ಚಿಂಚೋಳಿ: ತಾಲೂಕಿನ ಕುಂಚಾವರಂ ವನ್ಯಜೀವಿ ಧಾಮ ಅರಣ್ಯಪ್ರದೇಶದಲ್ಲಿ ಬರುವ ಚಂದ್ರಂಪಳ್ಳಿ ಜಲಾಶಯದಲ್ಲಿ ನೀರಿನ ಪ್ರಮಾಣ ಅತಿ ಕಡಿಮೆ ಇರುವುದರಿಂದ ಕಳೆದೆರಡು ದಿನಗಳಿಂದ ಜಲಾಶಯ ದಡದಲ್ಲಿ ಬೃಹತ್ ಗಾತ್ರದ ಮೊಸಳೆ ಕಾಣಿಸಿಕೊಂಡಿರುವುದರಿಂದ ಗ್ರಾಮಸ್ಥರಲ್ಲಿ ಭಯದ ಭೀತಿಯನ್ನುಂಟು ಮಾಡಿದೆ.
ಕಲಬುರಗಿ ನಗರದ ಶರಣಬಸವೇಶ್ವರ ಕೆರೆಯಲ್ಲಿ ಕಳೆದ ಎಂಟು ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದ ಮೊಸಳೆಯ ಸಣ್ಣ ಮರಿಯನ್ನು ತಾಲೂಕಿನ ಚಂದ್ರಂಪಳ್ಳಿ ಜಲಾಶಯಕ್ಕೆ ತಾಲೂಕು ವಲಯ ಅರಣ್ಯಾಧಿಕಾರಿ ಆರ್.ಆರ್. ಯಾದವ ನೇತೃತ್ವದಲ್ಲಿ ಖಾಸಗಿ ವಾಹನವೊಂದರಲ್ಲಿ ಗುಪ್ತವಾಗಿ ತಂದು ಬಿಡಲಾಗಿತ್ತು. ಈಗ ಅದು ಬೃಹತ್ ಗಾತ್ರದ ಮೊಸಳೆಯಾಗಿ ಬೆಳೆದಿದೆ.
ಕಳೆದ ವರ್ಷ ಜಲಾಶಯದ ದಡದಲ್ಲಿ ಮೊಸಳೆ ಮಲಗಿರುವುದನ್ನು ದನಗಾಹಿಗಳು ನೋಡಿ ಭಯಭೀತರಾಗಿ ಗ್ರಾಮದ ಜನರಿಗೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದರು. ಆಗ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಡಂಗೂರ ಸಾರಿ ಜನರಿಗೆ ಎಚ್ಚರಿಕೆ ನೀಡಿದ್ದರು.
ಆದರೀಗ ಶುಕ್ರವಾರ ಮತ್ತು ಶನಿವಾರ ಚಂದ್ರಂಪಳ್ಳಿ ಜಲಾಶಯದ ಮಧ್ಯಭಾಗದಲ್ಲಿ ಇರುವ (ನಡುಗಡ್ಡೆಯಂತಹ) ಪ್ರದೇಶದಲ್ಲಿ ಮಲಗಿರುವ ಮೊಸಳೆ ಕಂಡು ಮತ್ತೆ ಆತಂಕ ಪಡುವಂತಾಗಿದೆ. ಚಂದ್ರಂಪಳ್ಳಿ ಗ್ರಾಮಸ್ಥರು ಹೆಚ್ಚಾಗಿ ಕೆರೆಯಲ್ಲಿ ಬಟ್ಟೆ ತೊಳೆಯಲು ಬರುತ್ತಾರೆ. ದನಕರುಗಳಿಗೆ ನೀರು ಕುಡಿಸಲು ಬರುತ್ತಾರೆ. ಕಾಡು ಪ್ರಾಣಿಗಳು ಸಂಜೆ ವೇಳೆ ನೀರು ಕುಡಿಯಲು ಬರುತ್ತವೆ. ಹೀಗಾಗಿ ಜನತೆ ಭಯಭೀತರಾಗಿದ್ದಾರೆ.
ಮೊಸಳೆ ಜಲಾಶಯದಲ್ಲಿ ಕಾಣಿಸಿಕೊಂಡಿರುವುದು ನಿಜ. ಜನರಿಗೆ ಜಲಾಶಯದ ಹತ್ತಿರ ಹೋಗದಂತೆ ತಿಳಿಸಲು ಡಂಗೂರ ಸಾರಲಾಗುವುದು. ಮೊಸಳೆ ದೊಡ್ಡದಾಗಿದೆ. ಎರಡು ವರ್ಷಗಳ ಹಿಂದೆ ಕಾಣಿಸಿಕೊಂಡಿತ್ತು. ಸದ್ಯ ನೀರಿನ ಪ್ರಮಾಣ ಕಡಿಮೆ ಇದೆ. ಹೀಗಾಗಿ ಹೊರಗೆ ಬರುತ್ತಿರಬಹುದು.
•
ಸಿದ್ಧಾರೂಢ,
ವನ್ಯಜೀವಿ ಉಪ ಸಂರಕ್ಷಣಾಧಿಕಾರಿ