ಬೀದರ: ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅವರು ಇತ್ತೀಚೆಗೆ ಬಸವಕಲ್ಯಾಣ ತಾಲೂಕಿನ ಪರತಾಪುರ ಗ್ರಾಮದ ರೈತ ಕರಣ್ ಅವರ ಜಮೀನಿಗೆ ಭೇಟಿ ನೀಡಿ, ಬೆಳೆ ಸಮೀಕ್ಷೆಯ ಮಾಹಿತಿ ಪಡೆದರು. ರೈತ ಕರಣ್ ಅವರು ಅಂದಾಜು 5 ಎಕರೆ ಜಮೀನಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಬೆಳೆಸಿದ ಬೆಳೆಗಳ ವೀಕ್ಷಣೆ ನಡೆಸಿದರು. ಈ ಬೆಳೆ ಸಮೀಕ್ಷೆ ಪ್ರಕ್ರಿಯೆಗೆ ಬಂದಿದ್ದ ಗ್ರಾಮ ಲೆಕ್ಕಾಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳು ಚರ್ಚಿಸಿದರು.
ಕ್ರಾಪ್ ಸರ್ವೇ ಆಪ್ ಮೂಲಕ ಬೆಳೆ ನೋಂದಣಿ ಮಾಡುವ ವಿಧಾನ, ಬೆಳೆಗಳ ಫೋಟೋವನ್ನು ಅಪ್ ಲೋಡ್ ಮಾಡುವ ವಿಧಾನ ಸೇರಿದಂತೆ ಹಲವಾರು ಮಾಹಿತಿಯನ್ನು ಇದೇ ವೇಳೆ ಜಿಲ್ಲಾಧಿಕಾರಿಗಳು ಪಡೆದುಕೊಂಡರು.
ರೈತ ಕರಣ್ ಅವರ ಐದು ಎಕರೆ ಜಮೀನಿನಲ್ಲಿ ಇರುವ ಕೋತಂಬರಿ, ಪುಂಡಿ ಪಲ್ಯ, ಜೋಳ, ಕಡಲೆ ಎಲ್ಲವನ್ನು ಗುರುತಿಸಿ ಬೆಳೆ ಸಮೀಕ್ಷೆ ಆಪ್‌ನಲ್ಲಿ ನೋಂದಣಿ ಮಾಡುವ ಪ್ರಕ್ರಿಯೆಯ ಸಮಗ್ರ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಬೆಳೆ ಸಮೀಕ್ಷೆ ಕಾರ್ಯವನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎನ್ನುವ ಸರ್ಕಾರದ ಆದೇಶ ಪಾಲನೆ ಮಾಡಬೇಕು. ಎಲ್ಲ ಗ್ರಾಪಂಗಳ ಪಿಡಿಒ ಮತ್ತು ಗ್ರಾಮ ಲೆಕ್ಕಿಗರು ಗಮನ ಹರಿಸಬೇಕು ಎಂದು ತಿಳಿಸಿದರು.
ತಹಶೀಲ್ದಾರ್‌ಗೆ ಸೂಚನೆ: ಈ ಬೆಳೆ ಸಮೀಕ್ಷೆಯು ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ತಹಶೀಲ್ದಾರರು ಈ ಬಗ್ಗೆ ಮುತುವರ್ಜಿ ವಹಿಸಿ, ಪ್ರತಿ ಗಂಟೆಗೊಮ್ಮೆ ಪರಿಶೀಲನೆ ನಡೆಸುತ್ತ ನೋಂದಣಿ ಪ್ರಕ್ರಿಯೆ ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಇದೇ ವೇಳೆಯಲ್ಲಿ ಜಿಲ್ಲಾಧಿಕಾರಿಗಳು ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದರು. ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಸಹಾಯಕ ಆಯುಕ್ತ ಭುವನೇಶ ಪಟೇಲ್, ತಹಶೀಲ್ದಾರ್ ಸಾವಿತ್ರಿ ಸಲಗರ ಇದ್ದರು.