ಹಾಸನ: ಜಿಲ್ಲೆಯಲ್ಲಿ ರೈತರಿಗೆ ಬೆಳೆ ವಿಮೆ ಸರಿಯಾಗಿ ತಲುಪುವಂತೆ ಕೃಷಿ ಹಾಗೂ ತೋಟಗಾರಿಕಾ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಬಿ.ಎಸ್.ಶ್ವೇತಾ ಸೂಚಿಸಿದರು.
ಜಿಪಂ ಹೊಯ್ಸಳ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಳೆ ವಿಮೆ ಹಾಗೂ ಸರ್ಕಾರದ ಇತರೆ ಯೋಜನೆಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಿ ರೈತರಿಗೆ ಅರಿವು ಮೂಡಿಸಬೇಕು. ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಬೇಕು. ಮಳೆ ಹಾನಿಯಿಂದಾಗಿರುವ ನಷ್ಟಕ್ಕೆ ಸಕಾಲದಲ್ಲಿ ಪರಿಹಾರ ಒದಗಿಸಬೇಕು ಎಂದರು.
ಭಾರೀ ನಷ್ಟ: ಆಲೂಗಡ್ಡೆ ಬೆಳೆಗಾರರು ಈ ಬಾರಿ ಭಾರೀ ನಷ್ಟ ಅನುಭವಿಸಿದ್ದಾರೆ. ಅವರಿಗೆ ಪರಿಹಾರ ದೊರೆಯುವಂತೆ ನೋಡಿಕೊಳ್ಳಬೇಕು. ಬೆಳೆ ಸಮೀಕ್ಷೆ ಅತ್ಯಂತ ನಿಖರವಾಗಿ ನಡೆಯಬೇಕು ಯಾವುದೇ ರೈತರು ಇದರಿಂದ ಕೈಬಿಟ್ಟು ಹೋಗಬಾರದು ಎಂದು ಅಧ್ಯಕ್ಷರು ಸೂಚನೆ ನೀಡಿದರು. ಹುದ್ದೆಗಳ ಭರ್ತಿಗೆ ಆಗ್ರಹ: ಜಿಲ್ಲೆಯಲ್ಲಿ ಖಾಲಿ ಇರುವ ವೈದ್ಯರು ಹಾಗೂ ತಂತ್ರಜ್ಞರು, ಸ್ಟಾಫ್ ನರ್ಸ್‌ಗಳ ಹುದ್ದೆಯನ್ನು ಶೀಘ್ರವಾಗಿ ಭರ್ತಿ ಮಾಡಿ ಕೊರೊನಾ ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ಹಾಗೂ ಊಟೋಪಚಾರ ನೀಡಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ದೊರೆಯುತ್ತಿರುವ ಚಿಕಿತ್ಸೆ ಮತ್ತು ಪಡೆಯುತ್ತಿರುವ ಬಿಲ್‌ಗಳ ಬಗ್ಗೆಯೂ ನಿಗಾ ವಹಿಸಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು, ಆಯುಷ್ ಇಲಾಖೆ ವತಿಯಿಂದ ರೋಗ ನಿರೋಧಕ ಔಷಧಿ, ಕಷಾಯಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ಪೂರೈಸಬೇಕು ಎಂದರು.
ಅಧಿಕಾರಿಗಳಿಗೆ ಸೂಚನೆ: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ಜಿಲ್ಲೆಯಲ್ಲಿ ಸುಮಾರು 114 ಕಿ.ಮೀ ರಸ್ತೆ ಕಾಮಗಾರಿಯು 105 ಕೋಟಿ ರೂ. ವೆಚ್ಚದಲ್ಲಿ ಮಂಜೂರಾಗಿದ್ದು, ಆದಷ್ಟು ಬೇಗ ಕಾಮಗಾರಿಯನ್ನು ಪ್ರಾರಂಭಿಸಬೇಕು ಎಂದು ಅಧ್ಯಕ್ಷರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸೌಲಭ್ಯ ಮುಂದುವರೆಸಿ: ಜಿಲ್ಲಾ ಪಂಚಾಯಿತಿ ಸಿಇಒ ಬಿ.ಎ. ಪರಮೇಶ್ ಮಾತನಾಡಿ, ಕೊರೊನಾ ಜೊತೆಗೆ ಇತರ ರೋಗಿಗಳಿಗೂ ಚಿಕಿತ್ಸೆ ನೀಡಲು ಎಲ್ಲ ಆಸ್ಪತ್ರೆಗಳಲ್ಲಿ ತಪಾಸಣೆ ಮತ್ತು ಇತರ ಸೌಲಭ್ಯಗಳನ್ನು ಮುಂದುವರೆಸಬೇಕು. ಪ್ರತಿ ತಾಲೂಕಿಗೆ ಒಂದು ಸಂಚಾರಿ ಕೋವಿಡ್ ತಪಾಸಣಾ ವಾಹನವನ್ನು ನಿಯೋಜಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉಪಕಾರ್ಯದರ್ಶಿ ಎಸ್.ಸಿ ಮಹೇಶ್, ಆಡಳಿತ ಉಪ ಕಾರ್ಯದರ್ಶಿ ಚಂದ್ರಶೇಖರ್, ಮುಖ್ಯ ಯೋಜನಾಧಿಕಾರಿ ನಾಗರಾಜು ಇತರರು ಇದ್ದರು