Advertisement

ಲಾಕ್‌ಡೌನ್‌ನಲ್ಲೂ ಬೆಳೆ ರಕ್ಷಿಸಿದ ರೈತ

05:28 PM Apr 21, 2020 | Suhan S |

ಕೊಪ್ಪಳ: ಪ್ರಸ್ತುತ ಕೋವಿಡ್ 19 ವೈರಸ್‌ ನಿಂದಾಗಿ ರೈತರ ಬೆಳೆಗೆ ಮಾರುಕಟ್ಟೆ ಸಿಗದೆ ಸಂಕಷ್ಟ ಎದುರಾಗುತ್ತಿದೆ. ಆದರೆ ಇಲ್ಲೊಬ್ಬ ರೈತ ಲಾಕ್‌ಡೌನ್‌ನಂತಹ ಪರಿಸ್ಥಿತಿಯಲ್ಲೂ ತನ್ನ ಬೆಳೆಯನ್ನು ಸಂರಕ್ಷಣೆ ಮಾಡಿಕೊಂಡು ಮುಂದೆ ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾನೆ.

Advertisement

ಜಿಲ್ಲೆಯ ಯಲಬುರ್ಗಾ ತಾಲೂಕಿನ ಕಟಗಿಹಳ್ಳಿಯ ಕೃಷಿಕ ಭೀಮರಾವ್‌ ದೇಶಪಾಂಡೆ ಅವರು ತಮ್ಮ ಹೊಲದಲ್ಲಿ ಬೆಳೆದಿರುವ ದ್ರಾಕ್ಷಿಯನ್ನು ಹಾಳಾಗದಂತೆ ಹೊಲದಲ್ಲಿಯೇ ಶೆಡ್‌ಗಳಲ್ಲಿ ಸಂಗ್ರಹಣೆ ಮಾಡಿ ಸಂರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ. ಕೋವಿಡ್‌- 19ನಿಂದಾಗಿ ದೇಶದಾದ್ಯಂತ ಲಾಕ್‌ಡೌನ್‌ ಜಾರಿಯಾಗಿದೆ. ಆರಂಭಿಕ ದಿನದಿಂದ ಇವರೆಗೂ ರೈತ ತನ್ನ ಉತ್ಪ ನ್ನವನ್ನು ಮಾರುಕಟ್ಟೆಗೆ ಸಾಗಾಟ ಮಾಡಲು ನೂರೆಂಟು ಕಷ್ಟ ಎದುರಿಸುತ್ತಿದ್ದಾನೆ. ರಸ್ತೆಗಳಲ್ಲಿ ತಮ್ಮ ವಾಹನಗಳ ಸಂಚಾರಕ್ಕೂ ಅಡ್ಡಿಯಾಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಮಾರುಕಟ್ಟೆಯಲ್ಲಿ ತಮ್ಮ ಬೆಳೆಗೆ ಬೆಲೆಯೂ ಸಿಗುತ್ತಿಲ್ಲ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದ್ದರೂ ಖರೀದಿದಾರರು ರೈತರ ಉತ್ಪನ್ನವನ್ನು ಬೇಕಾಬಿಟ್ಟಿ ದರಕ್ಕೆ ಕೇಳುತ್ತಿದ್ದಾರೆ. ಇದರಿಂದ ಅನ್ನದಾತನಿಗೆ ಸಂಕಷ್ಟ ಎದುರಾಗುತ್ತಲೇ ಇವೆ.

ಹೀಗಾಗಿ ತಮ್ಮ ಜಮೀನಿನಲ್ಲಿ ಬೆಳೆ ಸಂರಕ್ಷಣೆಗೆ ಹರಸಾಹಸ ಪಡುವಂತಾಗಿದೆ. ಭೀಮರಾವ್‌ ದೇಶಪಾಂಡೆ ಅವರು ತಮ್ಮ ಗ್ರಾಮದಲ್ಲಿ 3 ಎಕರೆ ಜಮೀನಿನಲ್ಲಿ ಸೋನಾಕಾ ಹಾಗೂ ಇತರೇ ತಳಿಯ ದ್ರಾಕ್ಷಿ ಬೆಳೆದಿದ್ದಾರೆ. 2016 ರಲ್ಲಿ ದ್ರಾಕ್ಷಿ ಬೆಳೆಯಲು ಕ್ರಮ ಕೈಗೊಂಡಿದ್ದು, ಕಳೆದ ವರ್ಷ 10 ಲಕ್ಷಕ್ಕೂ ಅಧಿಕ ಆದಾಯ ಪಡೆದಿದ್ದರು. ಆದರೆ ಈ ಸಾರಿ ಹವಾಮಾನ ವೈಪರೀತ್ಯದಿಂದಾಗಿ ದ್ರಾಕ್ಷಿ ಬೆಳೆ ತಡವಾಗಿ ಕಟಾವಿಗೆ ಬಂದಿದೆ.

ಬೇಡಿಕೆ ಇರದೆ ಬೆಲೆ ಕುಸಿತದಿಂದಾಗಿ ತೀವ್ರ ಸಂಕಷ್ಟದಲ್ಲಿದ್ದರು. ಇದಲ್ಲದೇ ಕೋವಿಡ್ 19  ಮಹಾಮಾರಿಯಿಂದಾಗಿ ಮತ್ತಷ್ಟು ಸಂಕಷ್ಟ ಎದುರಾಯಿತು. ಈ ವೇಳೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಲಿಂಗನಗೌಡ ಪೊಲೀಸ್‌ ಪಾಟೀಲ್‌ ಅವರ ಮುಂದೆ ತಮ್ಮ ಸಮಸ್ಯೆ ಪ್ರಸ್ತಾಪ ಮಾಡಿದ್ದಾರೆ. ಪಾಟೀಲರು ರೈತರಿಗೆ ಒಣದ್ರಾಕ್ಷಿ ಮಾಡುವ ಶೆಡ್‌ ನಿರ್ಮಿಸಿಕೊಂಡು ಮೌಲ್ಯವರ್ಧನೆಮಾಡಿದರೆ ವರ್ಷಾನುಗಟ್ಟಲೇ ಶೇಖರಿಸಿಟ್ಟು ಉತ್ತಮ ಬೆಲೆ ಬಂದಾಗ ಮಾರಿಕೊಂಡು ಉತ್ತಮ ಲಾಭ ಗಳಿಸಬಹುದು ಎಂದು ಸಲಹೆ ನೀಡಿದ್ದಾರೆ. ಹಾಗಾಗಿ ಭೀಮರಾವ್‌ ಅವರು ಮಣೂಕ ಮಾಡುವ ವಿಧಾನವನ್ನು ಕೃಷಿ ವಿಸ್ತರಣಾ ಶಿಕ್ಷಣಾ ಕೇಂದ್ರದ ವಿಜ್ಞಾನಿಗಳಿಂದ ಹಾಗೂ ಹಿರೇವಡ್ರಕಲ್‌ ಗ್ರಾಮದ ರೈತ ಬಸವರಾಜ ಕಾಡಾಪುರ ಮಾರ್ಗದರ್ಶನದಲ್ಲಿ ಈ ಬಗ್ಗೆ ತಿಳಿದುಕೊಂಡು ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ.

ಈ ವೇಳೆ ಹಣಕಾಸಿನ ಅಭಾವವಿದ್ದರೂ ಸಾಲ ಮಾಡಿ ಹಿರೇವಂಕಲಕುಂಟಾ ಹೋಬಳಿಯ ತೋಟಗಾರಿಕೆ ಅಧಿಕಾರಿ ಮಾಬುಸಾಬ ಪಾಟೀಲ್‌ ಅವರ ಮಾರ್ಗದರ್ಶನದಲ್ಲಿ ಮಣೂಕ ಶೆಡ್‌ ನಿರ್ಮಾಣ ಮಾಡಿಕೊಂಡು ಏಪ್ರಿಲ್‌ ಮೊದಲ ವಾರದಲ್ಲಿ ಹಣ್ಣುಗಳನ್ನು ಕಟಾವು ಮಾಡಿ ಒಣ ದ್ರಾಕ್ಷಿ ಮಾಡಲು ಸಿದ್ಧಪಡಿಸಿದ್ದಾರೆ. ಸದ್ಯ ಒಣ ದ್ರಾಕ್ಷಿ ಸಿದ್ಧವಾಗಿದ್ದು, ವರ್ಗಿಕರಿಸಿ ಪ್ಯಾಕಿಂಗ್‌ ಮಾಡಿ ಶೈತ್ಯಾಗಾರದಲ್ಲಿ ಇಟ್ಟಲ್ಲಿ ಉತ್ತಮ ಬೆಲೆ ಬಂದಾಗ ಮಾರಾಟ ಮಾಡುವ ನಿರೀಕ್ಷೆಯಲ್ಲಿದ್ದಾರೆ.

Advertisement

ದ್ರಾಕ್ಷಿ ಬೆಳೆ ಮಾರುಕಟ್ಟೆ ಇಲ್ಲದೇ ಸಂಕಷ್ಟದಲ್ಲಿದ್ದೆ. ಆಗ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಣೂಕಾ ಶೆಡ್‌ ನಿರ್ಮಿಸಿಕೊಂಡು ಒಣ ದ್ರಾಕ್ಷಿ ಮಾಡಲು ಸಲಹೆ ನೀಡಿದರು. ಅದರಂತೆ ನಾನು ಕಾರ್ಯಪ್ರವೃತ್ತನಾಗಿ ಸುಮಾರು 30 ಟನ್‌ನಷ್ಟು ದ್ರಾಕ್ಷಿ ಹಣ್ಣನ್ನು ಮಣೂಕ ಮಾಡಲು ನಿರ್ಧರಿಸಿದೆ. ಕೋವಿಡ್ 19 ಇದ್ದರೂ ನಮ್ಮ ಬೆಳೆ ಹಾನಿಯಾಗುತ್ತಿಲ್ಲ. ಅದನ್ನು ವೈಜ್ಞಾನಿಕವಾಗಿ ಸಂರಕ್ಷಣೆ ಮಾಡಿಕೊಳ್ಳುತ್ತಿದ್ದೇನೆ. ಈ ಸದ್ಯ 5 ರಿಂದ 6 ಟನ್‌ ಒಣ ದ್ರಾಕ್ಷಿ ಸಿದ್ಧವಾಗಿದ್ದು, ಮುಂಬರುವ ದಿನಗಳಲ್ಲಿ ಉತ್ತಮ ಬೆಲೆ ದೊರೆಯುವ ನಿರೀಕ್ಷೆಯಲ್ಲಿದ್ದೇನೆ. –ಭೀಮರಾವ್‌ ದೇಶಪಾಂಡೆ, ರೈತ

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತೋಟಗಾರಿಕೆ ಇಲಾಖೆ ಕಾರ್ಯ ಶ್ಲಾಘನೀಯ. ರೈತರು ಬೆಳೆದ ತರಕಾರಿ ಹಣ್ಣುಗಳನ್ನು ಗ್ರಾಹಕರಿಗೆ ನೇರವಾಗಿ ತಲುಪಿಸುವಲ್ಲಿ ತೋಟಗಾರಿಕೆ ಇಲಾಖೆ ಅತ್ಯಂತ ಮಹತ್ವದ ಪಾತ್ರ ವಹಿಸಿ ರೈತರನ್ನು ಸಂಕಷ್ಟದಿಂದ ಕಾಪಾಡುವಲ್ಲಿ ಮುಂದಾಗಿದೆ.  -ಎಂ.ಬಿ. ಪಾಟೀಲ್‌, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ.

 

-ವಿಶೇಷ ವರದಿ

 

Advertisement

Udayavani is now on Telegram. Click here to join our channel and stay updated with the latest news.

Next