ಶಹಾಬಾದ: ಬೆಳೆ ಹಾನಿ ಪರಿಹಾರವಾಗಿ ಕಲ್ಯಾಣ ಕರ್ನಾಟಕಕ್ಕೆ ರಾಜ್ಯ ಸರ್ಕಾರ 50 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ರೈತ ಸಂಘದ ಮುಖಂಡರು ಆಗ್ರಹಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ನಂತರ ಮುಖಂಡರು ವಿವಿಧ ಬೇಡಿಕೆಗಳನ್ನು ಸುದ್ದಿಗಾರರಿಗೆ ತಿಳಿಸಿದರು.
ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿವೃಷ್ಟಿಯಿಂದ ಅಲ್ಪಾವಧಿ ಹಾಗೂ ವಾಣಿಜ್ಯಗಳು ಹಾಳಾಗಿವೆ. ಇದರಿಂದ ರೈತರ ಬದುಕು ಸಾಲದ ಸುಳಿಯಲ್ಲಿ ಸಿಲುಕಿ ನಲಗುವಂತೆ ಆಗಿದೆ. ಪ್ರತಿ ವರ್ಷ ಬೆಳೆಯುತ್ತಿದ್ದ ಇಳುವರಿಗಿಂತ ಈ ವರ್ಷ ಅರ್ಧದಷ್ಟು ಕಡಿಮೆಯಾಗಿದೆ. ಗೊಬ್ಬರ ದುಬಾರಿ, ಔಷಧ ದುಬಾರಿ, ಕಳೆ ಕೀಳುವ ಕೆಲಸಗಾರರ ಕೂಲಿ ದುಬಾರಿ ಆಗಿದ್ದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಅಲ್ಲದೇ ಬೆಳೆ ಪರಿಹಾರವೂ ಸರಿಯಾಗಿ ಬಂದಿಲ್ಲ. ಕೆಲವರಿಗೆ ಮಾತ್ರ ಬಂದಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಚಳಿಗಾಲದ ಅಧಿವೇಶನದಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಬೇಕು. ತೊಗರಿ ಬೋರ್ಡ್ ಬಲಪಡಿಸಿ ಕಲಬುರಗಿ ತೊಗರಿ ದ್ವಿದಳ ಧಾನ್ಯಗಳ ಪಲ್ಸ್‌ಸ್ ಬೋರ್ಡ್‌ಗೆ ಹಣ ಬಿಡುಗಡೆ ಮಾಡಬೇಕು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಬೆಳೆ ಸಾಲದ ರೂಪದಲ್ಲಿ ಹಣ ಕಡಿತ ಮಾಡುವುದನ್ನು ನಿಲ್ಲಿಸಬೇಕು. ಪ್ರತಿ ಕ್ವಿಂಟಾಲ್ ತೊಗರಿಗೆ 8659 ರೂ.ದಂತೆ ಖರೀದಿ ಕೇಂದ್ರ ಪ್ರಾರಂಭಿಸಿಬೇಕು. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಬಡ ಕೃಷಿ ಕೂಲಿಕಾರರಿಗೆ 200 ದಿನಗಳ ಮಾನವ ದಿನಗಳನ್ನು ಸೃಜಿಸಬೇಕು ಎಂದು ಒತ್ತಾಯಿಸಿದರು.
ನಂತರ ತಹಶೀಲ್ದಾರ್ ಗುರುರಾಜ ಸಂಗಾವಿ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು. ಕೆಪಿಆರ್‌ಎಸ್ ಚಿತ್ತಾಪುರ ತಾಲೂಕಾಧ್ಯಕ್ಷ ಸಾಯಬಣ್ಣ ಗುಡುಬಾ, ಶಹಾಬಾದ ತಾಲೂಕು ಸಂಚಾಲಕ ರಾಯಪ್ಪ ಹುರಮುಂಜಿ, ಉಪಾಧ್ಯಕ್ಷ ವೀರಯ್ಯಸ್ವಾಮಿ ತರನಳ್ಳಿ, ವಿಶ್ವರಾಜ ಫಿರೋಜಬಾದ, ಮಲ್ಲಿಕಾರ್ಜುನ ಬುರ್ಲಿ, ಶಿವಕುಮಾರ, ಈರಪ್ಪ ಹುರಮುಂಜಿ ಇತರರು ಇದ್ದರು.