ಮುಂಡಗೋಡ: ಅಕಾಲಿಕ ಮಳೆಯಿಂದಾಗಿ ತಾಲೂಕಿನಲ್ಲಿ ಬೆಳೆ ಹಾನಿ ಅನುಭವಿಸಿದ್ದು ಎಲ್ಲ ರೈತರಿಗೂ ಬೆಳೆವಿಮೆ ಸಿಗುವಂತಾಗಬೇಕು ಬೆಳೆಹಾನಿ ಸಮೀಕ್ಷೆಯನ್ನು ನ್ಯಾಯಯುತವಾಗಿ ಮಾಡಬೇಕು ಎಂದು ರಾಜ್ಯ ರೈತ ಸಂಘ ಹಸಿರು ಸೇನೆ ಮತ್ತು ಬಾಚಣಕಿ ಗ್ರಾಪಂ ವ್ಯಾಪ್ತಿಯ ರೈತರು ತಹಶೀಲ್ದಾರ್ ಶ್ರೀಧರ ಮುಂದಲಮನಿಗೆ ತ್ತಾಯಿಸಿದರು.
ಕಳೆದ ವಾರ ಸುರಿದ ಧಾರಾಕಾರ ಮಳೆಗೆ ರೈತರ ಭತ್ತದ ಬೆಳೆ ಹಾನಿಯಾಗಿದ್ದು ನಂತರ ಬಿಸಿಲಿನ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಗದ್ದೆಯಲ್ಲಿದ್ದ ಭತ್ತ ಹಾಗೂ ಗೋವಿನಜೋಳದ ಬೆಳೆಯನ್ನು ರೈತರು ಗದ್ದೆಯಿಂದ ಹೊರಗಡೆ ತಂದು ಹಾಕಿ ಒಕ್ಕಲು ಮಾಡಿಕೊಂಡಿದ್ದಾರೆ. ಬಹುತೇಕ ರೈತರ ಭತ್ತ ಹಾಗೂ ಗೋವಿನಜೋಳ ಮೊಳಕೆಯೊಡೆದು ಹಾಳಾಗಿವೆ. ಆದರೆ ಇದೀಗ ಬೆಳೆವಿಮೆ ಕಂಪನಿ ಪ್ರತಿನಿಧಿಗಳು ಬೆಳೆಹಾನಿ ಪರಿಶೀಲಿಸುತ್ತೆವೆ ಎಂದು ಗದ್ದೆಗೆ ಬರುತ್ತಿದ್ದಾರೆ. ಆದರೆ ಗದ್ದೆಯಲ್ಲಿ ಸದ್ಯ ಯಾವುದೆ ಬೆಳೆಯಿಲ್ಲ. ಗದ್ದೆಯಲ್ಲಿ ಬೆಳೆಯಿಲ್ಲದಿದ್ದರೆ ವಿಮೆ ನೀಡಲು ಬರುವುದಿಲ್ಲ ಎಂದು ವಿಮಾ ಕಂಪನಿ ಪ್ರತಿನಿಧಿಗಳು ಹೇಳುತ್ತಿದ್ದಾರೆ.
ಬೆಳ ವಿಮೆಗೆ ಅರ್ಜಿ ಸಲ್ಲಿಸಿದ ಕೆಲವು ರೈತರ ಹೆಸರುಗಳಿಲ್ಲ. ಅಪಾರ ಪ್ರಮಾಣದ ಹಾನಿ ಅನುಭವಿಸಿರುವ ರೈತರಿಗೆ ಬೆಳೆವಿಮೆ ಸಿಗದಿದ್ದರೆ ಅನ್ಯಾಯವಾಗುತ್ತದೆ. ಆದ್ದರಿಂದ ಸೂಕ್ತ ಬೆಳೆವಿಮೆ ನೀಡುವ ಕ್ರಮವಾಗಬೇಕು ಎಂದು ತಮ್ಮ ಅಳಲನ್ನು ತೋಡಿಕೊಂಡರು.
ತಹಶೀಲ್ದಾರ್ ಶ್ರೀಧರ ಮುಂದಲಮನಿ ಮಾತನಾಡಿ, ಮಳೆಯಿಂದ ಯಾವ-ಯಾವ ರೈತರ ಬೆಳೆ ಹಾನಿಯಾದ ಬಗ್ಗೆ ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಯವರು ಜಂಟಿಯಾಗಿ ತಾಲೂಕಿನಾದ್ಯಂತ ಸಮೀಕ್ಷೆ ನಡೆಸಿದ ದಾಖಲೆಗಳು ನಮ್ಮ ಬಳಿ ಇವೆ. ವಿಮಾ ಕಂಪನಿಯವರು ಪರಿಶೀಲನೆಗೆ ಬಂದಾಗ ರೈತರು ಸಹಕಾರ ನೀಡಬೇಕು. ಬೆಳೆ ಹಾನಿಯಾಗದಿದ್ದರೂ ಕೆಲವು ರೈತರು ಬೆಳೆವಿಮೆಗೆ ಅರ್ಜಿ ಸಲ್ಲಿಸಿದ್ದಾರೆ. ಇದರಿಂದ ನಿಜವಾಗಿ ಬೆಳೆ ಹಾನಿ ಅನುಭವಿಸಿದ ರೈತರಿಗೆ ತೊಂದರೆಯಾಗುತ್ತದೆ.
ಬೆಳೆ ಹಾನಿಯಾದ ರೈತರಿಗೆ ಯಾವುದೆ ರೀತಿಯ ಅನ್ಯಾಯವಾಗದಂತೆ ಬೆಳೆವಿಮೆ ಕೊಡಿಸಲು ಪ್ರಯತ್ನಿಸುತ್ತೇವೆ. ತಾಲೂಕಿನಲ್ಲಿ ಅಂದಾಜು 250-300 ಎಕರೆಯಷ್ಟು ಬೆಳೆ ಹಾನಿಯಾಗಿದೆ. ಆದರೆ ಬೆಳೆ ವಿಮೆ ನೀಡುವುದಾಗಿ ಘೋಷಿಸಿದ ನಂತರ ಸುಮಾರು 3000-4000 ಹೆಕ್ಟೇರ್ ಪ್ರದೇಶದಷ್ಟು ಬೆಳೆ ಹಾನಿಯಾದ ಬಗ್ಗೆ ರೈತರು ವಿಮೆಗೆ ಅರ್ಜಿ ಸಲ್ಲಿಸಿದ್ದಾರೆ. ಇದರಿಂದ ನಿಜವಾಗಿ ಹಾನಿಯಾದ ರೈತರಿಗೆ ಅನ್ಯಾಯವಾದಂತಾಗುತ್ತದೆ. ಯಾವ ರೈತರಿಗೂ ಅನ್ಯಾಯವಾಗದಂತೆ ಬೆಳೆ ವಿಮೆ ನೀಡುವುದಾಗಿ ಭರವಸೆ ನೀಡಿದರು.
ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್. ಕುಲಕರ್ಣಿ, ರೈತ ಸಂಘದ ತಾಲೂಕು ಅಧ್ಯಕ್ಷ ಪೀರಪ್ಪ ಸಾಗರ, ನಿಂಗಪ್ಪ ಕುರುಬರ, ಹನುಮಂತಪ್ಪ ಯಲ್ಲಾಪುರ, ನಿಂಗಪ್ಪ ಗೋಣೇನವರ, ಮಲ್ಲಪ್ಪ ಶೆಲ್ವಡಿ, ಶೇಖಪ್ಪ ಹೊತಗಣ್ಣವರ, ಗಣೇಶ ಶೇಟ್, ಮಲ್ಲಪ್ಪ ಕುಸೂರ, ಅಬ್ದುಲ್ ರಜಾಕ್ ಮುಲ್ಲಾನವರ ಮತ್ತು ವಿಮಾ ಕಂಪನಿಯ ಪ್ರತಿನಿಧಿ ಪಿಶಪ್ಪ ಕೊರವರ ಇದ್ದರು.