Advertisement
ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ವಿಜಯಪುರ ಜಿಲ್ಲೆಯಲ್ಲಿ ಬೆಳೆ ವಿಮೆ ಹೆಸರಿನಲ್ಲಿ ಭಾರಿ ಪ್ರಮಾಣದಲ್ಲಿ ರೈತರನ್ನು ವಂಚಿಸುವ ಕೆಲಸ ನಡೆದಿದೆ. ಬೆಳೆ ಹಾನಿಯಾದರೂ ವಾಸ್ತವಿಕ ಸಮೀಕ್ಷೆ ನಡೆಸದೆ ಫಲಾನುಭವಿ ಬಾಧಿತ ರೈತರನ್ನು ವಂಚಿಸುವಲ್ಲಿ ಕಂಪನಿಗಳೊಂದಿಗೆ ಅಧಿಕಾರಿಗಳು ಶಾಮೀಲಾಗಿದ್ದಾರೆ. ಇದರಲ್ಲಿ ಸರ್ಕಾರದ ನಿರ್ಲಕ್ಷವೂ ಸೇರಿದೆ ಎಂದು ಹರಿಹಾಯ್ದರು.
Related Articles
Advertisement
ರೈತರನ್ನು ವಂಚಿಸುವ ಉದ್ದೇಶದಿಂಧ ಅಧಿಕಾರಿಗಳು ವಿಮೆ ಕಂಪನಿಗಳೊಂದಿಗೆ ಕಛೇರಿಯಲ್ಲೇ ಕುಳಿತು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಸರ್ಕಾರ ವಿಜಯಪುರ ಜಿಲ್ಲೆಯನ್ನು ಭೀಕರ ಬರ ಪೀಡಿತವೆಂದು ಘೋಷಿಸುವಲ್ಲಿ ವಿಳಂಬ ಮಾಡಿತು. ಇದರಿಂದ ಹಿಂಗಾರು ಹಂಗಾಮಿಗೆ ಭೂಮಿ ಸಿದ್ಧತೆ ಮಾಡಿಕೊಂಡ ರೈತರು ಮುಂಗಾರಿನಲ್ಲಿ ಹಾಳಾದ ಬೆಳೇಯನ್ನು ಹರಗಿ ತೆಗೆದಿದ್ದರು.
ಈ ಹಂತದಲ್ಲಿ ಸ್ಥಳಕ್ಕೆ ಬಂದ ಅಧಿಕಾರಿಗಳು ನಿಮ್ಮ ಜಮೀನಿನಲ್ಲಿ ವಿಮೆ ಸಂದರ್ಭದಲ್ಲಿ ನಮೂದಿಸಿದ ಬೆಳೆ ಇಲ್ಲ. ಹೀಗಾಗಿ ನೀವು ಸುಳ್ಳು ಮಾಹಿತಿ ನೀಡಿದ್ದೀರಿ ಎಂದು ರೈತರನ್ನೇ ವಂಚಕರಂತೆ ಬಿಂಬಿಸುವ ಕೆಲಸ ಮಾಡಿದ್ದಾರೆ. ವಾಸ್ತವಿಕವಾಗಿ ಲಕ್ಷಾಂತರ ರೂ. ಪರಿಹಾರ ಬರಬೇಕಿದ್ದ ರೈತರಿಗೆ ಬಿಡಿಗಾಸು ನೀಡಿಲ್ಲ ಎಂದು ಕಿಡಿ ಕಾರಿದರು.
ವಿಮೆ ಭರಿಸಿಕೊಳ್ಳುವ ಸಂದರ್ಭದಲ್ಲಿ ಹಳ್ಳಿಹಳ್ಳಿಗೆ ಬಂದು ಪ್ರಚಾರ ಮಾಡಿ ರೈತರನ್ನು ಮರುಳು ಮಾಡುವ ಅಧಿಕಾರಿಗಳು, ಬೆಳೆ ಹಾನಿಯಾದ ಸಂದರ್ಭದಲ್ಲಿ ವಿಮಾ ಕಂಪನಿಗಳ ಪ್ರತಿನಿಧಿಗಳನ್ನು ಕರೆಸಿ ಸಮೀಕ್ಷೆ ಮಾಡುತ್ತಿಲ್ಲ. ಇದರಿಂದ ಸಂಕಷ್ಟದ ಸಂದರ್ಭದಲ್ಲಿ ಬೆಳೆ ಬರುತ್ತದೆ ಎಂದು ರೈತ ಭರಿಸಿದ ಮೊತ್ತಕ್ಕೂ ಮೋಸವಾಗಿದೆ ಎಂದು ವಾಗ್ದಾಳಿ ನಡೆಸಿದರು.
ವಿಜಯಪುರ ಜಿಲ್ಲೆಯನ್ನು ಸರ್ಕಾಋವೇ ಅಧಿಕೃತವಾಗಿ ಬರ ಪೀಡಿತ ಎಂದು ಘೋಷಿಸಿ, 413 ಕೋಟಿ ರೂ. ಘೋಷಣೆ ಮಾಡಿದರೂ, ಅಧಿಕಾರಿಗಳು ನೀಡಿದ ವರದಿಯಂತೆ ಜಿಲ್ಲೆಗೆ ಬಂದಿದ್ದು ಮಾತ್ರ ಕೇವಲ 131 ಕೋಟಿ ರೂ. ಆದರೆ ರೈತರಿಂದ ಭರಿಸಿಕೊಂಡ ಬೆಳೆ ವಿಮೆ ಮೊತ್ತವೇ 147 ಕೋಟಿ ರೂ. ಇದೆ ಎಂದು ವಿವರಿಸಿದರು.
ಕೂಡಲೇ ಜಿಲ್ಲೆಯಲ್ಲಿ ಬೆಳೇ ವಿಮೆ ವಿಷಯದಲ್ಲಿ ನೂರಾರು ಕೋಟಿ ರೂ. ಅವ್ಯವಹಾರ ನಡೆದಿದೆ. ರೈತರನ್ನು ವಂಚಿಸಿ ಕಂಪನಿಗಳಿಗೆ ಲಾಭ ಮಾಡಿಕೊಡುವ ದುರುದ್ದೇಶದಿಂದ ಅಧಿಕಾರಿಗಳೇ ಶಾಮೀಲಾಗಿ ಸುಳ್ಳು ವರದಿ ನೀಡಿದ್ದಾರೆ. ಈ ಕುರಿತು ಸಮಗ್ರ ತನಿಖೆ ನಡೆಸಿ, ವಂಚಿತ ರೈತರಿಗೆ ಪರಿಹಾರ ಕೊಡಿಸಬೇಕು ಎಂದು ಆಗ್ರಹಿಸಿದರು.
ಈ ಕುರಿತು ಜಿಲ್ಲಾಡಳಿತಕ್ಕೆ ಈಗಾಗಲೇ ಮನವಿ ಸಲ್ಲಿಸಿದ್ದರೂ ಪ್ರಯೋಜವನಾಗಿಲ್ಲ. ಜಿಲ್ಲೆಯ ರೈತರಿಗೆ ಇಷ್ಟೊಂದು ಪ್ರಮಾಣದಲ್ಲಿ ವಂಚನೆಯಾಗಿದ್ದರೂ ಜಿಲ್ಲೆಯ ಯಾವೊಬ್ಬ ಜನಪ್ರತಿನಿಧಿಯೂ ಈ ಬಗ್ಗೆ ಧ್ವನಿ ಎತ್ತಿಲ್ಲ. ಹೀಗಾಗಿ ಇಡೀ ಬೆಳೆ ವಿಮೆ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿ ಜುಲೈ 23 ರಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಛೇರಿಗೆ ಮುತ್ತಿಗೆ ಹಾಕಿ, ಬೀಜ ಜಡಿಯುವ ಹೋರಾಟ ಹಮ್ಮಿಕೊಂಡಿರುವುದಾಗಿ ಎಚ್ಚರಿಸಿದರು.
ಇದಕ್ಕೂ ಸರ್ಕಾರ, ಜಿಲ್ಲಾಡಳಿತ ಹಾಗೂ ಅಧಿಕಾರಿಗಳು ಸ್ಪಂದಿಸದಿದ್ದಲ್ಲಿ ಇಡೀ ಹಗರಣದ ಅವ್ಯವಹಾರದ ಕುರಿತು ತನಿಖೇ ನಡೆಸುವ ಕುರಿತು ನ್ಯಾಯಾಯಲದ ಮೊರೆ ಹೋಗುವ ಅಥವಾ ಲೋಕಾಯುಕ್ತರಿಗೆ ದೂರು ನೀಡಲು ಯೋಜಿಸಿದ್ಧೇವೆ ಎಂದರು.
ಸಂಘಟನೆಯ ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ ಇತರರು ಉಪಸ್ಥಿತರಿದ್ದರು.