ಚಿಕ್ಕಮಗಳೂರು: ಪ್ರಕೃತಿ ವಿಕೋಪದಿಂದ ಉಂಟಾದ ಬೆಳೆನಷ್ಟ ಸಮೀಕ್ಷೆ ಮಾಡಿ ಶೇ.25ರಷ್ಟಾದರೂ ಸರ್ಕಾರ ಪರಿಹಾರ ನೀಡಬೇಕೆಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಒತ್ತಾಯಿಸಿದರು.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹವಾಮಾನ ಇಲಾಖೆ ಮಾರ್ಗಸೂಚಿಯಂತೆ ಅಧಿಕಾರಿಗಳು ಮುಂಗಾಗ್ರತೆ ಕೈಗೊಳ್ಳಬೇಕಿತ್ತು. ಜನಪ್ರತಿನಿಧಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಬೇಕಿತ್ತು. ಪ್ರಕೃತಿ ವಿಕೋಪದಿಂದ ಮಲೆನಾಡು ಭಾಗದಲ್ಲಿ ಅಡಕೆ, ಕಾಫಿ, ಬಾಳೆ, ಕಾಳುಮೆಣಸಿಗೆ ಹಾನಿ ಉಂಟಾಗಿದೆ ಎಂದರು.
ಬಯಲು ಸೀಮೆ ಭಾಗದಲ್ಲಿ ತರಕಾರಿ ಬೆಳೆ ಸಂಪೂರ್ಣ ನಾಶವಾಗಿದೆ. ಅಡಕೆ, ತೆಂಗು ಬೆಳೆ ನಾಶವಾಗಿದೆ. ಜಿಲ್ಲಾಡಳಿತ ಕೂಡಲೇ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅ ಧಿಕಾರಿಗಳಿಂದ ಬೆಳೆ ಸಮೀಕ್ಷೆ ನಡೆಸಿ ರೈತರಿಗೆ ಆಗಿರುವ ನಷ್ಟ ತುಂಬಿಕೊಡಬೇಕೆಂದು ತಿಳಿಸಿದರು. ಹಿಂದಿನ ವರ್ಷದ ಪ್ರಕೃತಿ ವಿಕೋಪದಿದ ಮನೆ, ಜಮೀನು ಕಳೆದುಕೊಂಡವರಿಗೆ ಇಂದಿಗೂ ಪುನರ್ವಸತಿ ಕಲ್ಪಿಸಿಲ್ಲ. ಪ್ರತಿ ಬಾರಿ ವಿಕೋಪ ಬಂದಾಗಲೂ ಅವರು ಸಂಕಷ್ಟ ಎದುರಿಸಬೇಕೇ ಎಂದು ಪ್ರಶ್ನಿಸಿ ಸಂದರ್ಭ ಒದಗಿ ಬಂದರೆ ಕಳೆದ ವರ್ಷದ ಸಂತ್ರಸ್ತರೆಲ್ಲರನ್ನೂ ಜಿಲ್ಲಾಧಿಕಾರಿ ಕಚೇರಿ ಮುಂದೆ ಪೆರೇಡ್ ಮಾಡಿಸಲು ಸಿದ್ಧ ಎಂದು ಹೇಳಿದರು.
ಶಿಕ್ಷಣ ಇಲಾಖೆ ಜಾರಿಗೆ ಮುಂದಾಗಿರುವ ವಿದ್ಯಾಗಮ ಯೋಜನೆ ಅವೈಜ್ಞಾನಿಕವಾಗಿದೆ. ಇಂಟಲಿಜೆಂಟ್ ಕಾಲ್ಪನಿಕ ಕೊಠಡಿ, ಬ್ರಿಲಿಯಂಟ್ ಕಾಲ್ಪನಿಕ ಕೊಠಡಿ ಹಾಗೂ ಜೀನಿಯಸ್ ಕಾಲ್ಪನಿಕ ಕೊಠಡಿ ಎಂದು ವಿಂಗಡಿಸಿ ಮಕ್ಕಳಿಗೆ ಪಾಠ ಮಾಡಲು ವಿದ್ಯಾಗಮ ಯೋಜನೆ ರೂಪಿಸಲಾಗಿದೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಟಿ.ವಿ., ಮೊಬೈಲ್, ಇಂಟರ್‌ನೆಟ್ ಸಮಸ್ಯೆಯಿದೆ ಎಂದರು. ಕೋವಿಡ್-19 ಸಂದರ್ಭದಲ್ಲಿ ಮಕ್ಕಳನ್ನು ಗುಂಪು ಸೇರಿಸಿದರೆ ಸಾಮಾಜಿಕ ಅಂತರ ಉಲ್ಲಂಘನೆಯಾಗುವುದಿಲ್ಲವೇ? ಇದರ ಬದಲು 15 ವಿದ್ಯಾರ್ಥಿಗಳನ್ನು ಸೇರಿಸಿ ಶಾಲೆಗಳಲೇ ಪಾಠ ಮಾಡುವುದು ಒಳಿತು ಎಂದರು