ಮಂಗಳೂರು: ಹವಾಮಾನ ಆಧಾರಿತ ತೋಟಗಾರಿಕೆ ಬೆಳೆ ವಿಮೆ ಯೋಜನೆಯಡಿ 2018- 19ನೇ ಸಾಲಿಗೆ 8,900 ರೈತರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಎಚ್.ಆರ್. ನಾಯಕ್ ತಿಳಿಸಿದ್ದಾರೆ.
ಪತ್ರಿಕಾಭವನದಲ್ಲಿ ಮಂಗಳವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
2019-20ನೇ ಸಾಲಿನಲ್ಲಿ ಅಡಿಕೆಗೆ ಪ್ರತಿ ಹೆಕ್ಟೇರ್‌ಗೆ 1,28,000 ರೂ. ವಿಮಾ ಪರಿಹಾರ ದೊರೆಯಲಿದೆ. ವಿಮಾ ಕಂತು 38,400 ರೂ.ಗಳಾಗಿದ್ದು, ರೈತರು 6,400 ರೂ. ಪಾವತಿಸಬೇಕಿದೆ. ಉಳಿದ ಮೊತ್ತವನ್ನು ಸರಕಾರ ಭರಿಸಲಿದೆ. ಕರಿಮೆಣಸಿಗೆ ಪ್ರತಿ ಹೆಕ್ಟೇರ್‌ಗೆ ವಿಮಾ ಮೊತ್ತ 47,000 ರೂ., ವಿಮಾ ಕಂತು 11,167 ರೂ.ಗಳಾಗಿದ್ದು ರೈತರು 2,350 ರೂ. ಪಾವತಿಸಬೇಕಿದೆ. 2019ರ ಮುಂಗಾರು ಹಂಗಾಮಿಗೆ ಸಂಬಂಧಿಸಿ ವಿಮಾ ಕಂತು ಪಾವತಿಗೆ ಜೂ. 30 ಕೊನೆಯ ದಿನ ಎಂದರು.
ಯೋಜನೆಯಡಿ 2016-17ನೇ ಸಾಲಿನಲ್ಲಿ 9,170 ಪ್ರಕರಣಗಳಿಗೆ 7 ಕೋಟಿ ರೂ. ವಿಮಾ ಪರಿಹಾರ ಬಿಡುಗಡೆಯಾಗಿತ್ತು. 2017-18ರಲ್ಲಿ 945 ಮಂದಿ ರೈತರಿಗೆ 1,812 ಪ್ರಕರಣ ಗಳಿಗೆ 3.33 ಕೋಟಿ ರೂ. ಪರಿಹಾರ ಧನ ಬಿಡುಗಡೆಯಾಗಿತ್ತು. ಪ್ರಸಕ್ತ ಸಾಲಿನ ವಿಮಾ ಪರಿಹಾರ ಇನ್ನಷ್ಟೆ ಬಿಡುಗಡೆಯಾಗಬೇಕಿದೆ ಎಂದರು.
ಕಳೆದ ವರ್ಷ ಅಡಿಕೆ ಕೊಳೆ ರೋಗಕ್ಕೆ ಸಂಬಂಧಿಸಿ 31 ಸಾವಿರ ಹೆಕ್ಟೇರ್ ಕೃಷಿ ಭೂಮಿ ನಷ್ಟವಾಗಿದ್ದು, 56,000 ರೈತರು ವರದಿ ಸಲ್ಲಿಸಿದ್ದರು. 50.90 ಕೋಟಿ ರೂ. ಬಿಡುಗಡೆಯಾಗಿದ್ದು, ಇದು ಈವರೆಗೆ ಬಿಡುಗಡೆಯಾದ ಅತೀ ಹೆಚ್ಚು ಪರಿಹಾರ ಧನವಾಗಿದೆ ಎಂದವರು ಮಾಹಿತಿ ನೀಡಿದರು.
ಮಳೆಗಾಲದಲ್ಲಿ ಸದ್ಯ ತೋಟಗಾರಿಕೆ ಇಲಾಖೆಯ ನರ್ಸರಿಯಲ್ಲಿ ರೈತರಿಗೆ ವಿತರಿಸಲು 4ರಿಂದ 5 ಲಕ್ಷ ಕರಿಮೆಣಸು ಗಿಡ, 2 ಲಕ್ಷ ಕಸಿ ಮಾಡಿದ ಗೇರು ಗಿಡ ಲಭ್ಯವಿವೆ ಎಂದವರು ತಿಳಿಸಿದರು.
ಅಧಿಕಾರಿಗಳಾದ ಪ್ರವೀಣ್, ಜಾನಕಿ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ಭಾಸ್ಕರ ರೈ ಕಟ್ಟ ಸ್ವಾಗತಿಸಿದರು. ಇಬ್ರಾಹಿಂ ಅಡ್ಕಸ್ಥಳ ಕಾರ್ಯಕ್ರಮ ನಿರೂಪಿಸಿದರು.