ ಜೋಳದ ಬೆಳೆ 5,415 ಹೆಕ್ಟೇರ್‌ಗಳಲ್ಲಿ ಬೆಳೆಯಲಾಗಿದೆ.
ರೈತರಿಗೆ ಈಗ ನಿರಾಸೆ: ಸರ್ಕಾರದ ಬೆಂಬಲ ಬೆಲೆ ಯೋಜನೆಯಲ್ಲಿ ರಾಗಿ ಖರೀದಿ ಮಾಡುತ್ತಿರುವುದರಿಂದ ನಿಗದಿತ ಬೆಲೆ, ಸೂಕ್ತ ಸಮಯಕ್ಕೆ ಹಣ ಬರುವ ನಿರೀಕ್ಷೆ ಹಾಗೂ ರಾಸುಗಳಿಗೆ ಒಣ ಹುಲ್ಲು ದೊರೆ ಯುವ ನಿರೀಕ್ಷೆಯಲ್ಲಿದ್ದ ರೈತರಿಗೆ ಈಗ ನಿರಾಸೆ ಯುಂಟಾ ಗಿದೆ. ಒಂದು ವಾರದಿಂದಲು ಸುರಿಯುತ್ತಲೇ ಇರುವ ಮಳೆಯಿಂದಾಗಿ ರಾಗಿ ಹೊಲಗಳು ಸಂಪೂರ್ಣವಾಗಿ ನೆಲಕಚ್ಚಿದ್ದು, ರಾಗಿ ತೆನೆಗಳು ಮೊಳಕೆಯೊಡೆದು ಪೈರು ಬೆಳೆದಿವೆ. ಈಗ ಮಳೆ ನಿಂತರು ಹುಲ್ಲು ಸಹ ಮೇವಿಗೆ ಹುಲು ಸಹ ದೊರಕದಂತಾಗಿದೆ.
ಹಾಳಾದ ತರಕಾರಿ, ದ್ರಾಕ್ಷಿ ಬೆಳೆ: ಪಾಲಿಹೌಸ್‌ಗಳಲ್ಲಿ ಬೆಳೆಸಲಾಗಿರುವ ಒಂದಿಷ್ಟು ತರಕಾರಿ, ಹೂವುಗಳನ್ನು ಹೊರತು ಬಯಲಿನಲ್ಲಿ ಬೆಳೆಸಲಾಗಿದ್ದ ಬಹುತೇಕ ತರಕಾರಿ, ಹೂವು ಬೆಳೆ ಮಳೆಯಿಂದಾಗಿ ನಾಶವಾಗಿದೆ. ಅಳಿದುಳಿದಿರುವ ಟೊಮ್ಯಾಟೋ ಕಾಯಿಗಳ ತೊಟ್ಟುಗಳು ಕಪ್ಪಾಗಿ ಗಿಡದಿಂದ ಬಿದ್ದು ಹೋಗುತ್ತಿವೆ. ಕ್ಯಾರೆಟ್, ಮೂಲಂಗಿ, ಭೂಮಿಯಲ್ಲೇ ಕೊಳೆತು ಹೋಗಿವೆ. ಹೂವುಗಳು ನೀರು ತುಂಬಿಕೊಂಡು ಬಾಡಿ ದಂತಾಗಿವೆ. ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಏರಿಕೆಯಾಗಿದ್ದರು ರೈತರಿಗೆ ಅದರ ಲಾಭ ಸಿಗುತ್ತಿಲ್ಲ.
ಮಳೆಯಿಂದಾಗಿ ಈ ಬಾರಿ ಕಟಾವಿಗೆ ಬಂದಿದ್ದ ದ್ರಾಕ್ಷಿ ಗಿಡದಲ್ಲಿಯೇ ಕೊಳೆಯುತ್ತಿದ್ದು, ದ್ರಾಕ್ಷಿಗೆ ಬೆಲೆ ಕಡಿಮೆಯಾಗಿದೆ. ಬಾಳೆ, ಆಲೂಗಡ್ಡೆ, ಬೀನ್ಸ್ ಮೊದಲಾದ ಬೆಳೆಗಳು ಹಾಳಾಗಿವೆ. ಪರಿಸ್ಥಿತಿ ಸುಧಾರಿಸ ಬೇಕಾದರೆ ಇನ್ನೂ ಮೂರು ತಿಂಗಳು ಕಾಯಬೇಕಿದೆ ಎನ್ನುತ್ತಾರೆ ವಡ್ಡರಹಳ್ಳಿ ರೈತ ಶ್ರೀನಿವಾಸ ರೆಡ್ಡಿ
ಮೂರು ದಿನಗಳಲ್ಲಿ ಮಾಹಿತಿ ಸಂಗ್ರಹ
ತಾಲೂಕಿನಲ್ಲಿ ಈವರೆಗೆ ಅಂದಾಜು 120 ಹೆಕ್ಟೇರ್ ತೋಟಗಾರಿಕೆ ಬೆಳೆ ನಷ್ಟವಾಗಿದೆ. ತೋಟಗಾರಿಕೆ, ಕಂದಾಯ ಹಾಗೂ ಕೃಷಿ ಇಲಾಖೆ ಜಂಟಿ ಸರ್ವೆ ನಡೆಸಲಾಗುತ್ತಿದ್ದು, ಇನ್ನು ಮೂರು ದಿನಗಳೊಳಗೆ ವರದಿ ಸಲ್ಲಿಸಲಾಗುವುದು. ಬೆಳೆ ಹಾನಿಗೊಳಗದ ರೈತರ ಎಫ್‌ಐಡಿ ಮಾಹಿತಿಯನ್ನು ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆಯ ತಾಲೂಕು ಹಿರಿಯ ಸಹಾಯಕ ನಿರ್ದೇಶಕ ಎಂ.ಶ್ರೀನಿವಾಸ್ ತಿಳಿಸಿದ್ದಾರೆ.