Advertisement

ಬಾಳೆಯೊಂದಿಗೆ ಬದುಕೂ ನೀರುಪಾಲು

11:03 AM Sep 15, 2019 | Suhan S |

ಬೆಳಗಾವಿ: ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಹಿರಣ್ಯಕೇಶಿ ಹಾಗೂ ವೇದಗಂಗಾ ನದಿಗಳ ಪ್ರವಾಹ ಈ ಬಾರಿ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕೃಷಿ ಕ್ಷೇತ್ರದ ಬುಡವನ್ನೇ ಅಲ್ಲಾಡುವಂತೆ ಮಾಡಿದೆ. ಸತತ ಬರಗಾಲದಿಂದ ತತ್ತರಿಸಿದ್ದ ರೈತ ಸಮುದಾಯಕ್ಕೆ ಈ ಬಾರಿ ನೆರೆ ಹಾವಳಿ ದೊಡ್ಡ ಹೊಡೆತ ನೀಡಿದೆ.

Advertisement

ತೋಟಗಾರಿಕೆ ಇಲಾಖೆಯ ಪ್ರಾಥಮಿಕ ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ 7641.5 ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆಗಳು ಪ್ರವಾಹಕ್ಕೆ ಆಹುತಿಯಾಗಿವೆ. ಈಗಿನ ಲೆಕ್ಕಾಚಾರ ಹಾಗೂ ಮಾರುಕಟ್ಟೆ ದರದ ಅನ್ವಯ ಸುಮಾರು 196 ಕೋಟಿ ಹಾನಿಯಾಗಿದೆ.

ಅತಿಯಾದ ಮಳೆ ಹಾಗೂ ನೆರೆ ಹೊಡೆತಕ್ಕೆ ಸಾವಿರಾರು ತೋಟಗಾರಿಕೆ ಬೆಳೆಗಾರರು ಬಹುತೇಕ ಬೆಳೆ ಕಳೆದುಕೊಂಡಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಸ್ಥಿತಿ ಅವರದ್ದು. ಕೆಲವು ಕಡೆ ಹಸಿಮೆಣಸಿನ ಕಾಯಿ ಕೊಚ್ಚಿಕೊಂಡು ಹೋಗಿದೆ. ರಾಮದುರ್ಗ, ಬೆಳಗಾವಿ, ಗೋಕಾಕ, ಸವದತ್ತಿ ಸೇರಿದಂತೆ ಅನೇಕ ಕಡೆಗಳಲ್ಲಿ ಬಾಳೆ ಭೂಮಿಗೆ ಬಿದ್ದಿದೆ. ಈರುಳ್ಳಿ ಮತ್ತು ಆಲೂಗಡ್ಡೆ ನೀರು ಪಾಲಾಗಿವೆ.

ನೆರೆ ಹಾವಳಿಯಿಂದ ಹೆಚ್ಚು ಹಾನಿಯಾಗಿದ್ದು ತರಕಾರಿ ಬೆಳೆಗೆ. ಜಿಲ್ಲೆಯಲ್ಲಿ ಸುಮಾರು 10 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತರಕಾರಿ ಬೆಳೆಗಳಿದ್ದವು. ಅದರಲ್ಲಿ ಸುಮಾರು ನಾಲ್ಕು ಸಾವಿರ ಹೆಕ್ಟೇರ್‌ಗೂ ಹೆಚ್ಚು ತರಕಾರಿ ಬೆಳೆ ಹಾಳಾಗಿವೆ. ಪ್ರವಾಹದಿಂದ ಯಾವ ಬೆಳೆಯೂ ಪಾರಾಗಿಲ್ಲ. ಬದನೆ, ಕೋಸುಗಡ್ಡೆ, ಟೊಮಾಟೊ, ಹಸಿ ಮೆಣಸಿನಕಾಯಿ. ಸೊಪ್ಪು, ಸವತಿಕಾಯಿ, ಬೆಂಡೆಕಾಯಿ, ಬೀನ್ಸ್‌, ಹೀರೇಕಾಯಿ, ಗೆಣಸು, ಹಾಗಲಕಾಯಿ ಬೆಳೆಗಳು ನೀರಿನ ಹೊಡೆತಕ್ಕೆ ನಾಶವಾಗಿವೆ.

ಮೊದಲಿಂದಲೂ ತರಕಾರಿ ಬೆಳೆಗೆ ಹೆಸರಾಗಿರುವ ಬೆಳಗಾವಿ ತಾಲೂಕು ಆಲೂಗಡ್ಡೆ ಬೆಳೆಗೆ ಮುಂಚೂಣಿಯಲ್ಲಿದೆ. ಇಲ್ಲಿ ಧಾರಾಕಾರ ಮಳೆ ಹಾಗೂ ಪ್ರವಾಹದಿಂದ ರೈತರು ಅಪಾರ ನಷ್ಟ ಅನುಭವಿಸಿದ್ದಾರೆ. ಒಟ್ಟು 1170 ಹೆಕ್ಟೇರ್‌ ಪ್ರದೇಶದ ಅಲೂಗಡ್ಡೆ ಬೆಳೆ ಪ್ರವಾಹಕ್ಕೆ ತುತ್ತಾಗಿದೆ.

Advertisement

ರಾಮದುರ್ಗ (1275 ಹೆಕ್ಟೇರ್‌) ಹಾಗೂ ಸವದತ್ತಿಯಲ್ಲಿ (1125 ಹೆ.) ಅತೀ ಹೆಚ್ಚಿನ ಈರುಳ್ಳಿ ಬೆಳೆ ಹಾಳಾಗಿದ್ದರೆ ಕಿತ್ತೂರು (125 ಹೆ.) ಹಾಗೂ ಬೆಳಗಾವಿಯಲ್ಲಿ (1170 ಹೆ.) ಅಲೂಗಡ್ಡೆ ಬೆಳೆಗಾರರು ತೀವ್ರ ಸಂಕಷ್ಟ ಅನುಭವಿಸಿದ್ದಾರೆ.

ನದಿ ದಡದ ಬಳಿಯೇ ಇರುವುದರಿಂದ ಜಲಾಶಯದಿಂದ ನೀರು ಬರುತ್ತದೆ ಎಂದು ನಿರೀಕ್ಷೆ ಮಾಡಿದ್ದೆವು. ಆದರೆ ಈ ರೀತಿಯ ಅನಾಹುತ ಮಾಡುತ್ತದೆ ಎಂದು ಕನಸಿನಲ್ಲಿಯೂ ಊಹೆ ಮಾಡಿರಲಿಲ್ಲ. ಒಮ್ಮೆಲೇ ಬಂದ ನೀರು ಎಲ್ಲವನ್ನೂ ನಾಶ ಮಾಡಿದೆ. ಹೇಳಿಕೊಳ್ಳಲು ಏನೂ ಉಳಿದಿಲ್ಲ ಎಂದು ರಾಮದುರ್ಗ ತಾಲೂಕಿನ ರೈತ ಬಸವರಾಜ ಹೂಗಾರ ನೋವಿನ ಮಾತು.

ಎರಡು ಎಕರೆ ಪ್ರದೇಶದಲ್ಲಿ ಬಾಳೆ ಬೆಳೆದಿದ್ದೆ. ಪೀಕು ಕೂಡ ಬಹಳ ಚೆನ್ನಾಗಿಯೇ ಇತ್ತು. ಕೆಲವೇ ದಿನಗಳಲ್ಲಿ ಗೊನೆಗಳನ್ನು ಕಟಾವು ಮಾಡಲು ತಯಾರು ಮಾಡಿಕೊಂಡು ಪೂಜೆ ಸಹ ಮಾಡಿದ್ದೆವು. ಆದರೆ ಒಮ್ಮೆಲೇ ಬಂದ ನೀರು ಎಲ್ಲವನ್ನೂ ಹಾಳು ಮಾಡಿತು. ಕಡಿಮೆ ಎಂದರೂ ಮೂರು ಲಕ್ಷ ಹಾನಿಯಾಗಿದೆ. ಇದನ್ನು ಯಾರು ಕೊಡುತ್ತಾರೆ ಹೇಳಿ ಎಂದು ದೊಡ್ಡ ಹಂಪಿಹೊಳಿ ಗ್ರಾಮದ ಭೀಮಪ್ಪ ತಮ್ಮ ಕಷ್ಟ ಹೇಳಿಕೊಳ್ಳುತ್ತಾರೆ.

ಇನ್ನೂ ಕೆಲವು ಕಡೆ ಬೆಳೆಗಳು ನೀರಿನಲ್ಲಿವೆ. ಈಗಾಗಲೇ ಜಂಟಿ ಸಮೀಕ್ಷೆ ಕಾರ್ಯ ನಡೆದಿದ್ದು ಅದು ಪೂರ್ಣಗೊಳ್ಳಲು ಸ್ವಲ್ಪ ಸಮಯಬೇಕು. ಅದೇ ರೀತಿ ಬಹಳಷ್ಟು ಹಾನಿಗೀಡಾಗಿರುವ ರೈತರ ಸ್ಥಿತಿ ಮೊದಲಿನ ದಾರಿಗೆ ಬರಲು ಇನ್ನೂ ಕಾಲಾವಕಾಶ ಬೇಕಾಗುತ್ತದೆ ಎಂಬುದು ಕೃಷಿ ಇಲಾಖೆ ಅದಿಕಾರಿಗಳ ಹೇಳಿಕೆ.

 

•ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next