ಚಳ್ಳಕೆರೆ: ಬೆಳೆ ವಿಮಾ ಕಂಪನಿಗಳು 2018ರಲ್ಲಿ ಬೆಳೆ ವಿಮಾ ಕಂತನ್ನು ರೈತರಿಂದ ಪಡೆದಿದ್ದವು. ಆದರೆ ವಿಮಾ ಹಣ ಪಾವತಿಸದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆ ಹಿನ್ನೆಲೆಯಲ್ಲಿ ಧರಣಿಯನ್ನು ವಾಪಸ್ ಪಡೆಯಲಾಗಿತ್ತು ಎಂದು ರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ. ಭೂತಯ್ಯ ಹೇಳಿದರು.
ರೈತ ಸಂಘದ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಪ್ರತಿಭಟನೆಯ ಫಲವಾಗಿ ಕಳೆದ ವಾರ ವಿಮಾ ಕಂಪನಿಯವರು ಅಂದಾಜು 3 ಕೋಟಿ ರೂ. ಬೆಳೆ ವಿಮಾ ಹಣವನ್ನು ರೈತರ ಖಾತೆಗೆ ಜಮಾ ಮಾಡಿದ್ದಾರೆ. ಇದು ರೈತರ ಹೋರಾಟ ಪ್ರತಿಫಲ ಎಂದರು.
ಇದೇ ಸಂದರ್ಭದಲ್ಲಿ ತಾಲೂಕಿನ ಚಿತ್ರನಾಯಕನಹಳ್ಳಿ ಗ್ರಾಮದ ರೈತ ಮಹಿಳೆಯರು ರೈತ ಸಂಘಕ್ಕೆ ಸೇರ್ಪಡೆಯಾದರು. ನಂತರ ಮಾತನಾಡಿದ ರೈತ ಮಹಿಳೆಯರಾದ ತಿಮ್ಮಕ್ಕ, ದೇವೀರಮ್ಮ, ನಮ್ಮ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟವನ್ನು ತಡೆಯುವ ನಿಟ್ಟಿನಲ್ಲಿ ರೈತ ಸಂಘದ ಸಹಕಾರದೊಂದಿಗೆ ಹೋರಾಟ ನಡೆಸಲಾಗಿತ್ತು. ಇದರಿಂದಾಗಿ ಇಂದಿಗೂ ಯಾವುದೇ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿಲ್ಲ. ರೈತ ಸಂಘದ ಕಾರ್ಯಚಟುವಟಿಕೆಗಳಿಂದ ಪ್ರೇರಣೆಗೊಂಡು ಸ್ವಯಂಪ್ರೇರಿತವಾಗಿ ರೈತ ಸಂಘಕ್ಕೆ ಸೇರ್ಪಡೆಯಾಗಿರುವುದಾಗಿ ತಿಳಿಸಿದರು.
ರೈತ ಮುಖಂಡರಾದ ಜಿ.ಎಚ್. ತಿಪ್ಪೇಸ್ವಾಮಿ, ಜಿ.ಟಿ. ಮಂಜುನಾಥ, ಎನ್.ತಿಪ್ಪೇಸ್ವಾಮಿ, ದಯಾನಂದಮೂರ್ತಿ, ಹನುಮಣ್ಣ, ಬಿ.ಟಿ. ನಿಂಗಪ್ಪ, ಚಂದ್ರಶೇಖರ್ ಮತ್ತಿತರರು ಇದ್ದರು.