ಧಾರವಾಡ: ಮೊಬೈಲ್ ಮೂಲಕವೇ ರೈತರು ತಮ್ಮ ಹೊಲದಲ್ಲಿ ನಿಂತು ತಾವು ಬೆಳೆದ ಬೆಳೆ ನಮೂದಿಸಲು ಸರ್ಕಾರ ನೂತನವಾಗಿ ರಚಿಸಿರುವ ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ಸಾಕಷ್ಟುಗೊಂದಲಗಳಿದ್ದು, ತಾಂತ್ರಿಕತೆಯೇ ಗೊತ್ತಿಲ್ಲ ಮುಗ್ಧ ರೈತರಿಗೆ ಬೆಳೆ ಹಾನಿಯಾದರೂ ಬೆಳೆ ವಿಮೆ ಸಿಗುವುದು ಕಷ್ಟವಾಗುತ್ತದೆ ಎನ್ನುವ ಆರೋಪ ರೈತ ವಲಯದಿಂದಲೇ ಕೇಳು ಬರುತ್ತಿವೆ.
ಬೆಳೆ ವಿಮೆಯನ್ನು ನಿರ್ಧರಿಸುವಾಗ ಬೆಳೆ ಸಮೀಕ್ಷೆ ಮತ್ತು ರೈತರು ತಮ್ಮ ಹೊಲದಲ್ಲಿಯಾವ ಬೆಳೆಗಳನ್ನು ಬೆಳೆದಿದ್ದಾರೆಂಬ ಮಾಹಿತಿಯನ್ನು ಇದೀಗ ಬೆಳೆ ಸಮೀಕ್ಷೆ ಆ್ಯಪ್ ಮೂಲಕ ಸರ್ಕಾರಕ್ಕೆ ಅಪ್‌ಲೋಡ್ ಮಾಡಬೇಕಿದೆ. ಇದಕ್ಕೆ ಆ.26 ಕೊನೆಯ ದಿನವಾಗಿತ್ತು. ರಾಜ್ಯಾದ್ಯಂತ 5.5 ಲಕ್ಷಕ್ಕೂಅಧಿಕ ರೈತರು ಈ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಂಡು ತಮ್ಮ ಬೆಳೆ ಮಾಹಿತಿಗಳನ್ನು ತರಾತುರಿಯಲ್ಲಿ ಅಪ್‌ಲೋಡ್ ಮಾಡಿದ್ದಾರೆ.
ಆದರೆ, ರೈತರು ಅಪ್‌ಲೋಡ್ ಮಾಡಿದ ಮಾಹಿತಿ ಸರಿಯಾಗಿದೆ ಅಥವಾ ಅಪೂರ್ಣವಾಗಿದೆ ಎಂಬುದನ್ನು ನಿರ್ಧರಿಸಿ ಅವರಿಗೆ ಮರಳಿ ಸಂದೇಶ ಕಲ್ಪಿಸುವ ವ್ಯವಸ್ಥೆಯೇ ಇಲ್ಲವಾಗಿರುವುದು ಅನೇಕ ಸಂಶಯಗಳಿಗೆ ಕಾರಣವಾಗಿದೆ. ಈ ಹಿಂದಿನ ವರ್ಷಗಳಲ್ಲಿ ರೈತರಿಗೆ ವಿಮಾ ಕಂಪನಿಗಳು ಬೆಳೆ ವಿಮೆ ನಿರಾಕರಿಸಲು ಅಪೂರ್ಣ ಮಾಹಿತಿಯೇ ಕಾರಣವಾಗಿತ್ತು. ಇದೀಗ ಈ ಆ್ಯಪ್‌ನಲ್ಲಿ ಇಂತಹ ಅನೇಕ ಗೊಂದಲಗಳಿದ್ದು, ಪ್ರಜ್ಞಾವಂತ ರೈತರು ಕೂಡಲೇ ಈ ಬಗ್ಗೆ ಸರ್ಕಾರ ಕ್ರಮ ವಹಿಸಬೇಕೆಂದು ಆಗ್ರಹಿಸಿದ್ದಾರೆ.
ದೋಷಗಳೇನು?: ರೈತರು ತಮ್ಮ ಹೊಲದಲ್ಲಿ ಹೋಗಿ ನಿಂತಾಗ ಮೊಬೈಲ್ ಸಿಗ್ನಲ್ ಸರಿಯಾಗಿ ಬರುತ್ತಿಲ್ಲ. ಇನ್ನೊಂದೆಡೆ ಜಿಪಿಎಸ್ ಸಂಪರ್ಕ ಕಷ್ಟವಾಗುತ್ತಿದೆ. ಮಾಹಿತಿ ಭರ್ತಿ ಮಾಡಿದಾಗ ಆ್ಯಪ್‌ನಲ್ಲಿರುವ ಕೆಲವು ಅಂಶಗಳಲ್ಲಿ ರೈತರು ತಪ್ಪಾಗಿ ಮಾಹಿತಿ ತುಂಬುವಂತಹ ವಿಭಾಗಗಳೇ ಬಹುಬೇಗ ತೆರೆದುಕೊಳ್ಳುತ್ತಿವೆ. ಇದಕ್ಕೆ ಉದಾಹರಣೆ ಎನ್ನುವಂತೆ, ರೈತರ ಹೊಲದಲ್ಲಿ ಪಾಳುಭೂಮಿ ಇದೆಯೇ? ಹೌದಾದಲ್ಲಿ ಕ್ಲಿಕ್ ಮಾಡಿ ಎನ್ನುವ ಅಂಶ ಬಹುಬೇಗ ಅಪ್‌ಲೋಡ್ ಆಗುತ್ತಿದ್ದು, ಎಷ್ಟೋ ರೈತರು ಇದನ್ನೇ ಬೆಳೆ ಮಾಹಿತಿ ತುಂಬುವ ವಿಭಾಗ ಎಂದುಕೊಂಡು ತಮ್ಮ ಇಡೀ ಹೊಲವೇ ಪಾಳುಭೂಮಿ ಎಂದು ನಮೂದಿಸಿದ್ದಾರೆ. ಅವರ ಪಹಣಿಯಲ್ಲಿ ಇದೀಗ ಪಾಳುಭೂಮಿಎಂದೇ ನಮೂದಾಗಿದ್ದು, ನಾಳೆ ಇವರಿಗೆ ವಿಮೆ ಸಿಗುವುದು ಕಷ್ಟ ಎನ್ನಲಾಗಿದೆ. ಇನ್ನು ಕಷ್ಟಪಟ್ಟು ಆ್ಯಪ್‌ನಲ್ಲಿರುವ ಎಲ್ಲಾ ಅಂಶಗಳನ್ನು ಸರಿಯಾಗಿಯೇ ಭರ್ತಿ ಮಾಡಿ ಒಪ್ಪಿಗೆ ಕೊಟ್ಟ ಮೇಲೂ ಕೂಡ ರೈತರು ತುಂಬಿದ ಮಾಹಿತಿ ಸರಿಯಾಗಿದೆ, ಯಾವುದೇ ಲೋಪದೋಷವಿಲ್ಲ, ಇದನ್ನು ಸರ್ಕಾರ ಅಂಗೀಕರಿಸಿದೆ ಎಂದು ಪ್ರತಿಕ್ರಿಯೆ ಮರಳಿಸುವ ವ್ಯವಸ್ಥೆಯೇ ಇಲ್ಲ. ರೈತರು ಭರ್ತಿ ಮಾಡಿ ಕಳುಹಿಸಿದ ಮಾಹಿತಿಯನ್ನು ಸ್ವೀಕರಿಸಿದ್ದಕ್ಕೆ ಪ್ರತಿಯಾಗಿ ರೈತರ ಬಳಿ ಯಾವುದೇ ದಾಖಲೆ ಉಳಿಯುವ ಒಂದೇ ಒಂದು ಎಸ್‌ಎಂಎಸ್ ಕೂಡ ಈ ಆ್ಯಪ್ ಮೂಲಕ ರೈತರಿಗೆ ಮರಳಿ ಬರುತ್ತಿಲ್ಲ. ಹಾಗಾದರೆ ನಾಳೆ ಯಾರನ್ನು ಪ್ರಶ್ನಿಸುವುದು? ಇನ್ನೊಂದೆಡೆ ಮಿಶ್ರ ಬೆಳೆ ಬೆಳೆದವರು ಸರಾಗವಾಗಿ ಮಾಹಿತಿ ತುಂಬಲು ಆ್ಯಪ್‌ನಲ್ಲಿ ಕಷ್ಟವಾಗುತ್ತಿದೆ.
ರೈತರೇ ತಪ್ಪಿತಸ್ಥರು: ಇಷ್ಟಕ್ಕೂ ಯಾವುದೇ ಹೆಚ್ಚಿನ ತಾಂತ್ರಿಕ ಜ್ಞಾನವಿಲ್ಲದ ರೈತರು ಕಲಿತವರಿಂದ ಅಥವಾ ಸರ್ಕಾರ ನೇಮಿಸಿದ ಸಮೀಕ್ಷೆದಾರರ ಮೂಲಕವೇ ಮಾಹಿತಿ ಭರ್ತಿ ಮಾಡಬಹುದು. ಆದರೆ ತುಂಬಿದ ಮಾಹಿತಿ ಅಪೂರ್ಣ ಅಥವಾ ತಪ್ಪಾಗಿದ್ದರೆ ಮರಳಿ ಅದನ್ನು ಸರಿಪಡಿಸಲು ಅವಕಾಶವೇ ಇಲ್ಲ. ಕಾರಣ ಒಂದು ಬಾರಿ ರೈತ ಮಾಹಿತಿ ತುಂಬಿದ ನಂತರ ಅದು ಬೆಳೆದರ್ಶಕ ಆ್ಯಪ್ ನಲ್ಲಿ ಪ್ರಕಟವಾಗುತ್ತದೆ. ಅದೂ ತಿಂಗಳುಗಳ ನಂತರ ತಪ್ಪಾದ ಮಾಹಿತಿ ಸರಿಪಡಿಸುವಹೊತ್ತಿಗೆ ಹೊಲದಲ್ಲಿ ಸುಗ್ಗಿ ಮುಗಿದು ಹೋಗಿರುತ್ತದೆ. ಆ ಮೇಲೆ ಮಾಹಿತಿ ತಪ್ಪಾಗಿದೆ ಎಂದರೆ ಆ ರೈತರು ಏನು ಮಾಡಬೇಕು? ಮತ್ತೆ ಸರಿಯಾದ ಮಾಹಿತಿ ತುಂಬಲು ಅವರ ಹೊಲದಲ್ಲಿ ಬೆಳೆಯೇ ಇರುವುದಿಲ್ಲ. ಇದು ರೈತ ಮುಖಂಡರನ್ನು ಕೆರಳಿಸಿದೆ.
ಯಾರು ಹೊಣೆ? : ಸರ್ಕಾರ ಮತ್ತು ರೈತರಿಂದ ಸಾವಿರ ಕೋಟಿಗಟ್ಟಲೇ ಹಣ ಪಡೆದು ತಾಂತ್ರಿಕ ಕಾರಣಗಳನ್ನು ನೀಡಿ ಖಾಸಗಿ ವಿಮಾ ಕಂಪನಿಗಳು ರೈತರಿಗೆ ಪಂಗನಾಮ ಹಾಕಿದ್ದು ಗೊತ್ತೇ ಇದೆ. ಇದಕ್ಕೆ ಸಾಕ್ಷಿ ಎನ್ನುವಂತೆ ರಾಜ್ಯದಲ್ಲಿ 2018ನೇ ಸಾಲಿನಲ್ಲಿ ಖಾಸಗಿ ವಿಮಾ ಕಂಪನಿಗಳು ಮತ್ತು ತಾವೇ ನೇಮಿಸಿದ ಬೆಳೆ ಸಮೀಕ್ಷೆದಾರರಿಂದ ನಮೂದಿಸಿದ ಬೆಳೆ ಮಾಹಿತಿಯ ಛಾಯಾಚಿತ್ರಗಳನ್ನು ಆಧರಿಸಿ 3 ಲಕ್ಷ ರೈತರಿಗೆ ಬೆಳೆ ವಿಮೆ ನಿರಾಕರಿಸಲಾಗಿದೆ. ಹಾಗಿದ್ದರೆ ಇದಕ್ಕೆ ಯಾರು ಹೊಣೆ? ಖಾಸಗಿ ಸಮೀಕ್ಷೆದಾರರೋ, ವಿಮಾ ಕಂಪನಿಗಳ್ಳೋ ಅಥವಾ ಇದೆಲ್ಲವನ್ನು ವ್ಯವಸ್ಥೆಮಾಡಬೇಕಾದ ಕೃಷಿ ಇಲಾಖೆಯೋ? ಹೀಗಿರುವಾಗ ಬೆಳೆ ಸಮೀಕ್ಷೆ ಸರಿ ಎನ್ನುವ ವ್ಯವಸ್ಥೆಯೇ ಇಲ್ಲದೇ ಏಕಮುಖ ಮಾಹಿತಿ ಪಡೆಯುತ್ತಿರುವುದು ಮುಂದೆ ಮಾರಕ ಎನ್ನುತ್ತಿದ್ದಾರೆ ರೈತ ಮುಖಂಡರು.
ವಿಮಾ ಕಂಪನಿ ಮತ್ತು ಸರ್ಕಾರ ಶಾಮೀಲಾಗಿ ತಾಂತ್ರಿಕ ಅಡಚಣೆಗಳಲ್ಲಿ ರೈತರನ್ನು ಸಿಲುಕಿಸುತ್ತಿವೆ. ವಿಮೆ ಕೊಡುವಾಗ ರೈತರನ್ನೇ ತಪ್ಪಿತಸ್ಥರನ್ನಾಗಿ ಮಾಡುವ ಹುನ್ನಾರ ಇದರಲ್ಲಿದೆ. ಬೆಳೆ ಸಮೀಕ್ಷೆ ಮತ್ತು ನಮೂದಿಸುವುದು ಸರ್ಕಾರದ ಕೆಲಸವೇ ಹೊರತು ರೈತರ ಕೆಲಸವಲ್ಲ.
- ಶಂಕರಪ್ಪ ಅಂಬಲಿ, ಕರ್ನಾಟಕ ರೈತ ಸೇನೆ ಉಪಾಧ್ಯಕ್ಷರು
ಬೆಳೆ ಸಮೀಕ್ಷೆ ಆ್ಯಪ್‌ನ್ನು ಅಚ್ಚುಕಟ್ಟಾಗಿ ಅಭಿವೃದ್ಧಿ ಮಾಡಲಾಗಿದೆ. ಇದರಲ್ಲಿ ಯಾವುದೇ ದೋಷಗಳಿಲ್ಲ. ಹೀಗಾಗಿ ಯಾರೂ ಆತಂಕ ಪಡುವ ಅಗತ್ಯವಿಲ್ಲ. ರೈತರು ತುಂಬಿದ ಬೆಳೆ ಮಾಹಿತಿ ಸರ್ಕಾರದ ಬಳಿ ಇರುತ್ತದೆ. ಈ ವರ್ಷ ಅತೀ ಹೆಚ್ಚು ರೈತರು ಬೆಳೆ ಸಮೀಕ್ಷೆ ಆ್ಯಪ್ ಮೂಲಕ ಬೆಳೆಗಳನ್ನು ದಾಖಲಿಸಿದ್ದಾರೆ.
-ಬಿ.ಸಿ.ಪಾಟೀಲ್, ಕೃಷಿ ಸಚಿವ
ಡಾ|ಬಸವರಾಜ ಹೊಂಗಲ್