ಕೊಪ್ಪಳ: ಹಣ ತುಂಬಿದ ಎಲ್ಲ ರೈತರಿಗೆ ಬೆಳೆ ವಿಮೆ ಸಿಗಬೇಕು. ಆಧಾರ್ ಸೇರಿದಂತೆ ಎಲ್ಲ ದಾಖಲೆಗಳು ಹೊಂದಾಣಿಕೆ ಆಗುವಂತೆ ಮಾಡಿ, ಇದರಲ್ಲಿ ಗ್ರಾಮ ಲೆಕ್ಕಾಧಿಕಾರಿಗಳನ್ನು ಬಳಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಕುರಿತು ಶುಕ್ರವಾರ ಆಯೋಜಿಸಿದ್ದ ಬೆಳೆವಿಮೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೆಳೆವಿಮೆ ನೀಡುವ ವಿಮಾ ಸಂಸ್ಥೆಗಳು ರೈತರಿಂದ ಕಂತು ಪಾವತಿಗೆ ತೋರುವ ಆಸಕ್ತಿ ಬೆಳೆವಿಮೆ ನೀಡುವಲ್ಲಿ ತೋರಿಸುವುದಿಲ್ಲ. ಆದ್ದರಿಂದ ವಿಮಾ ಸಂಸ್ಥೆಗಳು ವಿಮೆ ಪಡೆಯುವ ಕುರಿತು ರೈತರಿಗೆ ಜಾಗೃತಿ ಮೂಡಿಸಬೇಕು. ಆಗ ಮಾತ್ರ ಹೆಚ್ಚಿನ ರೈತರು ಬೆಳೆವಿಮೆಗೆ ನೋಂದಣಿ ಮಾಡಿಕೊಳ್ಳುತ್ತಾರೆ. ವಿಮಾ ಕಂತನ್ನು ಸಹ ಪಾವತಿ ಮಾಡುತ್ತಾರೆ. ಆದರೆ ಬೆಳೆ ನಷ್ಟವಾದಾಗ ಅದಕ್ಕೆ ತಕ್ಕ ವಿಮೆಯನ್ನು ಬಹಳಷ್ಟು ರೈತರು ಪಡೆಯುವುದಿಲ್ಲ. ಕೃಷಿ ಇಲಾಖೆ ಸಿಬ್ಬಂದಿ, ತಹಶೀಲ್ದಾರ್‌ರು ಈ ಬಗ್ಗೆ ರೈತರಿಗೆ ಅಗತ್ಯ ಮಾಹಿತಿ ನೀಡಿ, ವಿಮೆ ಮೊತ್ತ ಪಡೆಯಲು ಸಹಾಯ ಮಾಡಬೇಕು ಎಂದರು.
ಬೆಳೆವಿಮೆ ಕುರಿತಾಗಿ ಬೆಳೆ ಸಮೀಕ್ಷೆಗೆ ನಿಯೋಜಿಸಿದ ಮೂಲ ಕಾರ್ಯಕರ್ತರೇ ಕಡ್ಡಾಯವಾಗಿ ಜಮೀನಿಗೆ ಭೇಟಿ ನೀಡಿ ಅಗತ್ಯ ಮಾಹಿತಿಯನ್ನು ತಂತ್ರಾಂಶದಲ್ಲಿ ದಾಖಲಿಸಬೇಕು. ಈ ವೇಳೆ ವಿಮಾ ಕಂಪನಿಯ ಪ್ರತಿನಿಧಿ ಗಳೂ ಹಾಜರಿರಬೇಕು. ಗ್ರಾಮದ ರೈತ ಮುಖಂಡರು ಸಮೀಕ್ಷೆಯ ಮೂಲ ಕಾರ್ಯಕರ್ತರೊಂದಿಗೆ ರೈತರ ಜಮೀನಿಗೆ ಭೇಟಿ ನೀಡಿ ಬೆಳೆ ಸಮೀಕ್ಷೆ, ಬೆಳೆವಿಮೆ ಪಡೆಯುವ ವಿಧಾನದ ಕುರಿತು ರೈತರಿಗೆ ಅರಿವು ಮೂಡಿಸಬೇಕು. ಬೆಳೆ ಸಮೀಕ್ಷೆಗೆ ಹೋದಾಗ ಕನಿಷ್ಟ ಸೌಲಭ್ಯಗಳನ್ನು ಬಳಸಿಕೊಂಡು ಸಾಧಾರಣ ಬೆಳೆ ಬೆಳೆಯುವ ರೈತರನ್ನು ಗುರುತಿಸಬೇಕು. ಅರ್ಹ ರೈತರಿಗೆಬೆಳೆವಿಮೆ ಲಾಭ ದೊರೆಯುವಂತಾಗಬೇಕು ಎಂದರು.
ಜಿಲ್ಲೆಯಲ್ಲಿ ಬೆಳೆ ವಿಮೆಗಾಗಿ ಫ್ಯೂಚರ್ ಜನರಲ್ ವಿಮಾ ಸಂಸ್ಥೆ ಆಯ್ಕೆಯಾಗಿದ್ದು, ಬೆಳೆ ಸಮೀಕ್ಷೆ ವೇಳೆ ಮೂಲ ಕಾರ್ಯಕರ್ತರು, ಕೃಷಿ ಇಲಾಖೆ, ಕಂದಾಯ ಇಲಾಖೆ, ಗ್ರಾಮ, ಹೋಬಳಿ ಮಟ್ಟದ ಅಧಿಕಾರಿಗಳ ಜಂಟಿ ಸಮೀಕ್ಷೆಯಲ್ಲಿ ವಿಮಾ ಸಂಸ್ಥೆ ಪ್ರತಿನಿಧಿಗಳು ಭಾಗವಹಿಸಬೇಕು. ವಿಮೆ ಕುರಿತು ರೈತರಿಗೆ ಸರಿಯಾದ ಮಾಹಿತಿ ನೀಡಬೇಕು ಎಂದರು.
ಜಂಟಿ ಕೃಷಿ ನಿರ್ದೇಶಕ ಶಿವಕುಮಾರ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಕಳೆದ ವರ್ಷ 83 ಸಾವಿರ ಜನರು ಪ್ರಿಮಿಯಂ ಹಣ ತುಂಬಿದ್ದರು. ಈ ವರ್ಷ ಜೂ. 25ರವರೆಗೆ 3,103 ರೈತರು ಪ್ರಿಮಿಯಂ ಹಣ ತುಂಬಿದ್ದಾರೆ. ಬೆಳೆವಿಮೆ ನೋಂದಾಯಿಸಲು ಇನ್ನೂ ಕಾಲಾವಕಾಶವಿದ್ದು, ರೈತರು ಬೆಳೆವಿಮೆ ನೋಂದಾಯಿಸಿಕೊಳ್ಳಬೇಕು. ಫ್ಯೂಚರ್ ಜನರಲ್ ವಿಮಾಸಂಸ್ಥೆಯು ಕೊಪ್ಪಳ ಹೊಸಪೇಟೆ ರಸ್ತೆಯ ನಸ್ವಾಲೆ ಬಿಲ್ಡಿಂಗ್‌ನ ಮೊದಲನೇ ಮಹಡಿಯಲ್ಲಿ (ಮೊ.9591238940) ಕಾರ್ಯನಿರ್ವಹಿಸುತ್ತಿದೆ. ರೈತರು ಈ ವಿಳಾಸದಲ್ಲಿ ಪ್ರತಿನಿಧಿ ಗಳನ್ನು ಭೇಟಿ ಮಾಡಬಹುದು ಎಂದರು. ಕಾರ್ಯಕರ್ತರಿಗೆ ಮೊಬೈಲ್: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗೆ ಸಂಬಂ ಧಿಸಿದಂತೆ ಬೆಳೆ ಕಟಾವು ಸಮೀಕ್ಷೆ ಕೈಗೊಳ್ಳುವ ಮೂಲ ಕಾರ್ಯಕರ್ತರಿಗೆ ಮೊಬೈಲ್ ವಿತರಿಸಲಾಯಿತು.
ಜಿಲ್ಲಾ ಸಾಂಖ್ಯೀಕ ಅಧಿಕಾರಿ ಕೃಷ್ಣಮೂರ್ತಿ ದೇಸಾಯಿ, ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಕೃಷಿ ಇಲಾಖೆ ಉಪನಿರ್ದೇಶಕ ಸಿದ್ದೇಶ್ವರ ಇತರರು ಇದ್ದರು.