ಅಡಹಳ್ಳಿ: ಅಥಣಿ ತಾಲೂಕಿನಲ್ಲಿ ಅಕ್ಟೋಬರ್‌ವರೆಗೆ ಸುರಿದ ಅಕಾಲಿಕ ಮಳೆಗೆ ಮಕ್ಕೆಜೋಳ, ತೊಗರಿ, ಅಲಸಂದಿ, ಹೆಸರು ಉದ್ದು ಬೆಳೆಗಳು ಸಿಲುಕಿ ಸಂಪೂರ್ಣ ನಾಶವಾಗಿದ್ದು, ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸೆಪ್ಟಂಬರ್ ಹಾಗೂ ಅಕ್ಟೋಬರ್‌ನಲ್ಲಿ ತೆಲಸಂಗ, ಅಥಣಿ ಗ್ರಾಮೀಣ ಹಾಗೂ ಅನಂತಪೂರ ಹೋಬಳಿಯಲ್ಲಿ ಎಡೆಬಿಡದೆ ಮಳೆ ಸುರಿದಿತ್ತು. ಪರಿಣಾಮವಾಗಿ ಕೊಯ್ಲಿಗೆ ಬಂದ ಅಲಸಂದಿ, ಮೆಕ್ಕೆಜೋಳ ನೀರಿನಲ್ಲಿ ನೆನೆದು ಹಾಳಾಗಿವೆ. ಅಥಣಿ ತಾಲೂಕಿನಲ್ಲಿ 11,235 ಹೆಕ್ಟೇರ್ ಮೆಕ್ಕೆಜೋಳ, 456 ಹೆಕ್ಟೇರ್ ಹೆಸರು, 7246 ಹೆಕ್ಟೇರ್ ಉದ್ದು ಹಾಗೂ 10256 ಹೆಕ್ಟೇರ್ ತೊಗರಿ ಬೆಳೆ ಬಿತ್ತಲಾಗಿತ್ತು. ಅದರಲ್ಲಿ ಈಗ ಮೆಕ್ಕೆಜೋಳವೆಲ್ಲ ನೀರಿನಲ್ಲಿ ನಿಂತು ಕೊಳೆತು ನಾರುತ್ತಿದೆ. ಕಟಾವಿಗೆ ಬಂದ ತೆನೆ ನೀರಿನಲ್ಲಿ ಬಿದ್ದು ಪುನಃ ನಾಟಿ ಸಸಿಯಾಗಿವೆ. ತೊಗರಿ ಬೆಳೆ ವಿಪರೀತ ತಪ್ಪಲು ಬೆಳೆದು ಕಾಯಿ ಹಾಗೂ ಕಾಳು ಕಟ್ಟುವ ಸ್ಥಿತಿಯಲ್ಲಿ ಇಲ್ಲ.
ಸಾಲ ಮಾಡಿ ಉತ್ತಿ-ಬಿತ್ತಿ ಬೆಳೆದು, ಇನ್ನೇನು ಫಸಲನ್ನು ತಗೆಯಬೇಕು ಎನ್ನುವಷ್ಟರಲ್ಲಿ ಮಳೆ ಅವಾಂತರ ಸೃಷ್ಟಿಸಿದೆ. ನವಂಬರ್ ಬಂದರೂ ಇನ್ನೂ ಹೊಲದಲ್ಲಿ ನೀರು ಆರುತ್ತಿಲ್ಲ. ಹೀಗೇ ಇದ್ದರೆ ಎರಡನೆಯ ಬೆಳೆಯನ್ನು ಹೇಗೆ ಮತ್ತು ಯಾವಾಗ ಮಾಡುವದು ಎಂಬ ಚಿಂತೆಯಲ್ಲಿ ರೈತರಿದ್ದಾರೆ. ಹಿಂಗಾರು ಬಿತ್ತನೆಗಾಗಿ ಬೀಜ, ರಸಗೊಬ್ಬರ ಖರೀದಿಸಲು ಹಣವನ್ನು ಹೇಗೆ ಮತ್ತು ಎಲ್ಲಿ ಹೊಂದಿಸಬೇಕು ಎಂಬ ಚಿಂತೆಯೂ ಕಾಡುತ್ತಿವೆ. ಸರ್ಕಾರ ಕೂಡಲೇ ಪರಿಹಾರ ನೀಡಿ ಕೈ ಹಿಡಿಯಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಮೊದಲಿನಂತೆ ಎಲ್ಲಾ ರೈತರಿಗೆ ಪರಿಹಾರ ಬರುವುದಿಲ್ಲ, ನಾಶವಾದ ಬೆಳೆಗಳಿಗೆ ಮಾತ್ರ ಅನ್ವಯವಾಗುತ್ತದೆ. ಈಗಾಗಲೇ ಅಥಣಿ ತಾಲೂಕಿನಲ್ಲಿ ಮಳೆಯಿಂದ ನಾಶವಾದ ಎಲ್ಲ ಬೆಳೆಗಳ ಮಾಹಿತಿ ಸಂಗ್ರಹಿಸಲು ಗ್ರಾಮಲೆಕ್ಕಾ ಧಿಕಾರಿ ಹಾಗೂ ಕೃಷಿ ಇಲಾಖೆಯವರಿಗೆ ಸೂಚಿಸಲಾಗಿದೆ. ಸರ್ಕಾರಕ್ಕೆ ವರದಿ ಸಲ್ಲಿಸಿ ಪರಿಹಾರ ದೊರಕಿಸಿಕೊಡಲಾಗುವುದು. –
ಸುರೇಶ ಮುಂಜೆ, ತಹಶೀಲ್ದಾರ್, ಅಥಣಿ.
ಪಕ್ಕದ ಬಾಗಲಕೋಟ ಜಿಲ್ಲೆಯ ಗ್ರಾಮಗಳ ರೈತರಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. ಆದರೆ ನಮ್ಮ ತಾಲೂಕಿನಲ್ಲಿ ಪರಿಹಾರ ಇನ್ನೂ ಬಂದಿಲ್ಲ, ಈಗಲಾದರೂ ಸರ್ಕಾರ ಇಲ್ಲಿಯ ರೈತರ ನಾಶವಾಗಿರುವ ಬೆಳೆಗೆ ಪರಿಹಾರ ನೀಡಿ ಆಸರೆಯಾಗಬೇಕು. –
ಅರುಣ ಕೋಹಳ್ಳಿ ಅಡಹಳ್ಳಿ ಗ್ರಾಮದ ರೈತ.