Advertisement

ಕ್ರೋಢ ಬೈಲೂರು –ಮರತ್ತೂರು: ಈಡೇರದ ಸೇತುವೆ ಬೇಡಿಕೆ

12:42 AM May 15, 2019 | Team Udayavani |

ಅಂಪಾರು: ಮರತ್ತೂರುನಿಂದ ಕ್ರೋಢ ಬೈಲೂರಿಗೆ ಸಂಪರ್ಕ ಕಲ್ಪಿಸುವ ಸೇತುವೆ ಬೇಡಿಕೆ 4 ದಶಕಗಳಿಂದ ಈಡೇರಿಲ್ಲ. ಮೊಳಹಳ್ಳಿ ಗ್ರಾ.ಪಂ. ವ್ಯಾಪ್ತಿಯ ವಾರಾಹಿ ನದಿಗೆ ಸೇತುವೆ ನಿರ್ಮಿಸಿದರೆ ಮರತ್ತೂರು ಹಾಗೂ ಕ್ರೋಢಬೈಲೂರು ನಡುವೆ ಸಂಪರ್ಕ ಸಾಧ್ಯವಾಗಲಿದೆ. ಇದರಿಂದ ಎರಡೂ ಭಾಗಗಳಲ್ಲಿ ನೆಲೆಸಿರುವ ನೂರಾರು ಕುಟುಂಬಗಳಿಗೆ ಅನುಕೂಲವಾಗಲಿದೆ.

Advertisement

ಈಗ ಬಿದ್ಕಲ್ಕಟ್ಟೆ, ಮೊಳಹಳ್ಳಿ, ಗಾವಳಿ ಭಾಗದಿಂದ ಶಂಕರನಾರಾಯಣಕ್ಕೆ ಹೋಗುವ ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವವರು ಸುತ್ತು ಬಳಸಿ ಹೋಗುತ್ತಿದ್ದಾರೆ. ಸೇತುವೆ ಬೇಡಿಕೆ ಈಡೇರಿದಲ್ಲಿ, ಬಿದ್ಕಲ್ಕಟ್ಟೆ-ಅಂಪಾರು ಮಧ್ಯೆ ಹತ್ತಿರದ ಮಾರ್ಗ ಇದಾಗಲಿದೆ.

ಸೇತುವೆಯಾದರೆ ಉಡುಪಿ, ಬಾರಕೂರು ಕಡೆಯಿಂದ ಕೊಲ್ಲೂರು ದೇವಸ್ಥಾನಕ್ಕೆ ಬರುವ ಯಾತ್ರಾರ್ಥಿಗಳಿಗೂ ಪ್ರಯೋಜನವಾಗಲಿದೆ. ಬಾರಕೂರು, ಬಿದ್ಕಲ್ಕಟ್ಟೆ ಮಾರ್ಗವಾಗಿ ಅಂಪಾರು, ನೇರಳಕಟ್ಟೆಯಾಗಿ ಕೊಲ್ಲೂರಿಗೆ ಸಂಚರಿಸಬಹುದು.

ಊರ ಅಭಿವೃದ್ಧಿಗೂ ಸಹಕಾರಿ

ತೀರಾ ಗ್ರಾಮೀಣ ಪ್ರದೇಶವಾಗಿರುವ ಮರತ್ತೂರು ಭಾಗ ಕೂಡ ಅಭಿವೃದ್ಧಿಯಾಗಲಿದೆ. ಬಿದ್ಕಲ್ಕಟ್ಟೆ – ಅಂಪಾರು ಈ ಎರಡು ಊರುಗಳಿಗೆ ಮರತ್ತೂರು ಕೊಂಡಿಯಾಗಲಿದ್ದು, ಸಂಚಾರ, ಸಾಗಾಟಕ್ಕೆಲ್ಲ ಅನುಕೂಲವಾಗಲಿದೆ.

Advertisement

9 ಕಿ.ಮೀ. ಹತ್ತಿರ

ಬಿದ್ಕಲ್ಕಟ್ಟೆಯಿಂದ ಈಗ ಅಂಪಾರಿಗೆ ಸುತ್ತು ಬಳಸಿ ತೆರಳುವುದರಿಂದ 19 ಕಿ.ಮೀ. ದೂರವಿದ್ದು, ಮರತ್ತೂರು- ಕ್ರೋಢಬೈಲೂರು ಸೇತುವೆ ಯಾದರೆ 9 ಕಿ.ಮೀ. ಹತ್ತಿರವಾಗಲಿದೆ. ಬಸ್‌ ಸಂಚಾರ ಆರಂಭಿ ಸಿದರೆ ಎಲ್ಲರಿಗೂ ಬಹಳಷ್ಟು ಪ್ರಯೋಜನವಾಗಲಿದೆ ಎನ್ನುವುದು ಇಲ್ಲಿನವರ ಅಭಿಪ್ರಾಯವಾಗಿದೆ.

ಈ ವರ್ಷವಾದರೂ ಈಡೇರಲಿ

ಹಲವು ವರ್ಷಗಳಿಂದ ಈ ಬಗ್ಗೆ ಸಂಬಂಧಪಟ್ಟ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರಿಗೆ ಮನವಿ ಮಾಡಿದ್ದೇವೆ. ಈ ಬಾರಿಯಾದರೂ ನಮ್ಮ ಬಹುದಿನಗಳ ಬೇಡಿಕೆ ಈಡೇರಲಿ. ವಾರಾಹಿ ನದಿಗೆ ಮರತ್ತೂರಿನಿಂದ ಕ್ರೋಢಬೈಲೂರಿಗೆ ಸೇತುವೆ ನಿರ್ಮಿಸಿದರೆ ಸಾಕಷ್ಟು ಪ್ರಯೋಜನವಾಗಲಿದೆ. ಇದರಿಂದ ಬಿದ್ಕಲ್ಕಟ್ಟೆಯಿಂದ ಅಂಪಾರಿಗೆ ಸಂಪರ್ಕ ಸಾಧ್ಯವಾಗಲಿದೆ.
– ಮರತ್ತೂರು, ಕ್ರೋಢಬೈಲೂರಿನ ಸ್ಥಳೀಯರು
ಮನವಿ ಸಲ್ಲಿಸಲಿ

ಈ ಬಗ್ಗೆ ಅಲ್ಲಿನ ಜನರು ಮನವಿ ಸಲ್ಲಿಸಿದರೆ ಪರಿಶೀಲಿಸಿ ಯೋಜನೆ ಸಿದ್ಧಪಡಿಸಲಾಗುವುದು. ಜನ ಪ್ರತಿನಿಧಿಗಳ ಮೂಲಕ ಮಂಜೂರಾತಿ ಪಡೆದು ಸೇತುವೆ ಬೇಡಿಕೆ ಈಡೇರಿಕೆಗೆ ಪ್ರಯತ್ನಿಸಲಾಗುವುದು.
– ದುರ್ಗದಾಸ್‌,ತಾ.ಪಂ. ಸಹಾಯಕ ಕಾರ್ಯಪಾಲಕ ಎಂಜಿನಿಯರ್‌
Advertisement

Udayavani is now on Telegram. Click here to join our channel and stay updated with the latest news.

Next