ಚಿಕ್ಕಬಳ್ಳಾಪುರ: ಕೋವಿಡ್ ಸೋಂಕಿನಿಂದರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಇಲ್ಲದೆ ಕಂಗಾಲಾಗಿದ್ದು, ಕೂಡಲೇ ಸರ್ಕಾರ ಪರಿಹಾರ ನೀಡ ಬೇಕೆಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರುಸೇನೆ(ಕೋಡಹಳ್ಳಿ ಚಂದ್ರಶೇಖರ್ ಬಣ) ಜಿಲ್ಲಾಧಿಕಾರಿ ಆರ್.ಲತಾಗೆ ಮನವಿ ಸಲ್ಲಿಸಿತು.
ಈವೇಳೆ ಸಂಘದ ರಾಜ್ಯಪ್ರಧಾನಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಜಿಲ್ಲೆಯಲ್ಲಿ ರೇಷ್ಮೆ, ಹಾಲು, ಹೂವು, ಹಣ್ಣು, ತರಕಾರಿ ಬೆಳೆದು ಕೋವಿಡ್ ಲಾಕ್‌ಡೌನ್‌ನಿಂದ ಮಾರಾಟ ಮಾಡಲು ಸಾಧ್ಯವಾಗದೆ ತೋಟ ಗಳಲ್ಲಿ ಬಿಡುವಂತಾಗಿದೆ. ಮುಂದೆ ಜೀವನನಡೆಸಲು ದಿಕ್ಕು ತೋಚದೆ ರೈತರು ಕಂಗಾಲಾಗಿದ್ದಾರೆ. ಸರ್ಕಾರವು ರೈತರಿಂದ ಖರೀದಿ ಮಾಡಿದರಾಗಿ ಹಣವನ್ನು ಬಾಕಿ ಉಳಿಸಿಕೊಂಡಿದೆ ಎಂದು ಹೇಳಿದರು.
100 ಕೋಟಿ ರೂ. ಬಿಡುಗಡೆ ಮಾಡಿ: ರೇಷ್ಮೆ ಗೂಡಿನ ಉತ್ಪಾದನಾ ವೆಚ್ಚ ಒಂದುಕೆ.ಜಿ.ಗೆ420ರೂ. ಆಗುತ್ತಿದೆ. ಪ್ರಸುತ್ತ 250 ರೂ. ಬೆಲೆ ಇದೆ.ಕೂಡಲೇ ಸರ್ಕಾರವು ರೇಷ್ಮೆ ಗೂಡಿಗೆ 500 ರೂ.ಬೆಂಬಲ ಬೆಲೆ ಕೊಡಬೇಕು, ನೂಲು ಬಿಚ್ಚಣಿಕೆದಾರರು, ರೇಷ್ಮೆಯನ್ನು ಮಾರಾಟ ಮಾಡಲು ಆಗುತ್ತಿಲ್ಲವಾದ್ದರಿಂದ ಕೆಎಸ್‌ಎಂಬಿ ಮಧ್ಯ ಪ್ರವೇ ಶಿಸಿ, ರೇಷ್ಮೆ ಖರೀದಿ ಮತ್ತು ಅಡಮಾನ ಇಟ್ಟುಕೊಳ್ಳಲು ಸರ್ಕಾರವು 100 ಕೋಟಿ ರೂ. ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಒಂದು ಒತ್ತಾಯಿಸಿದರು.
ದರ ಏರಿಕೆ ಮಾಡಿ: ಕಳೆದ ವರ್ಷದ ಲಾಕ್ ಡೌನ್ ಸಮಯದಲ್ಲಿ 30 ಕೋಟಿ ರೂ. ಬಿಡುಗಡೆ ಮಾಡಿ ಸರ್ಕಾರ ಮತ್ತೆ ವಾಪಸ್ ಪಡೆದಿತ್ತು,ಹಾಲಿಗೆ ಕೊಡುತ್ತಿರುವ ಪ್ರೋತ್ಸಾಹ ಧನವನ್ನು ಜನವರಿ 2021ರಿಂದ ತಡೆಹಿಡಿದಿದ್ದು, ಈ ಹಣವನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಪಶುಆಹಾರವಾದ ಹಿಂಡಿ, 30 ಕೆ.ಜಿ. ಚೀಲದ ಬೆಲೆ 1200 ರೂ.ಗಳಿಂದ 1500 ರೂ. ಆಗಿದ್ದು,ಬೂಸಾ 50 ಕೆ.ಜಿ. ಚೀಲದ ದರ 1000 ರೂ.ನಿಂದ 1280 ರೂ.ಗೆ ಏರಿಕೆ ಆಗಿದೆ. ಇದರಿಂದ,ಪ್ರೋತ್ಸಾಹ ಧನವನ್ನು 1 ಲೀಟರ್‌ಗೆ 5ರೂ.ನಿಂದ 10 ರೂ.ಗೆ ಏರಿಸಬೇಕು ಎಂದು ಒತ್ತಾಯಿಸಿದರು.
ಪರಿಹಾರ ನೀಡಿ: ತರಕಾರಿ ಮತ್ತು ಹಣ್ಣು ಬೆಳೆಗಳಾದ ಆಲೂಗಡ್ಡೆ, ಟೊಮೆಟೋ, ಕೋಸು, ಕಾಪ್ಸಿಕಂ, ಬದನೆಕಾಯಿ ಮತ್ತು ಹಣ್ಣು ಬೆಳೆಗಳಾದ ಮಾವು, ದ್ರಾಕ್ಷಿ ಮುಂತಾದ ಹಣ್ಣುಗಳಬೆಲೆ ಕುಸಿದಿದ್ದು, ಮಾರಾಟ ಮಾಡಲಾಗದೆತೋಟಗಳಲ್ಲಿ ಕೊಳೆಯುತ್ತಿದೆ. ಇದಕ್ಕೆ ಎಕರೆಗೆ25000 ರೂ. ಪರಿಹಾರವಾಗಿ ಕೊಡಬೇಕು,ಪ್ರಕೃತಿ ವಿಕೋಪದಿಂದ ಗಾಳಿ, ಮಳೆ, ಆಲಿಕಲ್ಲುನಿಂದ ರೈತರು ಬೆಳೆದ ದ್ರಾಕ್ಷಿ, ಟೊಮೆಟೋ,ಮಾವು, ಪಾಲಿಹೌಸ್, ಹೂವು ಇನ್ನು ಇತರೆ ಬೆಳೆಗಳಿಗೆ ತೀವ್ರವಾದ ಹಾನಿ ಆಗಿದ್ದು, ನಷ್ಟ ಹೊಂದಿರುವ ರೈತರಿಗೆ ಕೂಡಲೆ ಪರಿಹಾರ ಕೊಡಬೇಕು ಎಂದು ಹೇಳಿದರು.
ಕೊರೊನಾ ಸಂದರ್ಭದಲ್ಲಿ ದಿನ ಬಳಕೆವಸ್ತುಗಳು ಕಾಳ ಸಂತೆಯಲ್ಲಿ ಮಾರಾಟವಾಗುತ್ತಿದ್ದು, ಇದನ್ನು ಕೂಡಲೆ ನಿಯಂತ್ರಿಸಬೇಕೆಂದು ಮನವಿ ಮಾಡಿದರು.
ಘಟಕಗಳನ್ನು ಹೆಚ್ಚಿಸಿ: ಕೊರೊನಾ ಸೋಂಕು ಗ್ರಾಮೀಣ ಭಾಗಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ. ತಾಲೂಕು ಕೇಂದ್ರಗಳಲ್ಲಿ ಆಮ್ಲಜನಕ, ಹಾಸಿಗೆ ವ್ಯವಸ್ಥೆ ಮತ್ತು ಐ.ಸಿ.ಯು. ಘಟಕಗಳನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿದರು. ರೈತಸಂಘದ ಜಿಲ್ಲಾ ಮುಖಂಡ ವೇಣುಗೋಪಾಲ್,ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಜಿಲ್ಲೆಯ ವಿವಿಧ ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.