Advertisement

ಪ್ರಾಕೃತಿಕ ವಿಕೋಪ ಪರಿಹಾರ ಮೊತ್ತ ಅರ್ಜಿ ಖರ್ಚಿಗೂ ಸಾಲದು !

02:10 AM May 31, 2018 | Karthik A |

ಸುಳ್ಯ: ಪಾಕೃತಿಕ ವಿಕೋಪದಡಿ ಅಡಿಕೆ, ಬಾಳೆ ಗಿಡಗಳಿಗೆ ಸಿಗುವ ಪರಿಹಾರ ಮೊತ್ತ ಕೇಳಿದರೆ ನಷ್ಟಕ್ಕೊಳಗಾದ ಯಾವುದೇ ಕೃಷಿಕರು ಅರ್ಜಿ ಸಲ್ಲಿಸಲಾರರು! ಕಾರಣ, ಅರ್ಜಿ ಸಲ್ಲಿಸಲು ವಿನಿಯೋಗಿಸಿದ ಖರ್ಚು ಕೂಡ ಈ ಪರಿಹಾರ ಮೊತ್ತದಿಂದ ಸಿಗಲಾರದು. ಪಾಕೃತಿಕ ವಿಕೋಪದಿಂದ ಹಾನಿ ಉಂಟಾದ ಅಡಿಕೆ ಗಿಡವೊಂದಕ್ಕೆ ಸಿಗುವ ಪರಿಹಾರದ ಮೊತ್ತ 10 ರೂ. ದಾಟುವುದಿಲ್ಲ. ಆ ಜುಜುಬಿ ಮೊತ್ತ ಪಡೆಯಲು ಕೆಲ ನಿಬಂಧನೆಗಳು ಇವೆ. ಹೀಗಾಗಿ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಲು ಹಿಂದೇಟು ಹಾಕುತ್ತಾರೆ.

Advertisement

ನಾಶಕ್ಕೂ ಷರತ್ತು!
ತೋಟಗಾರಿಕೆ ಇಲಾಖೆ ಪ್ರಕಾರ ಒಂದು ಹೆಕ್ಟೇರ್‌ (ಎರಡುವರೆ ಎಕರೆ) ಸ್ಥಳದಲ್ಲಿ 1,370 ಅಡಿಕೆ ಗಿಡ ನಾಟಿ ಮಾಡಬಹುದು. ಪ್ರಾಕೃತಿಕ ವಿಕೋಪದ ಪರಿಹಾರ ದೊರೆಯಬೇಕಾದರೆ ಒಟ್ಟು ತೋಟದ ಶೇ. 33 ಬೆಳೆ ನಷ್ಟವಾಗಬೇಕು. ಅದಕ್ಕಿಂತ ಕಡಿಮೆ ಆದರೆ ಅರ್ಜಿ ಸಲ್ಲಿಸುವಂತಿಲ್ಲ. ಉದಾ ಹರಣೆಗೆ ಒಂದು ಹೆಕ್ಟೇರ್‌ ನಲ್ಲಿ 452ಕ್ಕೂ ಹೆಚ್ಚು ಅಡಿಕೆ ಗಿಡ ಅಥವಾ ಇತರೆ ಬೆಳೆ ನಷ್ಟವಾದರೆ ಅರ್ಜಿ ಸಲ್ಲಿಸಬಹುದು.

ಪರಿಶೀಲಿಸಿ ಪರಿಹಾರ
ಅರ್ಜಿ ಸಲ್ಲಿಸಿದ ಬಳಿಕ ಗ್ರಾಮಕರಣಿಕರು ಸ್ಥಳ ತಪಾಸಣೆ ನಡೆಸುತ್ತಾರೆ. ಬೆಳೆ ನಷ್ಟದ ಬಗ್ಗೆ ಕಂದಾಯ ಅಧಿಕಾರಿಗಳಿಂದ ಶಿಫಾರಸ್ಸುಗೊಂಡು ತಹಶೀಲ್ದಾರ್‌ ರುಜು ಪಡೆದು, ತೋಟಗಾರಿಕೆ ಇಲಾಖೆ ಸಮ್ಮತಿ ಸಿಕ್ಕಿದ ಅನಂತರ ಚೆಕ್‌ ನೀಡುವಷ್ಟು ನಿಬಂಧನೆಗಳಿವೆ. ಇಲ್ಲಿ ಅರ್ಜಿದಾರ ತೋಟಗಾರಿಕೆಗೆ ಅರ್ಜಿ ಕೊಟ್ಟರೆ, ಕಂದಾಯ ಇಲಾಖೆಗೆ ನೀಡಿ ಎಂಬ ಉತ್ತರವೂ ಬರುತ್ತದೆ. ಹಾಗಾಗಿ ಚಿಲ್ಲರೆ ಮೊತ್ತಕ್ಕೆ ಅಲೆದಾಡುವ ದುಃಸ್ಥಿತಿ ಕೃಷಿಕನದ್ದು.

ಅಡಿಕೆ, ತೆಂಗು ಮೊದಲಾದ ಕೃಷಿ ಆಧಾರಿತ ಬೆಳೆಗೆ ಹೆಕ್ಟೆರೊಂದಕ್ಕೆ ನೀಡುವ ಪರಿಹಾರದ ಮೊತ್ತ 6,800 ರೂ. ಅಂದರೆ ಎರಡುವರೆ ಹೆಕ್ಟೇರಿನಲ್ಲಿರುವ ಎಲ್ಲ ಕೃಷಿ ನಷ್ಟವಾದರೆ ಮಾತ್ರ ಇಷ್ಟು ಮೊತ್ತ ದೊರೆಯಬಲ್ಲುದು ಅನ್ನುತ್ತದೆ ಇಲಾಖಾ ನಿಯಮ. ಸಣ್ಣ ತೋಟವೊಂದರಲ್ಲಿ ನೂರು ಅಡಿಕೆ ತೋಟ ಹಾನಿ ಆದರೆ ಅವರಿಗೆ ಅರ್ಜಿ ಸಲ್ಲಿಸಿದ ಖರ್ಚಿಗೂ ಪರಿಹಾರ ಮೊತ್ತ ಸಾಲದು. ಇದು ಈಗಾಗಲೇ ಅರ್ಜಿ ಸಲ್ಲಿಸಿದ ಕೃಷಿಕರ ವಾಸ್ತವ ಸ್ಥಿತಿ.

ಕಚ್ಚಾ ಮನೆಗೆ ಭಾಗಶಃ ಹಾನಿಯಾದರೆ 3,200 ರೂ., ಪಕ್ಕಾ ಮನೆಯಾದರೆ 5,200 ರೂ., ಎರಡು ಮಾದರಿಯ ಮನೆಗಳು ಪೂರ್ಣ ಹಾನಿಯಾದರೆ 95,100 ರೂ. ಪರಿಹಾರ ದೊರೆಯುತ್ತದೆ. ಅಂದರೆ 95 ಸಾವಿರ ರೂ. ಮೊತ್ತದಲ್ಲಿ ಪೂರ್ಣ ಮನೆ ನಿರ್ಮಿಸಲು ಸಾಧ್ಯ ಅನ್ನುತ್ತದೆ ಸರಕಾರದ ಸುತ್ತೋಲೆ. ಈಗಿನ ವೆಚ್ಚ ಗಮನಿಸಿದರೆ, ಕೆಂಪು ಕಲ್ಲು, ಹೊಯಿಗೆ ಸಂಗ್ರಹಿಸಲು ಈ ಹಣ ಸಾಲದು.

Advertisement

ಜೀವಹಾನಿ ಪರಿಹಾರ
ವ್ಯಕ್ತಿಯೊಬ್ಬ ಸಿಡಿಲು ಅಥವಾ ಪಾಕೃತಿಕ ವಿಕೋಪದಿಂದ ಮೃತಪಟ್ಟರೆ 4 ಲಕ್ಷ ರೂ., ಗಾಯಾಳುವಿಗೆ ಚಿಕಿತ್ಸೆ ಅವಧಿ ಪರಿಗಣಿಸಿ 12,700 ರೂ. ಮತ್ತು 4,300 ರೂ. ಪರಿಹಾರ ನೀಡಲು ಅವಕಾಶವಿದೆ. ಇವೆಲ್ಲವೂ ವೈದ್ಯರ ವರದಿ ಆಧಾರಿತವಾಗಿ ದೊರೆಕುತ್ತದೆ. ಇನ್ನು ಸಾಕು ಪ್ರಾಣಿಗಳ ಪೈಕಿ ಪಶುವಿನ ಜೀವ ಹಾನಿ ಉಂಟಾದಲ್ಲಿ 30 ಸಾವಿರ ರೂ. ತನಕ ಪರಿಹಾರ ಸಿಗುತ್ತದೆ. ಇದಕ್ಕೆ ಪಶು ವೈದ್ಯಾಧಿಕಾರಿಯವರ ವರದಿ ಕಡ್ಡಾಯ.

ಅರೆಕಾಸಿನ ಮಜ್ಜಿಗೆ
ಫಸಲು ಬರುವ ಅಡಿಕೆಯೊಂದರ ಮರದ ಮೂಲಬೆಲೆ ಸರಕಾರಿ ಅಂಕಿ ಅಂಶದ ಪ್ರಕಾರ 552 ರೂ. ಅದರನ್ವಯ 100 ಗಿಡಕ್ಕೆ ಹಾನಿ ಉಂಟಾದರೆ 55,200 ರೂ. ನೀಡಬೇಕು. ಆದರೆ ಇಲ್ಲಿ 1,200 ರೂ. ನೀಡಿ ಕೈ ತೊಳೆದುಕೊಳ್ಳಲಾಗುತ್ತದೆ. ಈ ತಾರತಮ್ಯ ಕೃಷಿಗೆ ಮಾತ್ರವಲ್ಲ. ಮನೆ ನಷ್ಟ, ಜೀವ ನಷ್ಟಕ್ಕೂ ಅವೈಜ್ಞಾನಿಕ ಪರಿಹಾರ ಮೊತ್ತ ನಿಗದಿಪಡಿಸಲಾಗಿದೆ. ನ್ಯಾಯಯುತ ಪರಿಹಾರ ನೀಡಬೇಕು ಎಂಬ ಆಗ್ರಹಕ್ಕೆ ಸ್ಪಂದನೆ ಸಿಕ್ಕಿಲ್ಲ.

ಮನೆ ನಷ್ಟ ಪರಿಹಾರ
ಕಚ್ಚಾ ಮನೆಗೆ ಭಾಗಶಃ ಹಾನಿಯಾದರೆ 3,200 ರೂ., ಪಕ್ಕಾ ಮನೆಯಾದರೆ 5,200 ರೂ., ಎರಡು ಮಾದರಿಯ ಮನೆಗಳು ಪೂರ್ಣ ಹಾನಿಯಾದರೆ 95,100 ರೂ. ಪರಿಹಾರ ದೊರೆಯುತ್ತದೆ. ಅಂದರೆ 95 ಸಾವಿರ ರೂ. ಮೊತ್ತದಲ್ಲಿ ಪೂರ್ಣ ಮನೆ ನಿರ್ಮಿಸಲು ಸಾಧ್ಯ ಅನ್ನುತ್ತದೆ ಸರಕಾರದ ಸುತ್ತೋಲೆ. ಈಗಿನ ವೆಚ್ಚ ಗಮನಿಸಿದರೆ ಈ ಹಣ ಸಾಲದು.

ಅರ್ಜಿ ಏಕೆ ಸಲ್ಲಿಸುವುದು?
ಹತ್ತು ಅಡಿಕೆ ಮರ ನಾಶವಾದರೂ ಅದರಿಂದ ಆಗುವ ನಷ್ಟದ ಮೊತ್ತ ಲಕ್ಷ ದಾಟುತ್ತದೆ. ಆದರೆ ಸರಕಾರ ಮಾತ್ರ ಚಿಲ್ಲರೆ ಕೊಡುತ್ತದೆ. ಪರಿಹಾರ ಮೊತ್ತದಲ್ಲಿ ಮತ್ತೆ ಕೃಷಿ ಮಾಡಿ ಬದುಕು ಕಟ್ಟಿಕೊಳ್ಳಬೇಕು. ಈ ಚಿಲ್ಲರೆ ಮೊತ್ತದಲ್ಲಿ ಇದು ಸಾಧ್ಯವಿಲ್ಲ. 
– ಪುರುಷೋತ್ತಮ, ಕೃಷಿಕ, ಸುಳ್ಯ

— ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next