ಅರಸೀಕೆರೆ: ತಾಲೂಕಿನಲ್ಲಿ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯು ಶೇ.56.60 ಪೂರ್ಣಗೊಂಡಿದ್ದು, ಗುರಿ ಸಾಧನೆಯಲ್ಲಿ ಜಿಲ್ಲೆಯಲ್ಲಿ ಮೂರನೇ ಸ್ಥಾನ ಪಡೆದಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅಶೋಕ್ ತಿಳಿಸಿದ್ದಾರೆ.
ಕೃಷಿ ಇಲಾಖೆಯು 2020-21ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿವರ ದಾಖಲಿಸಲು ರೈತರ ಬೆಳೆ ಸಮೀಕ್ಷೆ ಆ್ಯಪ್ ಅಭಿವೃದ್ಧಿ ಪಡಿಸಿದೆ. ಈ ಮೂಲಕ ರೈತರು ತಮ್ಮ ಜಮೀನಿನಲ್ಲಿ ನಿಂತು ಬೆಳೆಯ ಫೋಟೋ ತೆಗೆದು ವಿವರ ದಾಖಲಿಸಿ, ಸಮೀಕ್ಷೆ ನಡೆಸಲು ಇಲಾಖೆಯು ಇದೇ ಮೊದಲ ಬಾರಿಗೆ ಅವಕಾಶ ನೀಡಿದೆ ಎಂದು ಹೇಳಿದರು.
ರೈತರ ಬೆಳೆ ಸಮೀಕ್ಷೆಗೆ ಸೆಪ್ಟೆಂಬರ್ 23 ಕೊನೆಯ ದಿನಾಂಕವಾಗಿದೆ. ಈ ಯೋಜನೆಗೆ ಅನ್ನದಾತರು ಹೆಚ್ಚಿನ ಒಲವು ತೋರಿದ್ದು, ಅಧಿಕಾರಿಗಳ ನಿರೀಕ್ಷೆ ಮೀರಿ ಸಮೀಕ್ಷೆ ಕಾರ್ಯ ನಡೆಯತ್ತಿದೆ ಎಂದು ಅಭಿಪ್ರಾಯಪಟ್ಟರು.
ತಾಲೂಕಿನಲ್ಲಿ ಒಟ್ಟು 2,34,842 ತಾಕು(ಪ್ಲಾಟುಗಳು)ಗಳಿದ್ದು, ಕಳೆದೊಂದು ತಿಂಗಳಿನಿಂದ ಸಮೀಕ್ಷೆ ಕಾರ್ಯ ನಡೆಯುತ್ತಿದೆ.ಗುರುವಾರದ ಅಂತ್ಯಕ್ಕೆ 89,405 ತಾಕುಗಳ ಬೆಳೆ ಮಾಹಿತಿಯನ್ನು ರೈತರು ಆ್ಯಪ್‌ನಲ್ಲಿ ದಾಖಲಿಸಿ ಸಮೀಕ್ಷೆ ಮುಂದುವರಿಸಿದ್ದಾರೆ. ಬೆಳೆಸಮೀಕ್ಷೆಯನ್ನು ಇನ್ನಷ್ಟು ಚುರುಕುಗೊಳಿಸಲು ಸರ್ಕಾರವು ಮೊಬೈಲ್ ಆ್ಯಪ್ ಅಭಿವೃದ್ಧಿ ಪಡಿಸಿ, ರೈತರ ಜಮೀನಿಗೆ ಭೇಟಿ ನೀಡಿ ಸಮೀಕ್ಷಾ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.
ಒಟ್ಟಾರೆ 43,521 ತಾಕುಗಳ ಸಮೀಕ್ಷೆ ನಡೆದಿದೆ. ರೈತರು ಮತ್ತು ಖಾಸಗಿ ನಿವಾಸಿಗಳಿಂದ ಒಟ್ಟು 1,32,926 ತಾಕುಗಳ ಸಮೀಕ್ಷೆ ಮಾಡಲಾಗಿದೆ. ಈಗಾಗಲೇ ಶೇ.56.60 ಪೂರ್ಣಗೊಂಡು, ಜಿಲ್ಲೆಯಲ್ಲಿ ತಾಲೂಕು 3ನೇ ಸ್ಥಾನ ಪಡೆದಿದೆ. ಜಿಲ್ಲೆಯಲ್ಲಿ ಒಟ್ಟು 15,16,677 ತಾಕುಗಳ ಪೈಕಿ8,20,125 ಸಮೀಕ್ಷೆ ಮುಗಿದಿದ್ದು, ಶೇ.54 ಪ್ರಗತಿ ಸಾಧಿಸಲಾಗಿದೆ ಎಂದರು.