ಆಲೂರು: ತಾಲೂಕಿನ ಸಿಂಗೋಡ್ನಹಳ್ಳಿ ಗ್ರಾಮದಲ್ಲಿ ಬಿಡುಬಿಟ್ಟಿರುವ ಕಾಡಾನೆಗಳ ಹಿಂಡು ರೈತರು ಬೆಳೆದ ಲಕ್ಷಾಂತರ ರೂ. ಬೆಲೆಬಾಳುವ ಹಲವು ಬೆಳೆಗಳನ್ನು ನಾಶ ಮಾಡಿವೆ. ಅಷ್ಟೇ ಅಲ್ಲದೇ ಸುತ್ತಮುತ್ತಲ ಗ್ರಾಮಸ್ಥರಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದು ನಷ್ಟ ಪರಿಹಾರವನ್ನು ನೀಡವಂತೆ ಒತ್ತಾಯಿಸಿದರು.
ಪಾಳ್ಯ ಹೋಬಳಿ ಸಿಂಗೋಡನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ತಡರಾತ್ರಿ ನಾಲ್ಕೈದು ಕಾಡಾನೆಗಳ ಗುಂಪು ಲಗ್ಗೆ ಇಟ್ಟಿದ್ದು, ಗ್ರಾಮದ ಆನಂದ್ ಎಂಬುವವರು ಬೆಳೆದ ಭತ್ತ, ಜೋಳ, ಸಂಪೂರ್ಣವಾಗಿ ತುಳಿದು ಹಾಕಿದ್ದು, ಕಾಫಿ ಗಿಡಗಳನ್ನು ಕಿತ್ತು ಹಾಕಿ ಅಪಾರ ಪ್ರಮಾಣದಲ್ಲಿ ನಷ್ಟ ಮಾಡಿದ್ದು, ರೈತರನ್ನು ಚಿಂತೆಗೀಡು ಮಾಡಿವೆ.
ಇದನ್ನೂ ಓದಿ:- ಆಸ್ಪತ್ರೆಗೆ ಶಾಸಕರ ದಿಢೀರ್ ಭೇಟಿ; ಸಿಬ್ಬಂದಿ ಗೈರು ನೋಡಿ ಗರಂ
ಕಾಡಾನೆಗಳಿಂದ ನಷ್ಟ ಹೊಂದಿದ ರೈತ ಆನಂದ್ ಮಾತನಾಡಿ, ವರ್ಷವೆಲ್ಲಾ ಕಷ್ಟ ಪಟ್ಟು ಬೆಳೆದಿದ್ದ ಬೆಳೆಗಳನ್ನು ಕಾಡಾನೆ ಸಂಪೂರ್ಣವಾಗಿ ನಷ್ಟ ಮಾಡಿವೆ. ನಾವು ಏನು ಮಾಡಬೇಕೆಂದು ತೋಚುತ್ತಿಲ್ಲ ಸರ್ಕಾರದ ಪ್ರತಿನಿಧಿಗಳು ಹಾಗೂ ಜನಪ್ರತಿ ನಿಧಿಗಳು ಇತ್ತ ಗಮನ ನೀಡಿ ನಮ್ಮ ನೆರವಿಗೆ ದಾವಿಸಬೇಕು ಎಂದು ಒತ್ತಾಯಿಸಿದರು.
ಕರವೇ ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ ಮಾತನಾಡಿ, ಈ ಭಾಗದಲ್ಲಿ ಕಾಡಾನೆ ಉಪಟಳ ಮಿತಿಮೀರಿದ್ದು ರೈತರು ಬೆಳೆದ ಬತ್ತದ ಗದ್ದೆಗಳನ್ನು ತುಳಿದು ಕಾಫಿ ಗಿಡಗಳನ್ನು ಕಿತ್ತು ಹಾಕಿವೆ ಇದರಿಂದ ರೈತರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ.
ಪ್ರಧಾನಿ ಮೋದಿಯವರು ರೈತ ಕುಟುಂಬಕ್ಕೆ ವರ್ಷಕ್ಕೆ 6 ಸಾವಿರ ಹಣ ಹಾಕುತ್ತಿದ್ದಾರೆ. ಇದೊಂದು ಒಳ್ಳೆಯ ಕಾರ್ಯಕ್ರಮ ಅದೇ ರೀತಿ ರಾಜ್ಯ ಸರ್ಕಾರವೂ ಕಾಡಾನೆಗಳಿಂದ ಬೆಳೆ ಕಳೆದುಕೊಂಡ ರೈತರಿಗೆ ತಕ್ಷಣ ಪರಿಹಾರ ಸೀಗುವ ರೀತಿ ಮೀಸಲಿಟ್ಟು ಸ್ಥಳದಲ್ಲಿಯೇ ಪರಿಹಾರ ನೀಡಬೇಕು ಆಗ ಮಾತ್ರ ರೈತರಿಗೆ ನ್ಯಾಯ ಸಿಗುತ್ತದೆ ಎಂದರು.