ವರದಿ : ಸಂದೇಶ್ ಎಸ್. ಜೈನ್
ದಾಂಡೇಲಿ: ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಶ್ವದ ಗಮನ ಸೆಳೆಯುತ್ತಿರುವ ದಾಂಡೇಲಿ ಪ್ರವಾಸೋದ್ಯಮದ ಮುಕುಟಕ್ಕೆ ವಿನೂತನ ಗರಿ ಎಂಬಂತೆ ಈಗ ಮೊಸಳೆ ಪಾರ್ಕ್ ತಲೆಯೆತ್ತಿದೆ.
ಶ್ರೀ ಕ್ಷೇತ್ರ ದಾಂಡೇಲಪ್ಪನ ಸನ್ನಿಧಿಯ ಮುಂಭಾಗದ ವಿಶಾಲ ಜಾಗದಲ್ಲಿ ಮೊಸಳೆ ಪಾರ್ಕ್ ನಿರ್ಮಾಣವಾಗಿದೆ. ಪ್ರವಾಸಿಗರಿಗೆ ಹತ್ತಿರದಿಂದ ಮೊಸಳೆ ನೋಡುವ ಅವಕಾಶ ಸಿಗಲಿದೆ. ಇಲ್ಲಿಯ ಕಾಳಿ ನದಿಯಲ್ಲಿ ಮೊಸಳೆಗಳು ಹೇರಳವಾಗಿ ಇರುವುದನ್ನು ಗಮನಿಸಿದ್ದ ಹಾಲಿ ಶಾಸಕ ಆರ್.ವಿ. ದೇಶಪಾಂಡೆಯವರು ಅಂದು ಸಿದ್ದರಾಮಯ್ಯನವರ ಸರ್ಕಾರವಿದ್ದಾಗ ಪ್ರವಾಸೋದ್ಯಮ ಸಚಿವರಾಗಿದ್ದ ಸಂದರ್ಭದಲ್ಲಿ ವಿಶೇಷ ಆಸಕ್ತಿ ವಹಿಸಿ ಮೊಸಳೆ ಪಾರ್ಕ್ ಮಂಜೂರು ಮಾಡಿಸಿದ್ದರು. ಇದೀಗ ಅದು ಉದ್ಘಾಟನೆಗೆ ದಿನಗಣನೆ ಶುರುವಾಗಿದೆ.
ಪ್ರವಾಸೋದ್ಯಮ ಇಲಾಖೆಯಿಂದ ಮಂಜೂರಾದ ಮೂರು ಕೋಟಿ ರೂಪಾಯಿ ಅನುದಾನದಲ್ಲಿ ಲೋಕೋಪಯೋಗಿ ಬಂದರು ಮತ್ತು ಜಲಸಾರಿಗೆ ಇಲಾಖೆಯ ನಿರ್ವಹಣೆಯೊಂದಿಗೆ ಗುತ್ತಿಗೆದಾರ ಜಯಶಂಕರ ಶೆಟ್ಟಿ ಹಾಗೂ ನಾರಾಯಣ ಹೆಗಡೆ ನೇತೃತ್ವದಲ್ಲಿ ಮೊಸಳೆ ಪಾರ್ಕ್ ನಿರ್ಮಾಣಗೊಂಡಿದೆ. ಹಲವಾರು ವೈವಿಧ್ಯತೆಗಳಿಂದ ಕೂಡಿರುವ ಇಲ್ಲಿಯ ಉದ್ಯಾನವನದಲ್ಲಿ ಮೊಸಳೆ ವೀಕ್ಷಿಸುವ ಮುನ್ನ ಹಸಿರು ಹುಲ್ಲಿನ ಹೊದಿಕೆಯ ಗಾರ್ಡನ್ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿ ವರ್ಣರಂಜಿತ ನೀರಿನ ಕಾರಂಜಿ, ಇನ್ನೂ ಮೊಸಳೆ, ಜಿಂಕೆ, ಜಿರಾಫೆ ಪ್ರತಿಮೆ ನಿರ್ಮಿಸಲಾಗಿದೆ.
ಮರಳಿನ ಹೊಂಡ, ಪಾಥ್ ವೇ, ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಇನ್ನಿತರ ವಿಶಿಷ್ಟ ಸೌಕರ್ಯಗಳನ್ನು ಜೋಡಿಸಲಾಗಿದೆ. ಇನ್ನೂ ಇಲ್ಲಿ ಕಾಳಿ ನದಿಯಲ್ಲಿರುವ ಮೊಸಳೆಗಳನ್ನು ಯಾವುದೇ ಭಯವಿಲ್ಲದೇ ಬಹು ಹತ್ತಿರದಿಂದ ವೀಕ್ಷಣೆ ಮಾಡಲೆಂದೇ ವೀಕ್ಷಣಾ ಗೋಪುರ ನಿರ್ಮಿಸಲಾಗಿದೆ. ಈಗಾಗಲೇ ಕಾಮಗಾರಿ ಮುಗಿದಿದ್ದು, ಸದ್ಯದಲ್ಲೇ ಹಸ್ತಾಂತರ ಪ್ರಕ್ರಿಯೆ ನಡೆಯಲಿದ್ದು, ಆನಂತರದಲ್ಲಿ ಈ ಮೊಸಳೆ ಉದ್ಯಾನವನ ಲೋಕಾರ್ಪಣೆಗೊಳ್ಳಲಿದೆ.