Advertisement

ಬೆಳೆ ಪರಿಹಾರ ದುರ್ಬಳಕೆ ಕೇಸ್‌ ಸಿಒಡಿಗೆ ಹಸ್ತಾಂತರ

04:30 PM Feb 05, 2021 | Team Udayavani |

ಸಿಂಧನೂರ:ಬರೋಬ್ಬರಿ 2.38 ಕೋಟಿ ರೂ. ಬರೋಬ್ಬರಿ 2.38 ಕೋಟಿ ರೂ.ಮೊತ್ತದ ಬೆಳೆ ಪರಿಹಾರ ದುರ್ಬಳಕೆ ಪ್ರಕರಣವನ್ನು ಇಲ್ಲಿನ ಶಹರ ಪೊಲೀಸ್‌ ಠಾಣೆ ಪೊಲೀಸರು ಸಿಒಡಿಗೆ ವರ್ಗಾಯಿಸಲು ಸಿದ್ಧತೆ ನಡೆಸಿದ್ದು, ಪ್ರಕರಣ ಹೊಸ ತಿರುವು ಪಡೆದಿದೆ. ಒಂದು ಕೋಟಿ ರೂ.ಗೂ ಹೆಚ್ಚಿನ ಆರ್ಥಿಕ ಅಪರಾಧ ಪ್ರಕರಣಗಳ ತನಿಖೆ ತಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ವಿಶೇಷ ತನಿಖಾ ದಳಕ್ಕೆ ವಹಿಸಲು ಮುಂದಾಗಿದ್ದಾರೆ. ಜ.30ರಂದೇ ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ಸಹಾಯಕ ಆಯುಕ್ತ ರಾಜಶೇಖರ ಡಂಬಳ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಲಾಗಿತ್ತು. ಐದು ದಿನಗಳ ಬಳಿಕ ಪೊಲೀಸರು ತಮ್ಮ ವ್ಯಾಪ್ತಿಯಿಂದ ಕಡತವನ್ನು ಸಿಒಡಿಗೆ ಹಸ್ತಾಂತರಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

Advertisement

ಬಿಡುಗಡೆಯಾಗಿದ್ದ ಪರಿಹಾರ ದೊಡ್ಡದು: ಅಕಾಲಿಕ ಮಳೆಗೆ ತಾಲೂಕಿನ 63 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯನ್ನು ಗುರುತಿಸಲಾಗಿತ್ತು. ಸರ್ಕಾರ ತಾಲೂಕಿಗೆ 63 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ, ಪ್ರತಿ ಎಕರೆಗೆ 10 ಸಾವಿರ ರೂ.ನಂತೆ ಪರಿಹಾರ ನೀಡಲು ಸೂಚಿಸಿತ್ತು. 30 ಸಾವಿರ ಫಲಾನುಭವಿಗಳನ್ನು ಅಂದಾಜಿಸಲಾಗಿತ್ತು. ಕೇಂದ್ರ ಸರ್ಕಾರ ಪ್ರಕೃತಿ ವಿಕೋಪ ಪರಿಹಾರ ನಿಧಿ ಬಳಕೆ ಮಾರ್ಗಸೂಚಿ ಪ್ರಕಾರವೇ ಈ ಮೊತ್ತವನ್ನು ವಿನಿಯೋಗಿಸಬೇಕಾದ ಸಂದರ್ಭದಲ್ಲಿ ಎಡವಟ್ಟುಗಳಾಗಿವೆ.

ಅಂದಿನ ತಹಸೀಲ್ದಾರ್‌ ಗಂಗಪ್ಪ ಅವರು, ಸದ್ಯ ಕೊಪ್ಪಳದ ಯೋಜನಾ ನಿರ್ದೇಶಕರಾಗಿದ್ದಾರೆ. ಅವರ ಮೇಲೆ ಕೇಸ್‌ ದಾಖಲಿಸಲು ಸೂಚಿಸಿದ ಬಳಿಕ ಪ್ರಕರಣ ವಿಸ್ತರಿಸಿಕೊಳ್ಳುವ ಮುನ್ಸೂಚನೆ ಕಾಣಿಸಿದೆ. ಆಯಾ ಗ್ರಾಮದ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು ಕೂಡ ಬಲೆಗೆ ಬೀಳುವ ಸಾಧ್ಯತೆಯಿದ್ದು, ದೊಡ್ಡ ಪ್ರಮಾಣದಲ್ಲಿ ತನಿಖೆ ಕೈಗೊಳ್ಳಬೇಕಿರುವುದರಿಂದ ಸಿಒಡಿ ಮೊರೆ ಹೋಗಲು ನಿರ್ಧರಿಸಲಾಗಿದೆ.

ಸಾವಿರದಿಂದ ಸರ್ರನೇ ಏರಿದ ಮೊತ್ತ: ಆರಂಭದಲ್ಲಿ ಲಿಂಗಸುಗೂರು ಸಹಾಯಕ ಆಯುಕ್ತರು ಕೇವಲ 25 ಸಾವಿರ ರೂ.ನಷ್ಟು ಮೊತ್ತವನ್ನು ಮಾತ್ರ ನಮೂದಿಸಿ ದೂರು ಸಲ್ಲಿಸಿದ್ದರು ಎನ್ನಲಾಗಿದೆ. ಕೆಎಎಸ್‌ ದರ್ಜೆಯ ಅಧಿ ಕಾರಿಯೊಬ್ಬರ ಮೇಲೆ ಅತಿ ಸಣ್ಣ ಮೊತ್ತ ನಮೂದಿಸಿ ನೀಡಿದ್ದ ದೂರನ್ನು ಆರಂಭದಲ್ಲಿ ತಿರಸ್ಕರಿಸಲಾಗಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯೇ, ಸ್ಪಷ್ಟವಾಗಿ ಸರಿಯಾದ ದೂರನ್ನು ನೀಡಲು ತಾಕೀತು ಮಾಡಿದ ಮೇಲೆ 2ನೇ ಹಂತದಲ್ಲಿ 2.38 ಕೋಟಿ ರೂ.ನಷ್ಟು ಅವ್ಯವಹಾರವನ್ನು ಉಲ್ಲೇಖಿಸಲಾಗಿದೆ. ದಿಢೀರ್‌ ಸಾವಿರ ರೂ.ಲೆಕ್ಕದಲ್ಲಿದ್ದ ಅವ್ಯವಹಾರದ ಅಂದಾಜು ಕೋಟಿ ರೂ.ಗಳ ಲೆಕ್ಕದಲ್ಲಿ ಏರಿಕೆಯಾಗಿದ್ದರಿಂದ ತನಿಖೆ ಕೈಗೊಂಡಾಗ ಇದರ ಪ್ರಮಾಣ ಹೆಚ್ಚಳವಾಗಬಹುದು ಎನ್ನುತ್ತಾರೆ ಹೆಸರುಹೇಳಲಿಚ್ಛಿಸದ ಅಧಿಕಾರಿಗಳು.

ಆಗ ಪರಿಹಾರ ಮ್ಯಾನುವಲ್‌ ಇತ್ತು!
ಬೆಳೆ ಪರಿಹಾರ ತಂತ್ರಾಂಶವನ್ನು ಬಳಸಿಕೊಂಡು 2016ರಿಂದ ರಾಜ್ಯದಲ್ಲಿ ಪರಿಹಾರವನ್ನು ನೇರವಾಗಿ ಖಾತೆಗೆ ವರ್ಗಾಯಿಸಲಾಗುತ್ತಿದೆ. ಆದರೆ, ತಾಲೂಕಿನಲ್ಲಿ ಅವ್ಯವಹಾರ ನಡೆದಿದೆ ಎಂದು ಹೇಳಲಾದ ಕಾಲದಲ್ಲಿ ಮ್ಯಾನುವಲ್‌ ವ್ಯವಸ್ಥೆ ಇತ್ತು. ಆಗ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು ಸ್ಥಳ ಪರಿಶೀಲನೆ ನಡೆಸಿ, ವರದಿ ನೀಡುತ್ತಿದ್ದರು. ಆ ಬಳಿಕ ಆರ್‌ಟಿಜಿಎಸ್‌ ಮೂಲಕ ಪರಿಹಾರವನ್ನು ವರ್ಗಾಯಿಸಲಾಗಿದೆ. ಒಬ್ಬರಿಗೆ ಹಲವು ಬಾರಿ, 5 ಎಕರೆಗಿಂತ ಮೇಲ್ಪಟ್ಟ ಜಮೀನಿಗೆ, ಬೆಳೆ ಇಲ್ಲದ ಜಮೀನುಗಳಿಗೆ ಪರಿಹಾರ ಪಾವತಿಯಾಗಿದ್ದು, ಪ್ರಕರಣ ಹಲವರನ್ನು ಸುತ್ತಿಕೊಳ್ಳುವ ಸಾಧ್ಯತೆ ಇದೆ.

Advertisement

ಸಿಂಧನೂರಿನಲ್ಲಿ ತಹಸೀಲ್ದಾರ್‌ ಮೇಲೆ ದಾಖಲಾದ ಕೇಸ್‌ನ್ನು ಸಿಒಡಿಗೆ ವರ್ಗಾಯಿಸಲು ಸಿದ್ಧತೆ ನಡೆಸಲಾಗಿದೆ. ದೊಡ್ಡ ಮೊತ್ತದ ಪ್ರಕರಣವಾದ ಹಿನ್ನೆಲೆಯಲ್ಲಿ ಅದನ್ನು ಸಿಒಡಿಗೆ ಕೊಡಲಾಗುತ್ತಿದ್ದು, ಏನೇನಾಗಿದೆ ಎಂಬುದು ವಿಚಾರಣೆ ಬಳಿಕವಷ್ಟೇ ಗೊತ್ತಾಗಲಿದೆ.
ರಿಬಾಬು, ಹೆಚ್ಚುವರಿ ಪೊಲೀಸ್‌
ವರಿಷ್ಠಾ ಧಿಕಾರಿ, ರಾಯಚೂರು

*ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next