Advertisement

ಅತಿವೃಷ್ಟಿಯಿಂದ 19 ಕೋಟಿ ರೂ. ನಷ್ಟ : 14 ಸಾವಿರ ಎಕರೆ ಬೆಳೆ ಹಾನಿ

10:41 AM Oct 28, 2020 | sudhir |

ಕೊಪ್ಪಳ: ಜಿಲ್ಲೆಯಲ್ಲಿ ಸುರಿದ ಅತಿಯಾದ ಮಳೆಯಿಂದಾಗಿ ಬರೊಬ್ಬರಿ 19 ಕೋಟಿ ರೂ. ನಷ್ಟವಾಗಿದೆ. ಈ ಕುರಿತು ಜಂಟಿ ಸಮೀಕ್ಷೆ ನಡೆಸಿರುವ ಜಿಲ್ಲಾಡಳಿತವು ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಿದೆ. ಹಾನಿಯ ನಷ್ಟ ನಿವಾರಣೆಗೆ 90 ಕೋಟಿ ರೂ.
ಯೋಜನೆಯನ್ನೂ ರೂಪಿಸಿ ಅನುದಾನ ಬಿಡುಗಡೆ ಮಾಡಲು ಕೋರಿದೆ.

Advertisement

ಬರದ ನಾಡಿಗೆ ಹೆಸರಾಗಿದ್ದ ಕೊಪ್ಪಳ ಜಿಲ್ಲೆಯಲ್ಲಿ ಮಳೆ ಸಾಕಪ್ಪ ಸಾಕು ಎಂದು ದೇವರಲ್ಲಿ ಪ್ರಾರ್ಥಿಸುವಷ್ಟು ಮಳೆ ಸುರಿದಿದೆ. ಕಳೆದ 2 ತಿಂಗಳಲ್ಲಿ ಸುರಿದ ಅತಿಯಾದ ಮಳೆ ದೊಡ್ಡ ಅವಾಂತರವನ್ನೇ ಸೃಷ್ಟಿಸಿ ಜನರ ಬದುಕಿಗೆ ಕುತ್ತು ತಂದಿತು.
ಅದರಲ್ಲೂ ಅತಿಯಾದ ಮಳೆಯಿಂದಾಗಿ ರೈತರಿಗೆ ತುಂಬ ಸಂಕಷ್ಟ ಎದುರಾಗಿದೆ. ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿದ್ದರಿಂದ ಭೂಮಿ ಹೆಚ್ಚು ತೇವಾಂಶವಾಗಿ ಬಿತ್ತನೆ ಮಾಡಿದ ಬೆಳೆ ಕೊಳೆಯುವ ಸ್ಥಿತಿ ಎದುರಾಯಿತು. ಅದರಲ್ಲೂ ಈರುಳ್ಳಿ, ಮೆಣಸಿನಕಾಯಿ ಬೆಳೆ ಹೊಲದಲ್ಲೇ ಕೊಳೆಯಿತು. ಜಿಲ್ಲಾಡಳಿತವು ಜಂಟಿ ಸಮೀಕ್ಷೆ ಕೈಗೊಂಡ ಬಳಿಕ 2,275 ಹೆಕ್ಟೇರ್‌ ಪ್ರದೇಶ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಅಂದರೆ 5687 ಎಕರೆ ಪ್ರದೇಶ ಹಾನಿಗೀಡಾಗಿದೆ. ಇನ್ನೂ ಕೃಷಿ ಇಲಾಖೆಯಡಿ 3,584 ಹೆಕ್ಟೇರ್‌ ಪ್ರದೇಶ
ಹಾನಿಯಾಗಿದೆ. ಅಂದರೆ 8,960 ಎಕರೆ ಪ್ರದೇಶ ಒಟ್ಟು ಸೇರಿ 14,647 ಎಕರೆ ಪ್ರದೇಶ ಮಳೆಯಿಂದ ಹಾನಿಗೀಡಾಗಿದೆ. ಕಳೆದ 3-4 ತಿಂಗಳಿಂದ ಕಷ್ಟಪಟ್ಟು ಬೆಳೆದಿದ್ದ ಬೆಳೆಯಲ್ಲ ಮಳೆಗೆ ಕೊಳೆಯುವಂತಾದ ಸ್ಥಿತಿಯನ್ನು ನೋಡಿ ಅನ್ನದಾತ ಕಣ್ಣೀರಿಡುವಂತ ಸ್ಥಿತಿ ಎದುರಾಗಿದೆ.

ಇದನ್ನೂ ಓದಿ:ಮೈದುಂಬಿ ಹರಿಯುತ್ತಿದೆ ದೂಧ್ ಸಾಗರ ಜಲಪಾತ ! ಪ್ರವಾಸಿಗರ ಸಂಖ್ಯೆ ವಿರಳ 

ಮಳೆಗೆ 718 ಮನೆ ಹಾನಿ: ಇನ್ನೂ ಜಿಲ್ಲೆಯಲ್ಲಿ ಮಳೆಯಿಂದಾಗಿ 718 ಮನೆಗಳು ಹಾನಿಯಾಗಿವೆ. ಜೊತೆಗೆ 13 ಸೇತುವೆಗಳು ಮಳೆಗೆ ತುತ್ತಾಗಿದ್ದರೆ, 318 ಸರ್ಕಾರಿ ಪ್ರಾಥಮಿಕ ಶಾಲೆಗಳ ಕಟ್ಟಡಗಳು, 211 ಸರ್ಕಾರಿ ಅಂಗನವಾಡಿ ಸೇರಿ ಇತರೆ ಸಮುದಾಯಿಕ
ಕಟ್ಟಡಗಳು ಹಾನಿಯಾಗಿವೆ. ಸದ್ಯ ಶಾಲೆಗಳು ಇನ್ನೂ ಆರಂಭವಾಗಿಲ್ಲ. ಸರ್ಕಾರ ಶಾಲೆಗಳನ್ನು ಆರಂಭ ಮಾಡಿದರೆ ಮಕ್ಕಳಿಗೆ ಕೊಠಡಿಗಳ ಕೊರತೆಯು ಎದುರಾಗಲಿದೆ. ಏಕೆಂದರೆ ಅತಿಯಾದ ಮಳೆಯಿಂದ ಗೋಡೆಗಳು ಕುಸಿದಿದ್ದು, ಮೇಲ್ಛಾವಣೆ ಬಿದ್ದಿವೆ.
ಕೆಲವೆಡೆ ಬಹುಪಾಲು ನೆಲಸಮವಾಗಿವೆ. 19 ಕೋಟಿ ನಷ್ಟ: ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್‌ ಅವರು ಜಂಟಿ ಸಮೀಕ್ಷೆ ಕೈಗೊಂಡು ಶೀಘ್ರ ವರದಿ ಸಲ್ಲಿಸಿ ಸಿಎಂ ಅವರನ್ನು ಭೇಟಿ ಮಾಡಿ ಹಾನಿ ವರದಿ ಸಲ್ಲಿಕೆ ಮಾಡುವ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿ ಕಾರಿ ವರ್ಗಕ್ಕೆ ಸೂಚಿಸಿದ್ದರಿಂದ ಜಿಲ್ಲೆಯ ಕಂದಾಯ, ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಅ ಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ, ಮಂಗಳವಾರ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಕೆ ಮಾಡಿದ್ದಾರೆ. ಜಿಲ್ಲಾಡಳಿತವು ರಾಜ್ಯ ಕಂದಾಯ ಪ್ರಧಾನ ಕಾರ್ಯದರ್ಶಿಗಳಿಗೆ ಹಾನಿ 19 ಕೋಟಿ ರೂ. ಹಾನಿಯನ್ನು ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ನಿಯಮದ ಅನ್ವಯವೇ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ಕ್ರಿಯಾಯೋಜನೆ: ಜಿಲ್ಲೆಯಲ್ಲಿ ಕೋಳೂರು ಸೇತುವೆ, ರಸ್ತೆಗಳು, ಸರ್ಕಾರಿ ಕಟ್ಟಡಗಳು ಸೇರಿ ಇತರೆ ಕಟ್ಟಡಗಳು ಹಾನಿಯಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಅವುಗಳನ್ನು ಪುನರ್‌ ನಿರ್ಮಾಣ ಮಾಡಬೇಕಿದೆ. ಅವು ಜನತೆಗೆ ಅಗತ್ಯ ಸೌಕರ್ಯಗಳಾಗಿದ್ದರಿಂದ
ತುರ್ತಾಗಿ ಕಾಮಗಾರಿ ಕೈಗೊಳ್ಳಬೇಕಿದೆ. ಹೀಗಾಗಿ ಹಾನಿಯ ನಷ್ಟದ ಜೊತೆಗೆ 90 ಕೋಟಿ ರೂ. ನಷ್ಟು ಕ್ರಿಯಾಯೋಜನೆಯ ಪ್ರಸ್ತಾವನೆಯನ್ನೂ ಸಲ್ಲಿಸಿದೆ.

Advertisement

– ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next