ದೇವದುರ್ಗ: ಮೋಡ ಕವಿದ ವಾತಾವರಣ, ಬಿಟ್ಟು ಬಿಟ್ಟು ಸುರಿದ ಮಳೆಗೆ ತಾಲೂಕಿನಾದ್ಯಂತ ಭತ್ತ, ತೊಗರಿ ಬೆಳೆನಷ್ಟ ಹಾನಿಯಾಗಿದೆ. ಕಂದಾಯ ಮತ್ತು ಕೃಷಿ ಇಲಾಖೆ ಜಂಟಿ ಬೆಳೆ ಸಮೀಕ್ಷೆ ನಡೆಸಿದ್ದು, 294 ಹೆಕ್ಟೇರ್ ಪ್ರದೇಶದಲ್ಲಿ ಬೆಳೆನಷ್ಟವಾಗಿದೆ. ಅದರಲ್ಲಿ ಭತ್ತವೇ ಅತಿ ಹೆಚ್ಚು ನಷ್ಟವಾದ ವರದಿಯಾಗಿದೆ. 3 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ತೊಗರಿ ಹಾನಿಯಾಗಿದೆ.
ಎಲ್ಲೆಲ್ಲಿ ನಷ್ಟ: ಕಳೆದ ವಾರದಿಂದ ಸುರಿದ ಅಕಾಲಿಕ ಮಳೆ ಗಾಳಿಗೆ ಅತಿ ಹೆಚ್ಚು ಭತ್ತ ನಷ್ಟವಾದ ವರದಿಯಾಗಿದೆ. ಮೇದಿನಾಪುರು 24 ಹೆಕ್ಟೇರ್, ಕರಡಿಗುಡ್ಡ 22 ಹೆಕ್ಟೇರ್, ಬಿ.ಗಣೇಕಲ್ 10 ಹೆಕ್ಟೇರ್, ನಾಗಡದಿನ್ನಿ 10 ಹೆಕ್ಟೇರ್, ನಿಲವಂಜಿ 10 ಹೆಕ್ಟೇರ್, ಬುದಿನ್ನಿ 10 ಹೆಕ್ಟೇರ್, ರಾಮದುರ್ಗ 15 ಹೆಕ್ಟೇರ್, ಮಲದಕಲ್ 20 ಹೆಕ್ಟೇರ್, ಗಲಗ 15 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಷ್ಟವಾಗಿದೆ. ಮೂರು ಹೆಕ್ಟೇರ್ ಪ್ರದೇಶ ವ್ಯಾಪ್ತಿಯಲ್ಲಿ ಮಾತ್ರ ತೊಗರಿ ಬೆಳೆನಷ್ಟವಾಗಿದೆ.
ಹತ್ತಿ ಬೆಳೆಗಾರರು ಕಂಗಾಲು: ಕೊಪ್ಪರು ಹೋಬಳಿ ವ್ಯಾಪ್ತಿಯ ಹತ್ತಿ ಬೆಳೆ ಕೆಂಪು ಬಣ್ಣಕ್ಕೆ ತಿರುಗಿದ್ದು, ರೈತರನ್ನು ನಷ್ಟದ ಸುಳಿಗೆ ಸಿಲುಕಿಸಿದೆ. ಹತ್ತಿ ಬಿಡಿಸುವ ಹಂತದಲ್ಲೇ ಇಂತಹ ಪರಿಸ್ಥಿತಿ ತಂದಿಟ್ಟಿದೆ. ಸಾಲ ಮಾಡಿ ಬಿತ್ತನೆ ಮಾಡಿದ ರೈತರ ಪಾಡುಹೇಳತೀರದಂತಾಗಿದೆ.
ಪರಿಹಾರದ್ದೇ ಚಿಂತೆ: ಬೆಳೆನಷ್ಟ ಅನುಭವಿಸದ 430 ರೈತರಿಗೆ ಇದೀಗ ಬೆಳೆ ಪರಿಹಾರದ್ದೇ ಚಿಂತೆ ಶುರುವಾಗಿದ್ದು, ಹೆಕ್ಟೇರ್‌ಗೆ ಸುಮಾರು 25ರಿಂದ 30 ಸಾವಿರ ರೂ. ಬೆಳೆಹಾನಿ ಪರಿಹಾರ ನೀಡಬೇಕು ಎಂಬುದು ರೈತರ ಬೇಡಿಕೆಯಾಗಿದೆ.
ಅಕಾಲಿಕ ಮಳೆ-ಗಾಳಿಗೆ ತಾಲೂಕಿನಾದ್ಯಂತ 294 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಹಾನಿಯಾಗಿದೆ. 3 ಹೆಕ್ಟೇರ್‌ನಲ್ಲಿ ತೊಗರಿ ನಷ್ಟವಾಗಿದೆ. ಕಂದಾಯ ಮತ್ತು ಕೃಷಿ ಇಲಾಖೆಯಿಂದ ಜಂಟಿ ಬೆಳೆ ಸಮೀಕ್ಷೆ ಮಾಡಲಾಗಿದೆ. ಬೆಳೆನಷ್ಟ ವರದಿ ಜಿಲ್ಲಾಡಳಿತಕ್ಕೆ ನೀಡಲಾಗುತ್ತದೆ.
ಶ್ರೀನಿವಾಸ ಚಾಪಲ್, ಪ್ರಭಾರ ತಹಶೀಲ್ದಾರ್
ಹತ್ತಿ ಬೆಳೆಗೆ ಯಾವುದೇ ರೋಗ ಬಾಧೆ ಕಂಡು ಬಂದಿಲ್ಲ. ಮೋಡ ಕವಿದ ವಾತಾವರಣ ಮತ್ತು ಆಗಾಗ ಸುರಿದ ಮಳೆಗೆ ಕೆಲ ಭಾಗದಲ್ಲಿ ಕೆಂಪು ಬಣ್ಣ ಕಾಣಿಸಿಕೊಂಡಿದೆ. ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಬೆಳೆ ಪರಿಶೀಲನೆ ಮಾಡಿದ್ದೇನೆ.
ಡಾ| ಎಸ್.ಪ್ರಿಯಾಂಕ, ಸಹಾಯಕ ಕೃಷಿ ನಿರ್ದೇಶಕಿ
*ನಾಗರಾಜ ತೇಲ್ಕರ್