ಕಲಬುರಗಿ: ಜಿಲ್ಲೆಯ ಇತಿಹಾಸದಲ್ಲಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 2.14 ಲಕ್ಷ ರೈತರು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿದ್ದು, ಇಲ್ಲಿಯವರೆಗೆ 1.20 ಲಕ್ಷ ರೈತರು ಬೆಳೆ ವಿಮೆ ಮಾಡಿಸಿದ್ದೇ ದಾಖಲೆಯಾಗಿತ್ತು.
ಈ ಹಿಂದೆ ಬ್ಯಾಂಕ್‌ನಲ್ಲಿ ಸಾಲ ಪಡೆದ ರೈತರ ಪ್ರಿಮಿಯಂ ಕಡಿತಗೊಳಿಸಿ ಬೆಳೆ ವಿಮೆ ಮಾಡಿಸಲಾಗುತ್ತಿತ್ತು. ಆದರೆ ಪ್ರಸಕ್ತವಾಗಿ ರಾಷ್ಟ್ರೀಕೃತ ಹಾಗೂ ಡಿಸಿಸಿ ಬ್ಯಾಂಕ್‌ನಿಂದ ಬೆಳೆ ಸಾಲ ಪಡೆಯದಿದ್ದರೂ ಪ್ರಸಕ್ತವಾಗಿ ರೈತರು ಸ್ವಯಂ ಪ್ರೇರಿತವಾಗಿ ಬೆಳೆ ವಿಮೆ ಪ್ರಿಮಿಯಂ ತುಂಬಿದ್ದಾರೆ. ಇದನ್ನು ನೋಡಿದರೆ ರೈತರಲ್ಲಿ ಬೆಳೆ ವಿಮೆ ಮಾಡಿಸುವ ಕುರಿತಾಗಿ ಜಾಗೃತಿ ಹೊಂದಿರುವುದು ನಿರೂಪಿಸುತ್ತದೆ.
ಪ್ರಸಕ್ತ ಮುಂಗಾರು ಹಂಗಾಮಿಗೆ ಜು.31 ಬೆಳೆ ವಿಮೆಗೆ ಪ್ರಿಮಿಯಂ ತುಂಬುವ ಕೊನೆ ದಿನವಾಗಿತ್ತು. ರೈತರು ಉತ್ಸಾಹದಿಂದ ಕಳೆದ ತಿಂಗಳ ಕೊನೆ ದಿನದವರೆಗೂ ಬೆಳೆ ವಿಮೆ ಮಾಡಿಸಿದ್ದು, ಈಗ ಅಂತಿಮ ಪಟ್ಟಿ ಹೊರ ಬಿದ್ದಿದ್ದು, ಜಿಲ್ಲೆಯಲ್ಲಿ ಅತ್ಯಧಿಕ 2.14 ಲಕ್ಷ ರೈತರು ಬೆಳೆ ವಿಮೆ ಮಾಡಿಸಿದ್ದಾರೆ.
120 ಕೋಟಿ ರೂ. ಪ್ರಿಮಿಯಂ: ಜಿಲ್ಲೆಯಲ್ಲಿ 2.14 ಲಕ್ಷ ರೈತರು ಬೆಳೆ ವಿಮೆ ಮಾಡಿಸಿದ್ದು, ರೈತರು ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರದ ಪಾಲು ಸೇರಿ ಬೆಳೆ ವಿಮೆ ಕಂಪನಿಗೆ 120 ಕೋಟಿ ರೂ. ಪ್ರಿಮಿಯಂ ಜಮೆಯಾಗಿದೆ. ಈ ಮೂಲಕವೂ ದಾಖಲೆ ಎನ್ನುವಂತೆ ಕಲಬುರಗಿ ಜಿಲ್ಲೆ ಇತಿಹಾಸದಲ್ಲಿ ವಿಮಾ ಕಂಪನಿಗೆ ನೂರು ಕೋಟಿ ರೂ.ಗೂ ಅಧಿಕ ಹಣ ವಿಮೆ ಕಂಪನಿಗೆ ಜಮೆಯಾಗಿದೆ. ಒಟ್ಟಾರೆ ರೈತರ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರ ಸೇರಿ ಪ್ರಿಮಿಯಂ ಸೇರಿ ಯುನಿರ್ವಸಲ್ ಸೊಂಪೋ ಜನರಲ್ (ಇನ್ಸುರೆನ್ಸ್) ವಿಮಾ ಕಂಪನಿಗೆ ಇಷ್ಟೊಂದು ಮೊತ್ತ ಜಮೆಯಾಗಿದೆ.
ರಾಜ್ಯಾದ್ಯಂತ ಪ್ರಸಕ್ತವಾಗಿ 2 ಸಾವಿರ ಕೋಟಿ ರೂ. ಸಮೀಪ ರೈತರ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಪಾಲು ಸೇರಿ ಹಣ ವಿಮಾ ಕಂಪನಿಗೆ ಜಮೆಯಾಗಿದೆ. ಇಷ್ಟೊಂದು ಪ್ರಮಾಣದಲ್ಲಿ ಹಣ ವಿಮಾ ಕಂಪನಿಗೆ ಜಮೆಯಾಗಿರುವುದು ದಾಖಲೆಯಾಗಿದೆ. ಕಳೆದ ವರ್ಷ ಜಿಲ್ಲೆಯಲ್ಲಿ 79 ಸಾವಿರ ರೈತರು ಬೆಳೆ ವಿಮೆ ಮಾಡಿಸಿದ್ದರು. ಹೀಗಾಗಿ 55 ಕೋಟಿ ರೂ. ಬೆಳೆ ವಿಮೆ ಕಂಪನಿಗೆ ಪ್ರಿಮಿಯಂ ಮೊತ್ತ ಜಮೆಯಾಗಿತ್ತು. ಸ್ಥಳೀಯ ನೈಸರ್ಗಿಕ ವಿಕೋಪ ಪರಿಹಾರ ಅಡಿ ಜಿಲ್ಲೆಗೆ ಮೊದಲ ಹಂತದ 22.52 ಕೋಟಿ ರೂ. ಹಾಗೂ ತದನಂತರ ಬಿಟ್ಟು ಹೋದ ರೈತರಿಗೆ 8.49 ಕೋಟಿ ರೂ. ಸೇರಿ ಒಟ್ಟಾರೆ 31 ಕೋಟಿ ರೂ. ಬಿಡುಗಡೆಯಾಗಿದೆ. ಆದರೆ ವಿಮಾ ಕಂಪನಿ 14 ಕೋಟಿ ರೂ. ಲಾಭ ಮಾಡಿಕೊಂಡಂತಾಗಿದೆ.
-ಹಣಮಂತರಾವ ಭೈರಾಮಡಗಿ