Advertisement

ಮಳೆ ಬಾರದಿದ್ದಲ್ಲಿ ಬೆಳೆ ಹಾನಿ ಸಮೀಕ್ಷೆಗೆ ಸೂಚನೆ

12:03 PM Aug 19, 2017 | Team Udayavani |

ಕಲಬುರಗಿ: ಮುಂಗಾರು ಮಳೆ ಅಭಾವದಿಂದ ಅಲ್ಪಾವಧಿ ಬೆಳೆಗಳು ಹಾನಿಯಾಗಿದ್ದಲ್ಲದೇ ವಾಣಿಜ್ಯ ಬೆಳೆ ತೊಗರಿ ಬೆಳವಣಿಗೆಗೂ ಕುತ್ತು ಎದುರಾಗಿರುವುದರಿಂದ ಇನ್ನೂ ಮೂರ್‍ನಾಲ್ಕು ದಿನಗಳ ಕಾಲ ಮಳೆ ಬಾರದೇ ಇದ್ದಲ್ಲಿ ಬೆಳೆ ಹಾನಿ ಸಮೀಕ್ಷಾ ವರದಿಗೆ ಜಿಲ್ಲಾಡಳಿತ ಮುಂದಾಗಬೇಕೆಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಸೂಚನೆ ನೀಡಿದರು. ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂದಾಯ, ಕೃಷಿ, ಗಣಿ ಮತ್ತು ಭೂವಿಜ್ಞಾನ ಹಾಗೂ ಆರೋಗ್ಯ ಇಲಾಖಾಧಿಕಾರಿಗಳ
ಸಭೆ ನಡೆಸಿದ ಸಚಿವರು, ಮಳೆ ಅಭಾವದಿಂದ ಜಿಲ್ಲೆಯಲ್ಲಿ ಮತ್ತೆ ಬರಗಾಲ ಎದುರಾಗುವಂತಾಗಿದೆ. ಈ ಹಿನ್ನೆಲೆಯಲ್ಲಿ ಹಾನಿ ಕುರಿತಾಗಿ ಸಮೀಕ್ಷೆ ಮಾಡುವುದು ಅಗತ್ಯವಾಗಿದೆ ಎಂದರು. ಜಂಟಿ ಕೃಷಿ ನಿರ್ದೇಶಕ ಜಿಲಾನಿ ಮೋಕಾಶಿ ಅವರು, ಮಳೆ ಅಭಾವದಿಂದ ಜಿಲ್ಲೆಯಲ್ಲಿ 73 ಸಾವಿರ ಹೆಕ್ಟೇರ್‌ ಬೆಳೆ ಹಾನಿಯಾಗಿರುವ ಕುರಿತಾಗಿ ಪೂರ್ವ ಪ್ರಾಥಮಿಕ ವರದಿ ರೂಪಿಸಿ ಸರ್ಕಾರಕ್ಕೆ ಮಾಹಿತಿ ಕಳುಹಿಸಿದ್ದಾರೆ. ಇನ್ನೂ ಎರಡೂಮೂರು ದಿನ ಮಳೆ ಬಾರದಿದ್ದಲ್ಲಿ ಸಮರ್ಪಕವಾಗಿ ಬೆಳೆ ಹಾನಿ ಕುರಿತಾಗಿ ಸಮೀಕ್ಷಾ ವರದಿ ರೂಪಿಸಲಾಗುವುದು ಎಂದು ಸಭೆ ಗಮನಕ್ಕೆ ತಂದರು. ಬೆಳೆವಿಮೆ: 2015-16ನೇ ಸಾಲಿನ ಬೆಳೆವಿಮೆಯನ್ನು ಇನ್ನೂ 14000 ರೈತರಿಗೆ ನೀಡದೇ ಇರುವುದನ್ನು ಹಾಗೂ ಅಫಜಲಪುರ ತಾಲೂಕಿನ ಅತನೂರ ಕಂದಾಯ ವ್ಯಾಪ್ತಿಯಲ್ಲಿ ಮೊತ್ತ ವಿತರಣೆಯಲ್ಲಿ ಲೋಪವಾಗಿರುವುದನ್ನು ಶೀಘ್ರ ಇತ್ಯರ್ಥಪಡಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ ಸಚಿವರು, ಇದು ನಿಜಕ್ಕೂ ಸವಾಲು ಎನ್ನುವಂತಾಗಿದೆ ಎಂದರು. ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ, ಈ ಕುರಿತು ಸ್ವತಃ ತಾವೇ ಇನ್ನೊಮ್ಮೆ ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಗಮನಕ್ಕೆ ತಂದು ಸಮಸ್ಯೆ ಇತ್ಯರ್ಥಕ್ಕೆ ಮುತುವರ್ಜಿ ವಹಿಸಲಾಗುವುದು ಎಂದು ಹೇಳಿದರು. ಸೇಡಂ ತಾಲೂಕಿನಲ್ಲಿ 100 ಹಾಸಿಗೆಯುಳ್ಳ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿರುವ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆದ ಸಚಿವರು, ತುರ್ತಾಗಿ ಕೈಗೊಳ್ಳಬೇಕಾದ ಕ್ರಮಗಳನ್ನು ಹಿಂದೆ ಮುಂದೆ ನೋಡದೇ ಕೈಗೊಳ್ಳಿ. ಯಾವ ಹಂತದಲ್ಲಿ ತೊಂದರೆಯಿದ್ದರೂ ಗಮನಕ್ಕೆ ತನ್ನಿ ಎಂದು ಸಚಿವರು ಆರೋಗ್ಯ ಇಲಾಖಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತ, ಹೆಚ್ಚುವರಿ ಜಿಲ್ಲಾಧಿಕಾರಿ
ಭೀಮಾಶಂಕರ ತೆಗ್ಗಳ್ಳಿ, ಸಹಾಯಕ ಆಯುಕ್ತರಾದ ರಾಚಪ್ಪ, ಪರಶುರಾಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next