ಕುಷ್ಟಗಿ: ಬೆಳೆ ಸಮೀಕ್ಷಗಾರರ ಎಡವಟ್ಟಿಗೆ ತೊಗರಿ ಬೆಳೆಗಾರರು ತೊಂದರೆಗೆ ಸಿಲುಕಿದ್ದು, ಸಮಸ್ಯೆ ಪರಿಹಾರಕ್ಕಾಗಿ ಬೆಳೆ ದರ್ಶಕ್ ಮೊಬೈಲ್ ಆ್ಯಪ್ ಮೂಲಕ ಆಕ್ಷೇಪಣೆ ಸಲ್ಲಿಸಿ ಪರಿಹಾರ ಕಂಡುಕೊಳ್ಳುವ ಅನಿವಾರ್ಯತೆ ಎದುರಿಸುವಂತಾಗಿದೆ.
ಬೆಂಬಲ ಬೆಲೆ ತೊಗರಿ ಖರೀದಿಗೆ ಆನ್‌ಲೈನ್ ನೋಂದಣಿಗೆ ಬೆಳೆದರ್ಶಕ ಮೊಬೈಲ್ ಆ್ಯಪ್‌ನಲ್ಲಿ ತೊಗರಿ ಬೆಳೆ ನಮೂದಾಗಿರಬೇಕು. ಆಗ ಮಾತ್ರ ಆನ್‌ಲೈನ್‌ನಲ್ಲಿ ನೋಂದಣಿ ಸಾಧ್ಯವಿದೆ. ಆದರೆ ಈಗ ಬೆಳೆ ಸಮೀಕ್ಷಾಗಾರರು ಸರಿಯಾಗಿ ಬೆಳೆ ಸಮೀಕ್ಷೆ ನಮೂದು ಮಾಡದಿರುವುದು ತೊಗರಿ ಬದಲಿಗೆ ಬೇರೆ ಬೆಳೆ ನಮೂದಾಗಿದೆ. ಹೀಗಿದ್ದರೆ ಆನ್‌ಲೈನ್‌ನಲ್ಲಿ ನೋಂದಣಿ ಸ್ವೀಕೃತವಾಗದ ಹಿನ್ನೆಲೆಯಲ್ಲಿ ಪುನಃ ಬೆಳೆ ದರ್ಶಕ್ ಮೊಬೈಲ್ ಆ್ಯಪ್ ಮೊರೆ ಹೋಗಬೇಕಿದೆ.
ಆ್ಯಪ್‌ನಲ್ಲಿ ಆಕ್ಷೇಪಣೆ ಸಲ್ಲಿಸಿ ಖುದ್ದು ರೈತರೇ ತಮ್ಮ ಜಮೀನಿಗೆ ಹೋಗಿ ಜಿಪಿಎಸ್ ಆಧಾರಿತವಾಗಿ ಬೆಳೆಯ ಫೋಟೋ ತೆಗೆದು ಅಪ್ಲೋಡ್ ಮಾಡಬೇಕು. ಅಪ್ಲೋಡ್ ಆದ ಫೋಟೋ ಕೃಷಿ ಇಲಾಖೆ ಮೇಲ್ವಿಚಾರಕರ ಲಾಗಿನ್‌ನಲ್ಲಿ ಇರುತ್ತದೆ. ಮೇಲ್ವಿಚಾರಕರು ಗಮನಿಸಿ ತೊಗರಿ ಬೆಳೆ ದೃಢೀಕರಿಸಿದರೆ ಮಾತ್ರ ಆನ್‌ಲೈನ್‌ನಲ್ಲಿ ನೋಂದಣಿ ಸಾಧ್ಯ. ಅಲ್ಲದೇ ಕೆಲ ರೈತರ ಪಹಣಿಯಲ್ಲಿ ತೊಗರಿ ಬೆಳೆ ನಮೂದಾಗಿರುವುದುಮತ್ತೂಂದು ಸಮಸ್ಯೆಯಾಗಿದ್ದು, ಭೂಮಿ, ಬೆಳೆ ಸಮೀಕ್ಷೆ ಹಾಗೂ ಫ್ರುಟ್ ಐಡಿಯಲ್ಲಿ ಲಿಂಕ್ ಸಮಸ್ಯೆ ವ್ಯತ್ಯಾಸವಾಗಿದೆ. ಬಹುತೇಕ ತೊಗರಿ ಬೆಳೆಗಾರರು ಆ್ಯಂಡ್ರಾಯ್ಡ್ ಮೊಬೈಲ್ ಹೊಂದಿಲ್ಲ. ಹೀಗಾಗಿ ಬೆಳೆ ದರ್ಶಕ ಆ್ಯಪ್ ಮೂಲಕ ತೊಗರೆ ಬೆಳೆ ನಮೂದಿಗೆ ಕೃಷಿ ಇಲಾಖೆಗೆ ಅಲೆಯುವಂತಾಗಿದೆ.
ಮೇಲ್ವಿಚಾರಕರ ನಿಯೋಜನೆ: ಉದ್ಭವಿಸುವ ತೊಂದರೆ ಸರಿಪಡಿಸಲು ಇಲ್ಲಿನ ತಾಲೂಕಿನ ಮೂರು ತೊಗರಿ ಆನ್‌ಲೈನ್ ನೋಂದಣಿ ಕೇಂದ್ರಗಳಲ್ಲಿ ತಲಾ ಒಬ್ಬರಂತೆ ಮೇಲ್ವಿಚಾರಕನ್ನು ನಿಯೋಜಿಸಲು ಕೃಷಿ ಇಲಾಖೆ ಯೋಜಿಸಿದೆ. ಆದರೆ ಅದು ಈವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ತೊಗರಿ ಆನ್‌ಲೈನ್ ನೋಂದಣಿ ಜ.31ಕ್ಕೆ ಕೊನೆಯಾಗಲಿದ್ದು ಇಷ್ಟು ದಿನಗಳಲ್ಲಿ ಈ ಸಮಸ್ಯೆಗೆ ಪರಿಹಾರ ಸಾಧ್ಯವೇ? ಎಂಬ ಗೊಂದಲ ಉಂಟಾಗಿದೆ. ಹೀಗಾಗಿ ರೈತರು ಈ ಸಮಸ್ಯೆಗೆ ನೋಂದಣಿ ಕೇಂದ್ರ, ಕೃಷಿ ಇಲಾಖೆಗೆ ಪರದಾಡುವಂತಾಗಿದೆ.