ಶಿಡ್ಲಘಟ್ಟ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ದೊರೆಯುವ ಸೌಲಭ್ಯಗಳಿಂದ ರೈತ ಸಮುದಾಯ ವಂಚಿತಗೊಳ್ಳಬಾರದು ಎಂದು ಜಾರಿಗೊಳಿಸಿರುವ ಬೆಳೆ ಸಮೀಕ್ಷೆ ಅಭಿಯಾನಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಿನ್ನಡೆಯಾಗಿದೆ. ತಾಂತ್ರಿಕ ಸಮಸ್ಯೆ ಮತ್ತು ರೈತರ ನಿರೀಕ್ಷಿತ ಪ್ರಮಾಣದಲ್ಲಿ ಉತ್ಸಾಹ ಕಡಿಮೆಯಾಗಿದ್ದ ರಿಂದ ಜಿಲ್ಲಾದ್ಯಂತ 21.54% ಮಾತ್ರ ಗುರಿ ಸಾಧಿಸಲಾಗಿದೆ.
ಶಿಡ್ಲಘಟ್ಟದಲ್ಲಿ ಅತೀ ಕಡಿಮೆ: ಚಿಕ್ಕಬಳ್ಳಾಪುರ ಜಿಲ್ಲೆಯ ವಾಣಿಜ್ಯ ಕೇಂದ್ರವೆಂದು ಖ್ಯಾತಿ ಹೊಂದಿರುವ ಚಿಂತಾಮಣಿ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ 30.2% ಸಾಧನೆ ಮಾಡಲಾಗಿದೆ. ಇನ್ನೂ ರೇಷ್ಮೆ ಉತ್ಪಾದನೆಯ ಕೇಂದ್ರ ಶಿಡ್ಲಘಟ್ಟ ತಾಲೂಕಿನಲ್ಲಿ ಅತಿ ಕಡಿಮೆ ಅಂದರೆ 13.45% ಸಾಧನೆಯಾಗಿರುವುದು ಚಿಂತೆಗೀಡು ಮಾಡಿದೆ.
ಗುರಿ ಸಾಧಿಸಲು ಹಿನ್ನಡೆ: ಬೆಳೆ ಸಮೀಕ್ಷೆ ಅಭಿಯಾನವನ್ನು ಯಶಸ್ವಿಗೊಳಿಸಲು ಕೃಷಿ ಇಲಾಖೆಯ ಅಧಿಕಾರಿಗಳು ವ್ಯಾಪಕವಾಗಿ ಪ್ರಚಾರ ಮತ್ತು ಜಾಗೃತಿ ಮೂಡಿಸಿ ದರೂ ಸಹ ನಿರೀಕ್ಷಿತ ಪ್ರಮಾಣದಲ್ಲಿ ಗುರಿ ಸಾಧಿಸಲು ಹಿನ್ನಡೆಯಾಗಿದೆ.
ಮಾಹಿತಿ ಕೊರತೆ, ನೆಟ್‌ವರ್ಕ್ ಸಮಸ್ಯೆ: ಪ್ರವಾಹ, ಬರಗಾಲದ ಸಂದರ್ಭ ಪರಿಹಾರ, ಬೆಳೆ ವಿಮೆ, ಕನಿಷ್ಠ ಬೆಂಬಲ ಬೆಲೆ ಮೊದಲಾದ ಯೋಜನೆಗಳಿಂದ ರೈತರು ವಂಚಿತರಾಗುತ್ತಿದ್ದರು. ಇದನ್ನು ಮನಗಂಡು ರಾಜ್ಯ ಸರ್ಕಾರವು ಪಹಣಿಯಲ್ಲಿ ಸರಿಯಾಗಿ ಬೆಳೆ ಮಾಹಿತಿ ನಮೂದಿಸಲು ಈ ವರ್ಷ “”ನನ್ನ ಬೆಳೆ ನನ್ನ ಹಕ್ಕು” ಘೋಷಣೆಯಡಿ ರೈತರಿಂದಲೇ ಬೆಳೆ ಸಮೀಕ್ಷೆ ಮಾಡುವ ಯೋಜನೆ ಹಮ್ಮಿಕೊಂಡಿತ್ತು. ಬೆಳೆ ಸಮೀಕ್ಷೆ 2020-21 ಎಂಬ ಮೊಬೈಲ್ ಆ್ಯಪ್ ಮೂಲಕ ಸೆಪ್ಟೆಂಬರ್ 23ರೊಳಗೆ ರೈತರೇ ತಮ್ಮ ಜಮೀ ನಿನ ಬೆಳೆ ಮಾಹಿತಿ ದಾಖಲಿಸಲು ವ್ಯವಸ್ಥೆ ಮಾಡಿಕೊಳ್ಳಲು ಬೆಳೆ ಸಮೀಕ್ಷೆಯ ಅವಧಿಯನ್ನು ವಿಸ್ತರಿಸಲಾಗಿದೆ. ಆದರೆ ಈ ಬಗ್ಗೆ ರೈತರಿಗೆ ಸೂಕ್ತ ಮಾಹಿತಿ ಕೊರತೆ ಮತ್ತು ನೆಟ್‌ವರ್ಕ್ ಸಮಸ್ಯೆಯಿಂದ ಸಮೀಕ್ಷೆಯಲ್ಲಿ ಜಿಲ್ಲೆ ಹಿಂದುಳಿದೆಯೆಂಬ ಮಾತು ಕೇಳಿ ಬರುತ್ತಿದೆ.
1.39 ಲಕ್ಷ ರೈತರ ಬೆಳೆ ಸಮೀಕ್ಷೆ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸೆ.03 ವರೆಗೆ 21.54% ಮಾತ್ರ ಗುರಿ ಸಾಧನೆಯಾಗಿದೆ. ಜಿಲ್ಲೆಯ 6,48,321 ಪಹಣಿಗಳಲ್ಲಿ 1,39,630 ಮಾತ್ರ ರೈತರ ಬೆಳೆ ಸಮೀಕ್ಷೆ ಕೈಗೊಳ್ಳಲಾಗಿದೆ. ಇನ್ನುಳಿದ ರೈತರ ಪಹಣಿಗಳ ಬೆಳೆ ಸಮೀಕ್ಷೆ ಕಾರ್ಯ ಆಗಬೇಕಾಗಿದೆ. ಈ ಯೋಜನೆಯ ಯಶಸ್ವಿಗೊಳಿಸಲು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಆಯಾ ತಾಲೂಕುಗಳು ಕೃಷಿ ಸಹಾಯಕ ನಿರ್ದೇಶಕರುಗಳ ಮೂಲಕ ತಹಶೀಲ್ದಾರ್‌ಗಳ ಅಧ್ಯಕ್ಷತೆಯಲ್ಲಿ ರೈತ ಸಂಘಗಳ ಪದಾಧಿಕಾರಿಗಳೊಂದಿಗೆ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರೈತರ ಸಹಕಾರದಿಂದ ಶೇ.100 ರಷ್ಟು ಬೆಳೆ ಸಮೀಕ್ಷೆ ನಡೆಸಲು ಯೋಜನೆ ರೂಪಿಸಿ ಪ್ರತಿಯೊಂದು ಗ್ರಾಮದಲ್ಲಿ ರೈತರಿಗೆ ಬೆಳೆ ಸಮೀಕ್ಷೆ ಹೇಗೆ ಮಾಡಬೇಕೆಂದು ಅರಿವು ಮೂಡಿಸಲಾಗುತ್ತಿದೆ. ತಾಲೂಕು ಮಟ್ಟದಲ್ಲಿತಾಲೂಕು ಕೃಷಿ ಸಹಾಯಕ ನಿರ್ದೇಶಕರ ಮೂಲಕ ರೈತರಿಗೆ ಮಾಹಿತಿ ನೀಡಲು ಸೂಚನೆ ನೀಡಲಾಗಿದೆ. ತಹಶೀಲ್ದಾರ್ ಮೂಲಕ ಜಾಗೃತಿ ಸಭೆ ನಡೆಸಲಾಗುತ್ತಿದೆ. ಸೆ.23 ರೊಳಗೆ ಗುರಿ ಸಾಧಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.
– ಎಲ್.ರೂಪಾ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ
– ಎಂ.ಎ.ತಮೀಮ್ ಪಾಷ