ಪಾಂಡವಪುರ: ತಾಲೂಕಿನ ಅರಳಕುಪ್ಪೆ ಗ್ರಾಮದ ಹೊರವಲಯದಲ್ಲಿ ರೈತ ಎ.ಜೆ.ದಯಾಶಂಕರ್ ಹಾಗೂ ಎ. ಜೆ.ಚಂದ್ರಶೇಖರ್ ಬೆಳೆದಿದ್ದ ಗುಂಡು ಬದನೆಕಾಯಿ ಬೆಳೆಯನ್ನು ದುಷ್ಕರ್ಮಿಗಳು ನಾಶಪಡಿಸಿರುವ ಘಟನೆ ನಡೆದಿದೆ.
ಗ್ರಾಮದ ಎ.ಜೆ.ದಯಾಶಂಕರ್, ತಮ್ಮ ಎ.ಜೆ. ಚಂದ್ರಶೇಖರ್ ಅವರು ಹೊರವಲಯದ ಹೊಸಕೊಪ್ಪಲು ಸರ್ವೆ ನಂ.22ರಲ್ಲಿರುವ ಸುಮಾರು 1.5 ಎಕರೆ ಭೂಮಿಯಲ್ಲಿ ಗುಂಡು ಬದನೆಕಾಯಿ ಬೆಳೆ ಬೆಳೆದಿದ್ದರು. ಮಳೆಯ ನಡುವೆ ಗುಂಡು ಬದನೆಕಾಯಿ ಬೆಳೆ ತುಂಬಾ ಚೆನ್ನಾಗಿ ಬೆಳೆದು ಕಟಾವು ಹಂತಕ್ಕೆ ಬಂದು ತಲುಪಿತ್ತು.
ಬೆಳೆ ಕಟಾವು ಮಾಡಬೇಕು ಎನ್ನುವ ವೇಳೆಗೆ ಕಿಡಿಗೇಡಿ ದುಷ್ಕರ್ಮಿಗಳು ಒಂದೂವರೆ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಗುಂಡು ಬದನೆಕಾಯಿ ಗಿಡವನ್ನು ಸಂಪೂರ್ಣವಾಗಿ ಕಿತ್ತುಹಾಕಿ ನಾಶಪಡಿಸಿದ್ದಾರೆ. ರೈತರಾದ ಎ.ಜೆ.ದಯಾಶಂಕರ್, ತಮ್ಮ ಎ.ಜೆ.ಚಂದ್ರಶೇಖರ್ ಸಂಕಷ್ಟದ ನಡುವೆ ಸಾಲ ಮಾಡಿ ಬೆಳೆ ಬೆಳೆದಿದ್ದರು. ಮಾರುಕಟ್ಟೆಯಲ್ಲಿ ಗುಂಡುಬದನೆಗೆ ಸಾಕಷ್ಟು ಬೇಡಿಕೆ ಇದ್ದು, ಅಧಿಕ ಲಾಭಕ್ಕೆ ಮಾರಾಟವಾಗುತ್ತಿತ್ತು.
ಇದನ್ನೂ ಓದಿ;- ಶಿರಸಿ: ನ. 28 ಕ್ಕೆ ಅಪ್ಪು ನುಡಿ ನಮನ
ಇಂತಹ ಸಂದರ್ಭದಲ್ಲಿ ಬೆಳೆ ನಾಶಪಡಿಸಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ನಾಶದಿಂದಾಗಿ ಸುಮಾರು 5 ಲಕ್ಷಕ್ಕೂ ಅಧಿಕ ಹಣ ನಷ್ಟವಾಗಿದೆ ಎಂದು ರೈತರಾದ ಎ.ಜೆ.ದಯಾಶಂಕರ್, ತಮ್ಮ ಎ.ಜೆ.ಚಂದ್ರಶೇಖರ್ ಅವರು ನೋವುತೋಡಿಕೊಂಡರು. ವಿಷಯ ತಿಳಿದು ಗ್ರಾಮಸ್ಥರು, ಮುಖಂಡರು ಸ್ಥಳ ಪರಿಶೀಲಿಸಿ ಕಿಡಿಗೇಡಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ನಮಗೂ ಮತ್ತು ಪಕ್ಕದ ಜಮೀನಿನವರಿಗೂ ಜಮೀನಿನ ರಸ್ತೆ ವಿಚಾರ ಕಳೆದ 2-3 ವರ್ಷದ ಹಿಂದೆ ಒಮ್ಮೆ ಗಲಾಟೆಯಾಗಿತ್ತು ಅಷ್ಟೆ. ಆದರೆ, ಈ ಕೃತ್ಯ ಯಾರು ಮಾಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲಿಸಿ, ನಮಗೆ ಪರಿಹಾರ ದೊರಕಿಸಿಕೊಡಬೇಕು. ಜತೆಗೆ ಪೊಲೀಸ್ ಇಲಾಖೆಯವರು ದುಷ್ಕರ್ಮಿಗಳನ್ನು ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದ್ದಾರೆ. ರೈತರು ನೀಡಿದ ದೂರಿನ ಮೇರೆಗೆ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ