ಸಿರುಗುಪ್ಪ: ತಾಲೂಕಿನಲ್ಲಿ ಸುಮಾರು 40 ಕಿಮೀ ದೂರ ಹರಿಯುವ ತುಂಗಭದ್ರಾ ನದಿಯಲ್ಲಿ ಬೇಸಿಗೆಯಲ್ಲಿ ನೀರು ಕಡಿಮೆ ಆಗುತ್ತಿದ್ದಂತೆ ಮೊಸಳೆಗಳು ಕಾಣಿಸಿಕೊಳ್ಳುತ್ತಿದ್ದು, ನದಿ ತೀರದ ಜನರಿಗೆ ಆತಂಕ ಶುರುವಾಗುತ್ತದೆ.
ತಾಲೂಕಿನಲ್ಲಿ ತುಂಗಭದ್ರ ನದಿ ದಂಡೆಯಲ್ಲಿರುವ ಎಂ.ಸೂಗೂರು, ಮಣ್ಣೂರು, ನಡಿವಿ, ರುದ್ರಪಾದ, ನಿಟ್ಟೂರು, ಹೆರಕಲ್ಲು, ಕೆಂಚನಗುಡ್ಡ, ದೇಶನೂರು, ಬಾಗೇವಾಡಿ, ಚಿಕ್ಕಬಳ್ಳಾರಿ, ಹೊನ್ನಾರಹಳ್ಳಿ, 25-ಹಳೇಕೋಟೆ, ಶ್ರೀಧರಗಡೆ, ಹಚ್ಚೊಳ್ಳಿ, ಮಾಟೂರು, ಚಳ್ಳೆಕೂಡ್ಲೂರು ಗ್ರಾಮಸ್ಥರು ನಿತ್ಯವೂ ಆತಂಕದಲ್ಲಿಯೇ ಓಡಾಡುವಂತಾಗಿದೆ.
ನೆಮ್ಮದಿಯಿಂದ ಹೊಲಗದ್ದೆಗಳಿಗೆ ತೆರಳುವಂತಿಲ್ಲ. ನದಿಯಲ್ಲಿ ದನಕರುಗಳಿಗೆ ನೀರು ಕುಡಿಸುವಂತಿಲ್ಲ ಮತ್ತು ಅವುಗಳಿಗೆ ಮೈ ತೊಳೆಯುವಂತಿಲ್ಲ, ಅಲ್ಲದೆ ಹೊಲದಲ್ಲಿ ನೆಮ್ಮದಿಯಾಗಿ ಕೆಲಸ ಮಾಡುವಂತಿಲ್ಲ. ರೈತರು ಜೀವ ಭಯದ ನೆರಳಿನಲ್ಲಿಯೇ ತಮ್ಮ ದಿನನಿತ್ಯದ ಕೆಲಸ ಕಾರ್ಯಗಳನ್ನು ಮಾಡುವಂತಾಗಿದೆ. ತುಂಗಭದ್ರಾ ನದಿಯಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ನದಿ ತೀರದಲ್ಲಿ ಮೊಸಳೆಗಳು ಕಂಡು ಬರುತ್ತಿದ್ದು, ಜಾನುವಾರುಗಳ ಬೇಟೆಗೆ ಹೊಂಚು ಹಾಕಿ ಮೊಸಳೆಗಳನ್ನು ಕಾಯುವುದು ಸಾಮಾನ್ಯವಾಗಿದೆ.
ಆಹಾರ ಅರಸಿ ನದಿ ದಡಕ್ಕೆ ಬರುವ ಮೊಸಳೆಗಳು ಹೊಲಗದ್ದೆಗಳಲ್ಲಿಯೂ ಬರುತ್ತಿದ್ದು, ಇದರಿಂದಾಗಿ ತಾಲೂಕಿನ ನದಿ ತೀರದ ಗ್ರಾಮಸ್ಥರಿಗೆ ನೆಮ್ಮದಿಯೇ ಇಲ್ಲದಂತಾಗಿದೆ. ಜನ ಜಾನುವಾರುಗಳ ಮೇಲೆ ಮೊಸಳೆಗಳು ಯಾವಾಗ ದಾಳಿ ಮಾಡುತ್ತವೆಯೋ ಎಂಬ ಭಯದಲ್ಲಿಯೇ ಬದುಕುತ್ತಿದ್ದಾರೆ. ಕಳೆದ 2 ವರ್ಷಗಳಲ್ಲಿ ಮೊಸಳೆಗಳ ದಾಳಿಗೆ ಮೂವರು ಮೃತಪಟ್ಟಿದ್ದಾರೆ.
ಮೊಸಳೆಗಳ ಕಾಟದಿಂದ ಅನೇಕಬಾರಿ ಜನ ಜಾನುವಾರುಗಳಿಗೂ ಹಾನಿಯಾಗಿದೆ. ಕಳೆದ 10 ವರ್ಷಗಳಲ್ಲಿ ತಾಲೂಕಿನಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ 500ಕ್ಕೂ ಹೆಚ್ಚು ಮೊಸಳೆಗಳಿವೆ ಎಂದು ಹೇಳಲಾಗುತ್ತಿದೆ. ನದಿ ತೀರದಲ್ಲಿ ಸಾಲು ಸಾಲಾಗಿ ಮೊಸಳೆಗಳು ಮಲಗಿಕೊಳ್ಳುವುದು ಸಾಮಾನ್ಯ ದೃಶ್ಯವಾಗಿದೆ. ಇದರಿಂದಾಗಿ ಜನರು ನದಿ ತೀರದಲ್ಲಿ ಓಡಾಡಲು ಭಯಪಡುವಂತಾಗಿದೆ. ತಾಲೂಕಿನ ದೇಶನೂರು ಗ್ರಾಮದ ನದಿ ತೀರದಲ್ಲಿರುವ ತೋಟಗಾರಿಕೆ ಇಲಾಖೆಯ ಸಸ್ಯಕ್ಷೇತ್ರದಲ್ಲಿ ಹತ್ತಾರು ಮೊಸಳೆಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದ್ದು, ಇಲ್ಲಿಯವರೆಗೆ ಇಲ್ಲಿ ಕೆಲಸ ಮಾಡುವ ಯಾವುದೇ ಕೆಲಸಗಾರರ ಮೇಲೆ ಮೊಸಳೆಗಳು ದಾಳಿ ಮಾಡಿಲ್ಲ.
ತಾಲೂಕಿನ ಹರಿಗೋಲ್ ಘಾಟ್‌ನಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿಯೊಬ್ಬರನ್ನು ಮತ್ತು ನಿಟ್ಟೂರು ಗ್ರಾಮದಲ್ಲಿ ನದಿ ಮೂಲಕ ಜಮೀನಿಗೆ ತೆರಳುತ್ತಿದ್ದ ರೈತನನ್ನು ಹಾಗೂ ಚಲ್ಲೆಕೂಡ್ಲೂರು ಗ್ರಾಮದ ಯುವಕನೊಬ್ಬನು ಮೀನು ಹಿಡಿಯಲು ನದಿಗೆ ತೆರಳಿದಾಗ ಮೊಸಳೆಗಳು ದಾಳಿ ಮಾಡಿ ಮೃತಪಟ್ಟಿದ್ದ. ತುಂಗಭದ್ರಾ ನದಿಯಲ್ಲಿರುವ ಅಪಾಯಕಾರಿ ಮೊಸಳೆಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಶಾಸಕ ಎಂ.ಎಸ್. ಸೋಮಲಿಂಗಪ್ಪ ವಿಧಾನಸಭೆಯಲ್ಲಿ ಚರ್ಚೆ ನಡೆಸಿದ್ದರು.
ಆದರೂ ತಾಲೂಕಿನ ಜನರಿಗೆ ಮೊಸಳೆಗಳ ಆತಂಕ ತಪ್ಪಿಲ್ಲ. ಮೊಸಳೆಗಳು ಯಾವ ಭಾಗದಲ್ಲಿ ಹೆಚ್ಚಿವೆ ಎನ್ನುವ ಮಾಹಿತಿ ನೀಡುವ ನಾಮಫಲಕಗಳನ್ನು ಅಳವಡಿಸುವ ಕಾರ್ಯ ನಡೆಯಬೇಕಾಗಿದೆ. ಇನ್ನಾದರೂ ಅರಣ್ಯ ಇಲಾಖೆಯವರು ಮೊಸಳೆಗಳ ಬಗ್ಗೆ ನದಿ ತೀರದ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಬೇಕಾಗಿದೆ.
ಆರ್.ಬಸವರೆಡ್ಡಿ ಕರೂರು