Advertisement

ಬೆಳೆ ಸಮೀಕ್ಷೆ ನಿರ್ಲಕ್ಷಿಸಿದ ಅಧಿಕಾರಿಗಳ ಚಳಿ ಬಿಡಿಸಿದ ಸಚಿವ

11:59 AM Sep 09, 2020 | Suhan S |

ಮೈಸೂರು: ಬೆಳೆ ಸಮೀಕ್ಷೆ ಕಾರ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸಾಧನೆ ತೋರದೆ ನಿರ್ಲಕ್ಷ್ಯ ವಹಿಸಿದ ಐವರು ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದ ಕೃಷಿ ಸಚಿವ ಬಿ.ಸಿ. ಪಾಟೀಲ್‌ ಶಿಸ್ತುಕ್ರಮಕ್ಕೆ ಸೂಚಿಸಿದರು.

Advertisement

ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮಂಗಳವಾರ ನಡೆದ ಮೈಸೂರು ವಿಭಾಗ ಮಟ್ಟದ (8 ಜಿಲ್ಲೆ ಒಳಗೊಂಡಂತೆ) ಪ್ರಗತಿ ಪರಿಶೀಲನಾ ಮತ್ತು ಬೆಳೆ ಸಮೀಕ್ಷೆ ಪ್ರಗತಿ ಕುರಿತು ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮೈಸೂರು ವಿಭಾಗದ ವ್ಯಾಪ್ತಿಗೆ ಬರುವ ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು, ಹಾಸನ, ದಕ್ಷಿಣಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳ ಕೃಷಿ ಇಲಾಖೆಯ ಪ್ರಗತಿಪರಿಶೀಲನೆ ಸಭೆ ನಡೆದಿದ್ದು, ಬೆಳೆ ಹಾನಿ, ಬಿತ್ತನೆ ಕಾರ್ಯ, ರಸಗೊಬ್ಬರ ಪೂರೈಕೆ ಸೇರಿದಂತೆ ಹಲವು ವಿಚಾರಗಳನ್ನು ಚರ್ಚಿಸಿ ಅಧಿಕಾರಿಗಳಿಗೆ ಸಲಹೆ ನೀಡಲಾಗಿದೆ ಎಂದು ತಿಳಿಸಿದರು.

ಪ್ರವಾಹದಿಂದಾಗಿ ಬೆಳೆ ಹಾನಿಗೀಡಾಗಿರುವ ಪ್ರದೇಶಗಳಲ್ಲಿ ಸರ್ವೆ ನಡೆಸುವ ಕಾರ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಸಾಧಿಸದೆ ನಿರ್ಲಕ್ಷ್ಯವಿಳಂಬಕ್ಕೆಕಾರಣವಾಗಿರುವ ಮೂರು ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರರು, ಇಬ್ಬರು ಸಹಾಯಕ ನಿರ್ದೇಶಕರನ್ನು ಅಮಾನತುಪಡಿಸಿ ಅಗತ್ಯ ಕ್ರಮ ಜರುಗಿಸಲಾಗುವುದು ಎಂದರು.

ಶಿಸ್ತುಕ್ರಮ: ಪ್ರವಾಹ ಅಥವಾ ಬರ ಉಂಟಾದಾಗ ಕೃಷಿ ಇಲಾಖೆ ಅಧಿಕಾರಿಗಳು ಸರ್ವೆ ನಡೆಸಿ ವರದಿ ಕೊಡುತ್ತಿದ್ದರು. ಆದರೆ, ಈಗ ಸರ್ಕಾರವೇ ನಿಮ್ಮಜಮೀನು-ನಿಮ್ಮ ಸಮೀಕ್ಷೆ ಎನ್ನುವಂತೆ ರೈತರೇ ಬೆಳೆ ಹಾನಿಗೀಡಾದ ಬಗ್ಗೆ ಫೋಟೋ ತೆಗೆದು ಅಪ್‌ಲೋಡ್‌ ಮಾಡುವಂತೆ ಅವಕಾಶ ಕೊಡಲಾಗಿತ್ತು. ಅದರಂತೆ, ಅಧಿಕಾರಿಗಳು ಕ್ಷೇತ್ರದಲ್ಲಿದ್ದುಕೊಂಡು ರೈತರಿಗೆ ಅಗತ್ಯ ಮಾಹಿತಿ ಕೊಟ್ಟು ಸರ್ವೆ ಕಾರ್ಯ ಮಾಡಿಸಬೇಕಾಗಿತ್ತಾದರೂ ನಿರೀಕ್ಷೆಯಂತೆ ಪ್ರಗತಿ ಸಾಧಿಸದ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ತಮಜರುಗಿಸಲಾಗುವುದು ಎಂದು ಹೇಳಿದರು.

ಪ್ರಗತಿ ಕುಂಠಿತ: ಚಾಮಜನಗರ ಜಿಲ್ಲೆಯಲ್ಲಿ ಶೇ.19ರಷ್ಟು, ಮಂಡ್ಯ ಜಿಲ್ಲೆಯಲ್ಲಿ ಶೇ.18.73 ಹಾಸನ ಜಿಲ್ಲೆಯಲ್ಲಿ ಶೇ.35.94ರಷ್ಟು ಪ್ಲಾಟ್‌ಗಳ ಸಮೀಕ್ಷೆ ನಡೆಸಿ ಪ್ರಗತಿ ಕುಂಠಿತವಾಗಿರುವ ಹಿನ್ನೆಲೆಯಲ್ಲಿ ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆ ಜಂಟಿ ಕೃಷಿ ನಿರ್ದೇಶಕರು, ಕಡೂರು, ಅರಸೀಕೆರೆ ತಾಲೂಕಿನ ಸಹಾಯಕ ನಿರ್ದೇಶಕರನ್ನು ಅಮಾನತ್ತಿನಲ್ಲಿರಿಸಿ ಅಗತ್ಯ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದರು.

Advertisement

ರಾಜ್ಯದಲ್ಲಿ ವಾಡಿಕೆಯಂತೆ 721 ಮಿ.ಮೀ ಮಳೆಯಾಗಬೇಕಿತ್ತಾದರೂ 774 ಮಿ.ಮೀ.ಯಾಗಿ ನಿರೀಕ್ಷೆಗಿಂತ 8ರಷ್ಟು ಜಾಸ್ತಿಯಾಗಿದೆ. 73 ಲಕ್ಷ ಹೆಕ್ಟೇರ್‌ ನಲ್ಲಿ 74.2 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. 3.85 ಲಕ್ಷ ಬಿತ್ತನೆ ಬೀಜ ವಿತರಿಸಿದ್ದರೆ, 39 ಲಕ್ಷ ಬಿತ್ತನೆ ಬೀಜ ದಾಸ್ತಾನು ಇದೆ. 22.10 ಮೆಟ್ರಿಕ್‌ ಟನ್‌ ರಸಗೊಬ್ಬರವಿತರಿಸಿದ್ದರೆ, 9.51 ಮೆಟ್ರಿಕ್‌ ಟನ್‌ ದಾಸ್ತಾನು ಇದೆ ಎಂದರು.

ಬೆಳೆ ಪರಿಹಾರ: ಪ್ರಧಾನಮಂತ್ರಿ ಫ‌ಸಲ್‌ ಬಿಮಾ ಯೋಜನೆಯಡಿ 52.49 ಲಕ್ಷ ರೈತರಿಗೆ 481.5 ಕೋಟಿ ರೂ., ಸಿಎಂ ಕಿಸಾನ್‌ ಬಿಮಾ ಯೋಜನೆಯಡಿ 50.52 ಲಕ್ಷ ರೈತರಿಗೆ ಬೆಳೆ ಪರಿಹಾರ ಕೊಡಲಾಗಿದೆ. ಪ್ರವಾಹದಿಂದಾಗಿ ಬೆಳೆ ಹಾನಗೀಡಾಗಿದ್ದು, ಕೃಷಿ ಇಲಾಖೆಯಿಂದ 500 ಕೋಟಿ ರೂ.ನಷ್ಟು ನಷ್ಟವಾಗಿರುವ ಬಗ್ಗೆ ವರದಿ ಸಲ್ಲಿಸಲಾಗಿದೆ ಎಂದು ವಿವರಿಸಿದರು.

ಪ್ರೋತ್ಸಾಹಧನ: ಸೆಪ್ಟೆಂಬರ್‌ 23ವರೆಗೆ ಬೆಳೆ ನಷ್ಟದ ಸಮೀಕ್ಷೆ ಕಾರ್ಯ ಮುಗಿಸಬೇಕು. ಒಂದು ವೇಳೆ ರೈತನಿಗೆ ಸಮೀಕ್ಷೆ ಮಾಡಲು ಸಾಧ್ಯವಾಗದಿದ್ದರೆ ಅಂತಹವರು ಬೇರೊಬ್ಬರಿಗೆ ಸಹಿ ಮಾಡಿ ಸಮೀಕ್ಷೆ ಕಾರ್ಯ ನಡೆಸಿ ಅಪ್‌ಲೋಡ್‌ ಮಾಡಬಹುದು. ಒಂದೊಂದು ಫೋಟೋ ಅಪ್‌ಲೋಡ್‌ ಮಾಡಿದರೆ ಅವರಿಗೆ ಫೋಟೋಗೆ ಹತ್ತು ರೂ.ನಂತೆ ಪ್ರೋತ್ಸಾಹಧನ ಕೊಡಲಾಗುವುದು ಎಂದು ಮಾಹಿತಿ ನೀಡಿದರು.

74 ಲಕ್ಷ ರೈತರಿಂದ ಬೆಳೆ ಸಮೀಕ್ಷೆ: 18 ದಿನಗಳಲ್ಲಿ 74 ಲಕ್ಷ ರೈತರು ತಮ್ಮ ಜಮೀನಿನ ಬೆಳೆ ಹಾನಿಗೀಡಾಗಿರುವ ಬಗ್ಗೆ ಸಮೀಕ್ಷೆ ನಡೆಸಿ ಫೋಟೊ ಅಪ್‌ಲೋಡ್‌ಮಾಡಿದ್ದಾರೆ. ತಾಂತ್ರಿಕ ಸಮಸ್ಯೆ ಇದ್ದರೂ ರೈತರು ತಮ್ಮ ಬೆಳೆ ಸಮೀಕ್ಷೆ ನಡೆಸಿರುವುದು ಸಂತೋಷವಾಗಿದೆಎಂದರು. ಈ ಸಂದರ್ಭದಲ್ಲಿ ಕೃಷಿ ಇಲಾಖೆ ನಿರ್ದೇಶಕ ಬಿ.ವೈ. ಶ್ರೀನಿವಾಸ್‌ ಇತರರಿದ್ದರು

ರಸಗೊಬ್ಬರ ಅಕ್ರಮ ದಾಸ್ತಾನು ಮಾಡಿದರೆ ಕ್ರಮ : ರಾಜ್ಯಾದ್ಯಂತ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆ ಗೊಬ್ಬರ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ದಾಳಿ ನಡೆಸಿದ್ದು, ಇದುವರೆಗೆ 117ಅಂಗಡಿಗಳ ಮೇಲೆ ದಾಳಿ ನಡೆಸಿ ಪರವಾನಗಿ ರದ್ದುಪಡಿಸ ಲಾಗಿದೆ. ಕಳಪೆ ಬಿತ್ತನೆ ಬೀಜ, ರಸಗೊಬ್ಬರ ಮಾರಾಟ ಮಾಡುವವರ ಮೇಲೆ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ಎಚ್ಚರಿಕೆ ನೀಡಿದರು. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನಲ್ಲಿ ಯೂರಿಯಾ ವನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದವರಅಂಗಡಿ ಮಾಲೀಕರ ಮೇಲೆ ದಾಳಿ ನಡೆಸಿದಾಗ ನೇರವಾಗಿ ಸಿಕ್ಕಿಬಿದ್ದು ಪೊಲೀಸರಿಗೆ ದೂರು ಕೊಡಲಾಗಿತ್ತಾದರೂ, ಪೊಲೀಸರು ಜಾಮೀನಿನ  ಮೇಲೆ ಬಿಟ್ಟು ಕಳುಹಿಸಿದ್ದಾರೆ. ರೈತರ ವಿಚಾರದಲ್ಲಿ ಈ ರೀತಿ ಮಾಡಬಾರದೆಂದು ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಅವರೊಡನೆ ಮಾತುಕತೆ ನಡೆಸುವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next