Advertisement

ಬೆಳೆಗಳಿಗೆ ಕಾಡುಹಂದಿ-ಮಂಗನ ಕಾಟ

11:05 AM May 03, 2022 | Team Udayavani |

ಆಳಂದ: ದಿನ ಕಳೆದಂತೆ ಬೆಳೆ ಬೆಳೆದು ಮನೆಗೆ ತರುವುದೆಂದರೆ ರೈತ ಸಮುದಾಯಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಮಳೆಗಾಲಕ್ಕಿಂತ ಬೇಸಿಗೆಯಲ್ಲೇ ಹೊಲದಲ್ಲಿನ ಬೆಳೆಗಳಿಗೆ ರಾತ್ರಿ ವೇಳೆ ಕಾಡು ಹಂದಿಗಳ ಕಾಟ ವಿಪರೀತವಾಗಿರುತ್ತದೆ. ಹಗಲಿನಲ್ಲಿ ಹಿಂಡು ಹಿಂಡಾಗಿ ಬರುವ ಮಂಗಗಳ ದಾಳಿಯಿಂದ ಬೆಳೆ ರಕ್ಷಣೆ ಮಾಡಿಕೊಳ್ಳುವುದರಲ್ಲೇ ರೈತರು ಪರದಾಡುವಂತೆ ಆಗಿರುತ್ತದೆ.

Advertisement

ಕಬ್ಬು, ಬಾಳೆ, ದ್ರಾಕ್ಷಿ ಸೇರಿದಂತೆ ತೋಟಗಾರಿಕೆಯ ಕಲ್ಲಂಗಡಿ, ಟೋಮ್ಯಾಟೋ, ಸವತೆ ಸೇರಿದಂತೆ ಹಲವು ರೀತಿಯ ತರಕಾರಿ ಬೆಳೆಯುವ ಹೊಲಗಳನ್ನು ಕಾಡು ಹಂದಿ, ಮಂಗಗಳ ದಾಳಿಯಿಂದ ಕಪಾಡಿಕೊಳ್ಳಲು ಸಾಧ್ಯವಾಗದೇ ರೈತರು ತೀವ್ರ ನಷ್ಟ ಅನುಭವಿಸುವಂತಾಗಿದೆ.

ಮೊದಲಿದ್ದ ಮಾವು, ಹುಣಸೆ, ನೀರಲ ಹೀಗೆ ಹಲವು ರೀತಿಯ ನೈಸರ್ಗಿಕವಾಗಿ ಬೆಳೆದ ಗಿಡ, ಮರ ಕೆರೆ, ಬಾವಿಗಳನ್ನೇ ಆಶ್ರಯಿಸಿ ಬದುಕುತ್ತಿದ್ದ ಕಾಡು ಪ್ರಾಣಿಗಳಿಗೆ ಅವೆಲ್ಲ ಈಗ ಮರೀಚಿಕೆಯಾಗಿವೆ. ಅಲ್ಲದೇ ತಾಲೂಕಿನಲ್ಲಿರುವ ಬಯಲು ಪ್ರದೇಶದಲ್ಲಿ ಕಾಡು ಪ್ರಾಣಿಗಳಿಗೆ ನೀರು, ಆಹಾರದ ಕೊರತೆ ಇದೆ. ಹೀಗಾಗಿ ಈ ಪ್ರಾಣಿಗಳು ಹೊಲಗಳಿಗೆ ನುಗ್ಗಿ ಹಸಿವನ್ನು ಇಂಗಿಸಿಕೊಳ್ಳುತ್ತಿವೆ. ದಿನಕಳೆದಂತೆ ಕೃಷಿಯ ದುಬಾರಿ ವೆಚ್ಚದ ನಡುವೆ ಬೆಳೆ ಬೆಳೆದು ಮನೆಗೆ ತರುವಷ್ಟರಲ್ಲಿ ರೈತರು ಹೈರಾಣಾಗಿರುತ್ತಾರೆ. ಹೀಗಾಗಿ ಮಂಗಗಳು ಹಾಗೂ ಕಾಡು ಹಂದಿಗಳ ಹಾವಳಿ ತಪ್ಪಿಸಲು ರೈತರು ಅನೇಕ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ.

ಮಾದನಹಿಪ್ಪರಗಾ, ನಿಂಬಾಳ, ಚಲಗೇರಾ, ಮದಗುಣಕಿ, ನರೋಣಾ ವಲಯದ ಬೆಳಮಗಿ, ಸನಗುಂದಾ, ಸಾವಳಗಿ, ಕರಹರಿ, ತೋರಿವಾಡಿ, ನಿಂಬರಗಾ ವಲಯದ ಧಂಗಾಪುರ, ಬಟ್ಟರಗಾ, ಹಿತ್ತಲಶಿರೂರ, ಜಾವಳಿ, ಭೂಸನೂರ, ಆಳಂದ ವಲಯದ ಗ್ರಾಮಗಳು, ಖಜೂರಿ ವಲಯದ ಸಾಲೇಗಾಂವ, ತೀರ್ಥ ಮಟಕಿ, ನಿರಗುಡಿ ಹೀಗೆ ಅನೇಕ ಕಡೆ ಕಾಡು ಹಂದಿ, ಮಂಗಗಳ ಕಾಟ ವಿಪರೀತವಾಗಿದೆ.

ಕಾಡು ಹಂದಿಗಳ ಕಾಟದಿಂದ ಬೆಳಮಗಿ ವಲಯದ ಅನೇಕ ಹಳ್ಳಿಗಳಲ್ಲಿ ಮೇಕ್ಕೆಜೋಳ, ಶೇಂಗಾ ಬಿತ್ತನೆ ಮಾಡದೇ ಇರುವಂತ ಪರಿಸ್ಥಿತಿಯಾಗಿದೆ. ಕೆಲ ರೈತರು ಸಜ್ಜೆ ಬಿತ್ತನೆಯನ್ನೇ ಕೈಬಿಟ್ಟಿದ್ದಾರೆ. ಕಬ್ಬು ಬೆಳೆಯೂ ನಾಶವಾಗುತ್ತಿದೆ. ದಿನನಿತ್ಯ ಇದೇ ರೀತಿಯಾದರೇ ಪರಿಹಾರಕ್ಕೆ ಎಷ್ಟು ಸಲ ಅರ್ಜಿ ಕೊಡಬೇಕು ಎನ್ನುತ್ತಾರೆ ಬೆಳಮಗಿ ರೈತ ಶಿವಶರಣಪ್ಪ ಟೋಪನ್‌.

Advertisement

ಪ್ರಾಣಿಗಳಿಗೆ ನೀರುಆಹಾರ ನೀಡಿ

ಬೇಸಿಗೆಯಲ್ಲಿ ಅನ್ನ, ನೀರಿಗಾಗಿ ಮಂಗಗಳು, ನವಿಲು, ಕಾಡು ಹಂದಿಗಳು, ಪಕ್ಷಿಗಳು ಪರದಾಡುತ್ತಿವೆ. ಹೀಗಾಗಿ ಕಾಯ್ದಿಟ್ಟ ಅರಣ್ಯ ಪ್ರದೇಶಗಳಲ್ಲಿ ಅಥವಾ ಅಡವಿಯ ಸೂಕ್ತ ಪ್ರದೇಶಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಇದರಿಂದ ಬೆಳೆಗಳ ಮೇಲಿನ ದಾಳಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು. ಈ ನಿಟ್ಟಿನಲ್ಲಿ ಸಂಬಂಧಿತ ಅಧಿಕಾರಿಗಳು, ಸರ್ಕಾರ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.

ನನ್ನ ಹೊಲದಲ್ಲಿ ಗಜ್ಜರಿ, ಮೆಕ್ಕೆಜೋಳ, ಈರುಳ್ಳಿ, ಸೋಯಾಬೀನ್‌ ಬೆಳೆಗಳನ್ನೆಲ್ಲ ಮಂಗಗಳು ಹಾಳು ಮಾಡುತ್ತಿವೆ. ಸೋಲಾರ ತಂತಿ ಹಾಕಿದರೂ ಮಂಗಗಳು ಮೇಲಿಂದ ಹಾರಿ ಬರುತ್ತಿವೆ. ರಾತ್ರಿ ಕಾಡು ಹಂದಿಗಳು ದಾಳಿ ಮಾಡುತ್ತಿವೆ. ಜೋಳ, ಮಾವಿನಕಾಯಿಯನ್ನು ಬಿಡುತ್ತಿಲ್ಲ. ಈ ಸಮಸ್ಯೆ ಪರಿಹಾರಕ್ಕೆ ಯಾರ ಬಳಿ ಕೇಳಬೇಕೋ ಗೊತ್ತಾಗುತ್ತಿಲ್ಲ. ಅರಣ್ಯ ಇಲಾಖೆ ಪರಿಹಾರ ನೀಡಿದ್ದು ಸಾಕಾಗುತ್ತಿಲ್ಲ. ಬೆಳೆ ಬಿಟ್ಟು ಮಿಸುಕಾಡಲು ಆಗುತ್ತಿಲ್ಲ. ಶಿವಶರಣಪ್ಪ ಟೋಪನ್‌, ರೈತ, ಬೆಳಮಗಿ

ಪ್ರಾದೇಶಿಕ ಅರಣ್ಯ ಇಲಾಖೆ ಮೂಲಕ ತಾಲೂಕಿನ ಅತಿ ಹೆಚ್ಚು ರೈತರು ಕಾಡು ಪ್ರಾಣಿಗಳಿಂದಾದ ಬೆಳೆ ನಷ್ಟಕ್ಕೆ ಅರ್ಜಿ ಸಲ್ಲಿಸಿ ಪರಿಹಾರ ಪಡೆದಿದ್ದಾರೆ. ಆದರೆ ಇಲಾಖೆಯಿಂದ ಕಾಡು ಪ್ರಾಣಿಗಳನ್ನು ತೆರವುಗೊಳಿಸಲು, ರೈತರ ಬೆಳೆ ರಕ್ಷಣೆ ಕೈಗೊಳ್ಳಲು ಯಾವುದೇ ಸೌಲಭ್ಯ ಒದಗಿಸುವಂತ ಯೋಜನೆಗಳಿಲ್ಲ. ಜಗನಾಥ ಕೋರಳ್ಳಿ, ಪ್ರಾದೇಶಿಕ ಅರಣ್ಯಾಧಿಕಾರಿ, ಆಳಂದ

-ಮಹಾದೇವ ವಡಗಾಂವ

Advertisement

Udayavani is now on Telegram. Click here to join our channel and stay updated with the latest news.

Next