Advertisement

ಬೆಳೆ ಹಾನಿಗೆ ಕೇಂದ್ರದಿಂದ ನಯಾಪೈಸೆ ಬಂದಿಲ್ಲ: ಸಿದ್ದರಾಮಯ್ಯ

08:32 PM Dec 13, 2021 | Team Udayavani |

ಸುವರ್ಣವಿಧಾನಸೌಧ: ಅತಿವೃಷ್ಠಿಯಿಂದ ರಾಜ್ಯದಲ್ಲಿ ಬಿತ್ತನೆಯಾಗಿರುವ ಒಟ್ಟು ಪ್ರದೇಶದಲ್ಲಿ ಶೇ.75ರಷ್ಟು ಪ್ರದೇಶದ ಬೆಳೆಹಾನಿಯಾಗಿದ್ದರೂ ಕೇಂದ್ರ ಸರ್ಕಾರದಿಂದ ನಯಾಪೈಸೆ ಅನುದಾನ ಬಂದಿಲ್ಲ. ರಾಜ್ಯ ಸರ್ಕಾರವೂ ಪರಿಹಾರ ವಿಳಂಬ ಮಾಡುತ್ತಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

Advertisement

ಅತಿವೃಷ್ಠಿ, ಅನಾವೃಷ್ಠಿ ಹಾಗೂ ಪ್ರವಾಹದಿಂದ ಆಗಿರುವ ಬೆಳೆಹಾನಿ, ನಷ್ಟ ಮತ್ತು ರೈತರ ಸಂಕಷ್ಟದ ಕುರಿತು ವಿಧಾನಸಭೆಯಲ್ಲಿ ನಿಯಮ 60ರ ಅಡಿಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಕಳೆದ 60 ವರ್ಷದಲ್ಲೇ ಈ ಬಾರಿ ಅತಿ ಹೆಚ್ಚು ಮಳೆಯಾಗಿದೆ. 31 ಜಿಲ್ಲೆಗಳಲ್ಲಿ 23 ಜಿಲ್ಲೆಗಳ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. 78,83,000 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಇದರಲ್ಲಿ ಶೇ.75ರಷ್ಟು ಪ್ರದೇಶದ ಬೆಳೆ ನಾಶವಾಗಿದೆ. ರಾಗಿ, ಭತ್ತ, ಶೇಂಗಾ, ಮೆಕ್ಕೇಜೋಳ, ಕಾಫಿ, ಅಡಿಕೆ, ಮೆಣಸು, ತೊಗರಿ, ಹತ್ತಿ, ಟೊಮ್ಯಾಟೊ, ರೇಷ್ಮೆ ಸಹಿತವಾಗಿ ರಾಜ್ಯದ ಎಲ್ಲ ಭಾಗದಲ್ಲೂ ವಿವಿಧ ಬೆಳೆ ನಾಶವಾಗಿದೆ. ಎಕರೆಗೆ 1ರಿಂದ 1.50 ಲಕ್ಷ ಖರ್ಚು ಮಾಡಿ ಬೆಳೆದಿರುವ ಹೂಗಳು ನಾಶವಾಗಿದೆ. ಅತಿವೃಷ್ಠಿಯಿಂದ ರೈತರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ ಎಂದರು.

ಇಷ್ಟೆಲ್ಲ ಬೆಳೆನಾಶವಾಗಿದ್ದರೂ, ರೈತರಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರದಿಂದ ಈವರೆಗೂ ನಯಾಪೈಸೆ ಬಂದಿಲ್ಲ. ಕೃಷಿ ಉತ್ಪನ್ನಗಳ ಬೆಲೆ ಹೆಚ್ಚಾಗಿದೆ. ಬೆಳೆ ಕಟಾವಿಗೆ ಬಳಸುವ ಯಂತ್ರದ ಬೆಲೆ, ತೈಲ ಉತ್ಪನ್ನದ ಬೆಲೆ ಹೆಚ್ಚಳವಾಗಿರುವುದರಿಂದ ರೈತರಿಗೆ ವೆಚ್ಚವೂ ಹೆಚ್ಚಾಗುತ್ತಿದೆ. ಹೀಗಾಗಿ ಸೂಕ್ತ ಪ್ರಮಾಣದಲ್ಲಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಷಯವನ್ನು ನಿಯಮ 69ರಡಿ ವರ್ಗಾಯಿಸಿ, ಚರ್ಚೆಗೆ ಅವಕಾಶ ಮಾಡಿಕೊಟ್ಟರು.

ಕೆರೆ ಭರ್ತಿಯಾದ ಚರ್ಚೆ
ರಾಜ್ಯದಲ್ಲಿ ಹೆಚ್ಚು ಮಳೆಯಾಗಿರುವುದರಿಂದ ಕೆರೆಗಳು ಭರ್ತಿಯಾಗಿವೆ. ಅದರಲ್ಲೂ ವಿಶೇಷವಾಗಿ ಕೋಲಾರ, ಚಿಕ್ಕಬಳ್ಳಾಪುರ ಮೊದಲಾದ ಭಾಗದಲ್ಲಿ ಕೆರೆಗಳು ಕೊಡಿ ಹರಿಯುತ್ತಿದೆ ಎಂದು ಸಚಿವ ಎಂಟಿಬಿ ನಾಗರಾಜ ಹೇಳುತ್ತಿದ್ದಂತೆ, ಇದಕ್ಕೆ ಕಾಂಗ್ರೆಸ್‌ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಯಾವುದೇ ದೊಡ್ಡ ಕೆರೆ ಕೊಡಿ ಹರಿದಿಲ್ಲ. ಬಹುತೇಕ ಕೆರೆಗಳು ಖಾಲಿಯಿದೆ. ಸಣ್ಣಪುಟ್ಟ ಕೆರೆ ಕುಂಟೆಗಳು ಮಾತ್ರ ತುಂಬಿದೆ ಎಂದರು.

ಸದಸ್ಯ ಶರತ್‌ ಬಚ್ಚೇಗೌಡ ಮಾತನಾಡಿ, ಹೊಸಕೋಟೆಯಲ್ಲಿ ಮಳೆಯಿಂದಲ್ಲ, ಕೆ.ಸಿ.ವ್ಯಾಲಿಯಿಂದ ನೀರು ಬರುತ್ತಿರುವುದರಿಂದ ಕೆರೆ ಭರ್ತಿಯಾಗಿದೆ ಎಂದರು. ಆಗ ಸಚಿವ ಎಂಟಿಬಿ ನಾಗರಾಜ್‌, ಕೆರೆ ಭರ್ತಿಯಾಗದೆ ಬಾಗಿನ ಬಿಟ್ಟಿರೇ ಎಂದು ಪ್ರಶ್ನಿಸಿದರು. ಆಗ ಮಧ್ಯ ಪ್ರವೇಶಿಸಿದ ಸಿದ್ದರಾಮಯ್ಯ, ಕೆ.ಸಿ.ವ್ಯಾಲಿ ಹಾಗೂ ಎಚ್‌.ಎನ್‌. ವ್ಯಾಲಿ ಮಾಡಿರುವುದರಿಂದ ಕೋಲಾರ, ಚಿಕ್ಕಬಳ್ಳಾಪುರ ಮೊದಲಾದ ಭಾಗದಲ್ಲಿ ಕೆರೆ ತುಂಬಿ, ಅಂತರ್ಜಲ ಮಟ್ಟವೂ ಹೆಚ್ಚಾಗಿದೆ. ಮಳೆಯಿಂದಲೇ ಕೆರೆ ತುಂಬಿದೆ ಎಂದು ಹೇಳಿಲ್ಲ ಎಂದು ಚರ್ಚೆಗೆ ತೆರೆ ಏಳೆದರು.

Advertisement

ಪಾಠ ಕೇಳಲು ರೆಡಿ ಇದ್ದೇವೆ: ಸಿದ್ದರಾಮಯ್ಯ ಅತಿವೃಷ್ಠಿ ವಿಷಯವಾಗಿ ಮಾತನಾಡಲು ಅರಂಭಿಸುತ್ತಿದ್ದಂತೆ ಕಂದಾಯ ಸಚಿವ ಆರ್‌. ಅಶೋಕ್‌ ಮಧ್ಯೆ ಪ್ರವೇಶಿಸಿ, ಬೆಳೆಹಾನಿ ಪರಿಹಾರ ನೀಡಲು ಸಿದ್ಧರಿದ್ದೇವೆ ಎಂದರು. ಆಗ ಸಿದ್ದರಾಮಯ್ಯ, ಎಲ್ಲ ರೀತಿಯಲ್ಲೂ ಸಿದ್ಧರಿದ್ದೀರೇ ಎಂದು ಕೇಳಿದಾಗ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ನಿಮ್ಮ ಮಾತು ಕೇಳಲು ಸಿದ್ಧರಿದ್ದಾರೆ ಎಂದು ಅವರು ಹೇಳಿದ್ದು ಎಂದಾಗ ಸಚಿವ ಅಶೋಕ್‌ ಕೂಡ ಹೌದು, ನಾವು ಸಿದ್ದರಾಮಯ್ಯ ಅವರ ಪಾಠ ಕೇಳಲು ರೆಡಿ ಇದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next