ಬೆಳಗಾವಿ: ಬೆಳೆಹಾನಿಯ ಬಗ್ಗೆ ಸಮೀಕ್ಷೆ ನಡೆಸುವಾಗ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಬೇಕು. ಕೆಲವು ಕಡೆಗಳಲ್ಲಿ ಜಂಟಿ ಸಮೀಕ್ಷೆ ಬಳಿಕವೂ ಬೆಳೆಹಾನಿ ಬಗ್ಗೆ ವರದಿಯಾಗಿರುವುದರಿಂದ ಇವುಗಳನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸೂಚನೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿ ಹಾಗೂ ಕೈಗೊಂಡ ಪರಿಹಾರ ಕ್ರಮಗಳ ಕುರಿತು ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅತಿವೃಷ್ಟಿಯಿಂದ ಜಮೀನುಗಳಲ್ಲಿ ನೀರು ಹೆಚ್ಚು ದಿನಗಳ ಕಾಲ ನಿಂತ ಪರಿಣಾಮ ತೋಟಗಾರಿಕೆ ಹಾಗೂ ತರಕಾರಿ ಬೆಳೆಗಳು ಸಂಪೂರ್ಣ ನಾಶಗೊಂಡಿರುತ್ತದೆ. ಆದ್ದರಿಂದ ಸಮೀಕ್ಷೆ ನಡೆಸುವಾಗ ಈ ಅಂಶಗಳನ್ನು ಪರಿಗಣಿಸಬೇಕು ಎಂದು ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ:ಬೆಂಗಳೂರು ನಗರದಲ್ಲಿ ಟೋಯಿಂಗ್ ವ್ಯವಸ್ಥೆ ಮತ್ತೆ ಜಾರಿ ಮಾಡಲ್ಲ: ಆರಗ ಜ್ಞಾನೇಂದ್ರ
ಈ ಬಾರಿ ಮನೆಹಾನಿಯ ಸಮೀಕ್ಷೆಯನ್ನು ಅತ್ಯಂತ ತ್ವರಿತವಾಗಿ ಹಾಗೂ ಪಾರದರ್ಶಕವಾಗಿ ಕೈಗೊಂಡು ಪರಿಹಾರ ಕೂಡ ಜಮೆ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಇದಕ್ಕಾಗಿ ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.
ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರತೆಯ ಮಧ್ಯೆಯೂ ಅತ್ಯುತ್ತಮ ಕೆಲಸ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.