ಚಾಮರಾಜನಗರ: ರಾಜ್ಯದಲ್ಲಿ ನಡೆಯುತ್ತಿರುವ 2020-21ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯಲ್ಲಿ ಚಾಮರಾಜನಗರ ಜಿಲ್ಲೆಯು ಜಿಲ್ಲಾಡಳಿತ ನೀಡಿದ ನಿರ್ದೇಶನ ಹಾಗೂ ಸತತ ಶ್ರಮದ ಪ್ರಯತ್ನದ ಪರಿಣಾಮ ಇಂದಿನವರೆಗೆ ಶೇ. 86.25ರಷ್ಟು ಪ್ರಗತಿ ಸಾಧಿಸುವ ಮೂಲಕ ರಾಜ್ಯದಲ್ಲೇ ಮೊದಲನೇ ಸ್ಥಾನದಲ್ಲಿದೆ.
ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ ಇಲಾಖೆ ಸಹಯೋಗದೊಂದಿಗೆ ಬೆಳೆಸಮೀಕ್ಷೆ ಕಾರ್ಯ ಕೈಗೊಳ್ಳಲು ಜಿಲ್ಲೆಗೆ 4,22,386 ತಾಕುಗಳ ಗುರಿ ನಿಗದಿಪಡಿಸಲಾಗಿದೆ. ರೈತರು ತಮ್ಮ ಜಮೀನುಗಳ ಸರ್ವೆ ನಂ. ಹಿಸ್ಸಾ ನಂಬರ್‌ವಾರು ತಾವು ಬೆಳೆದ ಕೃಷಿ ಬೆಳೆಗಳ ಹಾಗೂ ತಮ್ಮ ಜಮೀನಿನಲ್ಲಿರುವ ಬಹುವಾರ್ಷಿಕ ತೋಟಗಾರಿಕೆ, ಅರಣ್ಯ, ಇತರೆ ಬೆಳೆಗಳ ಮಾಹಿತಿಯನ್ನು ಛಾಯಾ ಚಿತ್ರ ಸಹಿತ ತಮ್ಮ ಅಂಡ್ರ್ಯಾಡ್ ಮೊಬೈಲ್ ಗೂಗಲ್ ಪ್ಲೇಸ್ಟೋರ್‌ನಲ್ಲಿ ಬೆಳೆ ಸಮೀಕ್ಷೆ 2020ರ ಆಪ್‌ನ್ನು ಡೌನ್ ಲೋಡ್ ಮಾಡಿಕೊಂಡು ಸ್ವತಃ 97,472 ತಾಕುಗಳಲ್ಲಿ ಬೆಳೆ ಸಮೀಕ್ಷೆಕೈಗೊಂಡಿದ್ದಾರೆ. ಪಿಆರ್ ಬೆಳೆ ಸಮೀಕ್ಷೆ: ಖಾಸಗಿ ನಿವಾಸಿಗಳನ್ನು ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ನೇಮಿಸಿ ಪಿ.ಆರ್. ಬೆಳೆ ಸಮೀಕ್ಷೆ ಆ್ಯಪ್ ಮೂಲಕವು ಸಹ 2,66,819 ತಾಕುಗಳಲ್ಲಿ ಸಮೀಕ್ಷೆ ಮಾಡಲಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 3,64,291 ತಾಕುಗಳಲ್ಲಿ ಬೆಳೆ ಸಮೀಕ್ಷೆ ಮಾಹಿತಿಯನ್ನು ನಮೂದಿಸಿದ್ದು, ಶೇ. 86.25 ರಷ್ಟು ಪ್ರಗತಿ ಸಾಧಿಸಲಾಗಿದೆ.
ಉತ್ತೇಜನ, ಮಾರ್ಗದರ್ಶನ: ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಬೆಳೆ ಸಮೀಕ್ಷೆಯಲ್ಲಿ ಜಿಲ್ಲೆಯು ಪ್ರಗತಿ ಸಾಧನೆಗಾಗಿ ಸತತವಾಗಿ ಸಭೆ ನಡೆಸಿ ಸಲಹೆ, ಸೂಚನೆ ನೀಡಿದ್ದರು. ಅಲ್ಲದೇ ಜಿಲ್ಲಾಧಿಕಾರಿಯವರೇ ರೈತರ ಜಮೀನುಗಳಿಗೆ ಖುದ್ದು ಭೇಟಿ ನೀಡಿ ರೈತರೊಂದಿಗೆ ಸಮಾಲೋಚಿಸಿ ಬೆಳೆ ಸಮೀಕ್ಷೆ ಪ್ರಗತಿಗಾಗಿ ಉತ್ತೇಜನ ನೀಡಿದ್ದರು. ಅನಿರೀಕ್ಷಿತವಾಗಿ ಭೇಟಿ ನೀಡಿ ಇಲಾಖೆಯವರು ಕೈ ಗೊಂಡಿರುವ ಸಮೀಕ್ಷಾ ಕಾರ್ಯವನ್ನು ಪರಿ ಶೀಲಿಸಿ ಮಾರ್ಗದರ್ಶನ ಮಾಡಿದ್ದಾರೆ. ಈ ಎಲ್ಲಾಪ್ರ ಯತ್ನಗಳ ಪರಿಣಾಮ ಜಿಲ್ಲೆಯು ಇಂದಿನ ಅಂಕಿ ಅಂಶ ಪ್ರಕಾರ ಬೆಳೆ ಸಮೀಕ್ಷೆಯಲ್ಲಿ ಅಗ್ರಸ್ಥಾನದಲ್ಲಿದೆ.
ರಾಜ್ಯದಲ್ಲಿ ಪಿಆರ್ ಆ್ಯಪ್ ಮೂಲಕ ನಡೆಸುತ್ತಿರುವ ಬೆಳೆ ಸಮೀಕ್ಷೆ ಪ್ರಗತಿಯಲ್ಲೂ ಮೊದಲನೇ ಸ್ಥಾನದಲ್ಲಿ ಮುಂದುವರಿದಿದೆ. ಜಿಲ್ಲೆಯು ಒಟ್ಟಾರೆಯಾಗಿ ರೈತರ ಬೆಳೆ ಸಮೀಕ್ಷೆ ಮತ್ತು ಖಾಸಗಿ ನಿವಾಸಿಗಳ ಮೂಲಕ ಕೈಗೊಂಡ ಸಮೀಕ್ಷೆಯಲ್ಲಿ ರಾಜ್ಯದಲ್ಲಿ ಚಾಮ ರಾಜನಗರ ಜಿಲ್ಲೆಯು ಮೊದಲನೇ ಸ್ಥಾನದಲ್ಲಿದೆ.
ಸಮೀಕ್ಷೆ ಉಸ್ತುವಾರಿಗಾಗಿ ಗ್ರಾಮ ಲೆಕ್ಕಾಧಿಕಾರಿಗಳು, ಕೃಷಿ ಅಧಿಕಾರಿಗಳು, ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ನೇಮಿಸಿದ್ದು, ರೈತರ ಬೆಳೆ ಸಮೀ ಕ್ಷೆಯ ತಾಕುಗಳ ಮೇಲ್ವಿ ಚಾರಣೆಯಲ್ಲಿ ಶೇ. 93.90 ರಷ್ಟು ಹಾಗೂ ಖಾಸಗಿ ನಿವಾಸಿಗಳ ತಾಕುಗಳ ಮೇಲ್ವಿಚಾರಣೆ ಯಲ್ಲಿ ಶೇ 82.40ರಷ್ಟು ಪ್ರಗತಿ ಸಾಧಿಸಲಾಗಿದೆ. ಬೆಳೆ ಸಮೀಕ್ಷೆ ಯೋಜನೆಯಡಿ ಸಂಗ್ರಹಿಸಿದ ದತ್ತಾಂಶವನ್ನು ಕೃಷಿ, ರೇಷ್ಮೆ, ತೋಟಗಾರಿಕೆ ಬೆಳೆಗಳ ವಿಸ್ತೀರ್ಣವನ್ನು ಲೆಕ್ಕ ಹಾಕುವ ಕಾರ್ಯದಲ್ಲಿ, ಬೆಳೆ ವಿಮೆ ಯೋಜನೆಯ ಸರ್ವೆ ನಂ ವಾರು ಬೆಳೆ ಪರಿಶೀಲನೆ ಹಾಗೂ ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳಲು ಸರ್ವೆ ನಂಬರ್ ಆಯ್ಕೆ ಮಾಡಲು, ಅನುಕೂಲವಾಗಲಿದೆ.
ಸೌಲಭ್ಯಕ್ಕೆ ಬೆಳೆಸಮೀಕ್ಷೆಯೇ ಆಧಾರ : ಕನಿಷ್ಠ ಬೆಂಬಲ ಬೆಲೆಯೋಜನೆಗೆ ಅರ್ಹ ಫಲಾನುಭವಿಗಳನ್ನು ಗುರುತಿಸಲು, ಆರ್‌ಟಿಸಿಯಲ್ಲಿ ಬೆಳೆ ವಿವರ ದಾಖಲಾತಿ, ಎನ್ ಡಿಆರ್‌ಎಫ್ ಮತ್ತು ಎಸ್‌ಟಿಆರ್‌ಎಫ್ ನಡಿ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಹಾಯಧನ ನೀಡುವ ಸಲುವಾಗಿ ಬೆಳೆ ಹಾನಿ ಕುರಿತು ವರದಿ ಸಿದ್ಧಪಡಿಸಲು ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸುವ ಸಂದರ್ಭಗಳಲ್ಲಿ ಬೆಳೆ ಸಮೀಕ್ಷೆ ಮಾಹಿತಿಯನ್ನೇ ಆಧಾರವಾಗಿಟ್ಟುಕೊಳ್ಳಲಾಗುತ್ತದೆ. ಇಂತಹ ಮಹತ್ವದ ಸಮೀಕ್ಷೆ ಕಾರ್ಯಕ್ಕಾಗಿ ಸಂಬಂಧ ಪಟ್ಟ ಇಲಾಖೆಗಳು ಬದ್ಧತೆಯಿಂದ ತೊಡಗಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ತಿಳಿಸಿದ್ದಾರೆ.